ADVERTISEMENT

ಗುಣಮಟ್ಟದ ಕಾಮಗಾರಿಗೆ ಶಾಸಕ ತಾಕೀತು

​ಪ್ರಜಾವಾಣಿ ವಾರ್ತೆ
Published 4 ಜೂನ್ 2011, 6:05 IST
Last Updated 4 ಜೂನ್ 2011, 6:05 IST

ಚಳ್ಳಕೆರೆ: ಸರ್ಕಾರದ ಯೋಜನೆಗಳ ಕಾಮಗಾರಿಗಳಲ್ಲಿ ಅಧಿಕಾರಿಗಳು ಗುಣಮಟ್ಟ ಕಾಯ್ದುಕೊಂಡು ಹೋಗಬೇಕು ಎಂದು ಶಾಸಕ ತಿಪ್ಪೇಸ್ವಾಮಿ ಅಧಿಕಾರಿಗಳಿಗೆ ತಾಕೀತು ಮಾಡಿದರು.ಚಳ್ಳಕೆರೆ ಪಟ್ಟಣದ ಜಗಲೂರಜ್ಜನ ಕೆರೆ ಹೂಳೆತ್ತುವ ಕಾಮಗಾರಿಗೆ ಈಚೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಜ್ಯದಲ್ಲಿ ಕೆರೆಗಳ ಅಭಿವೃದ್ಧಿಗೆ ಹಾಗೂ ಹೂಳೆತ್ತುವ ಕಾರ್ಯಕ್ಕೆ ಮುಖ್ಯಮಂತ್ರಿಬಿ.ಎಸ್. ಯಡಿಯೂರಪ್ಪ ಒಂದು ಸಾವಿರ ಕೋಟಿ ಮೀಸಲಿಟ್ಟಿದ್ದಾರೆ. ಇಂತಹ ಯೋಜನೆ ಅನುದಾನದಲ್ಲಿ ಮಾಡುವ ಕಾಮಗಾರಿಗಳು ಜನತೆಗೆ ಉಪಯುಕ್ತ ಆಗುವಂತಿರಬೇಕು ಎಂದರು.

ಕೆರೆಗಳ ಅಭಿವೃದ್ಧಿಯಿಂದ ಅಂತರ್ಜಲಮಟ್ಟ ಹೆಚ್ಚುವುದರಿಂದ ನೀರಾವರಿ ಪಂಪ್‌ಸೆಟ್‌ಗಳಿಗೆ ಹಾಗೂ ಜನರಿಗೆ ಕುಡಿಯುವ ನೀರು ದೊರಕುವಂತಾಗುತ್ತದೆ ಎಂದು ಹೇಳಿದರು.ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಸೋಮಶೇಖರ್ ಮಂಡಿಮಠ್ ಮಾತನಾಡಿ, ಮುಖ್ಯಮಂತ್ರಿ ರಾಜ್ಯದ ಅಭಿವೃದ್ಧಿಗಾಗಿ ಹತ್ತು ಹಲವು ಮಹತ್ವಾಕಾಂಕ್ಷೆ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಇಂತಹ ಯೋಜನೆಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.

ತಾಲ್ಲೂಕಿನ ಜಗಲೂರಜ್ಜನ ಕೆರೆ ಹಾಗೂ ಕರೆಕಲ್ ಕೆರೆಗಳ ಹೂಳೆತ್ತುವ ಹಾಗೂ ಕಾಲುವೆ ನಿರ್ಮಿಸಲು ರೂ 55 ಲಕ್ಷ ಹಣ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಜಾಜೂರು ಜಿಲ್ಲಾ ಪಂಚಾಯ್ತಿ ಸದಸ್ಯ ಜೆ.ಪಿ. ಜಯಪಾಲಯ್ಯ, ಮಾಜಿ ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ದೊರೆ ಬೈಯ್ಯಣ್ಣ, ವಿಜಯೇಂದ್ರ, ವಿರೇಂದ್ರ, ನನ್ನಿವಾಳತಾ.ಪಂ. ಸದಸ್ಯೆ ನಿರ್ಮಲಾ ಶ್ರೀನಿವಾಸ್, ರವೀಂದ್ರ ಇನ್ನಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.