ಮೊಳಕಾಲ್ಮುರು: ತಾಲ್ಲೂಕಿನ ಗೋಶಾಲೆಗಳಿಗೆ ಸರಬರಾಜು ಮಾಡಿರುವ ಮೇವು ಪ್ರಮಾಣದಲ್ಲಿ ಅಕ್ರಮ ನಡೆದಿದ್ದು, ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿ ಸೋಮವಾರ ಎಐಕೆಎಸ್ ಕಾರ್ಯಕರ್ತರು ಇಲ್ಲಿನ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಶನಿವಾರ ತಾಲ್ಲೂಕಿನ ಬಿ.ಜಿ. ಕೆರೆ ಬಳಿ ಗೋಶಾಲೆಗೆ ಮೇವು ಹೊತ್ತು ಹೋಗುತ್ತಿದ್ದ ಲಾರಿ ತಡೆದು ವಿಚಾರಣೆ ನಡೆಸಿದಾಗ ಅಕ್ರಮ ಬೆಳಕಿಗೆ ಬಂದಿದೆ. ಈ ಹಿಂದೆಯೂ ಈ ರೀತಿ ಅನೇಕ ಬಾರಿ ಆಗಿರುವ ಅನುಮಾನ ದಟ್ಟವಾಗಿದ್ದು, ಮೇವು ಸಾಗಣೆ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬಿ.ಜಿ. ಕೆರೆ ಗೋಶಾಲೆಗೆ ಈವರೆಗೆ 130 ಲೋಡ್, ರಾಯಾಪುರ ಗೋಶಾಲೆಗೆ 150 ಲೋಡ್, ರಾಂಪುರ ಗೋಶಾಲೆಗೆ 160 ಲೋಡ್‌ನಷ್ಟು ಮೇವು ಸರಬರಾಜು ಮಾಡಲಾಗಿದೆ. ತಾಲ್ಲೂಕಿನಲ್ಲಿ ಈ ವರ್ಷ ಮಳೆ ಇಲ್ಲದೇ ಜನ, ಜಾನುವಾರುಗಳ ಪರಿಸ್ಥಿತಿ ಕಂಗಾಲಾಗಿದೆ. ಇವರ ನೆರವಿಗೆ ಸರ್ಕಾರ ಗೋಶಾಲೆ ಆರಂಭ ಮಾಡಿದ್ದು, ಗೋಶಾಲೆ ನೋಡಿಕೊಳ್ಳುವ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಶಾಮೀಲಾಗಿ ಅಕ್ರಮ ಮಾಡುತ್ತಾ ಅಮಾನವೀಯತೆ ಪ್ರದರ್ಶಿಸಿದ್ದಾರೆ ಎಂದು ನೇತೃತ್ವ ವಹಿಸಿದ್ದ ಸಿಪಿಐ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಪಟೇಲ್ ಜಿ, ಪಾಪನಾಯಕ ದೂರಿದರು.
ಎಐಕೆಎಸ್ ಜಿಲ್ಲಾ ಘಟಕದ ಅಧ್ಯಕ್ಷ ಜಾಫರ್ ಷರೀಫ್, ತಾಲ್ಲೂಕು ಅಧ್ಯಕ್ಷ ಎಸ್. ನಾಗೇಂದ್ರಪ್ಪ, ಮುಖಂಡರಾದ ಖಾಜಾಹುಸೇನ್, ಚಂದ್ರಕಾಂತ್, ಇಮಾಂ ಹುಸೇನ್, ಈರಣ್ಣ, ಓಬಣ್ಣ, ಶಿವಣ್ಣ, ವಿರೂಪಾಕ್ಷಪ್ಪ, ನಾಗರಾಜ್ ಇತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.