ADVERTISEMENT

ಗ್ರಾಮಗಳ ಮಧ್ಯೆ ನಿರ್ಮಿಸಿರುವ 10 ಚೆಕ್ ಡ್ಯಾಂಗಳು ಈಚೆಗೆ ಬಿದ್ದ ಮಳೆಗೆ ಭರ್ತಿ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2017, 6:15 IST
Last Updated 16 ಅಕ್ಟೋಬರ್ 2017, 6:15 IST

ಹಿರಿಯೂರು: ತಾಲ್ಲೂಕಿನ ಸೋಮೇರಹಳ್ಳಿ–ಚಳಮಡು ಗ್ರಾಮಗಳಲ್ಲಿ ಈಚೆಗೆ ಬಿದ್ದ ಮಳೆಗೆ ಹತ್ತು ಚೆಕ್ ಡ್ಯಾಂಗಳು ಭರ್ತಿಯಾಗಿದ್ದು, ಗ್ರಾಮಸ್ಥರು ಸಂಭ್ರಮಪಡುತ್ತಿದ್ದಾರೆ.
ರಾಜಕೀಯ ಧುರೀಣ ಕೆ.ಎಚ್.ರಂಗನಾಥ್ ಅವರು ಸಚಿವರಾಗಿದ್ದ ಸಮಯದಲ್ಲಿ ಸೋಮೇರಹಳ್ಳಿಯ ಪ್ರಗತಿಪರ ರೈತ ಎ.ಎಂ.ಅಮೃತೇಶ್ವರಸ್ವಾಮಿ ಅವರ ಒತ್ತಾಸೆ ಮೇರೆಗೆ 5 ಚೆಕ್ ಡ್ಯಾಂ ನಿರ್ಮಿಸಿಕೊಟ್ಟಿದ್ದರು.

ಈಚೆಗೆ ಶಾಸಕ ಡಿ.ಸುಧಾಕರ್ ಅವರು ಮತ್ತೆ 5 ಚೆಕ್ ಡ್ಯಾಂ ನಿರ್ಮಿಸಿದ್ದರು. ಚಳಮಡು ಗ್ರಾಮದ ಸಮೀಪದಿಂದ ನಿರ್ಮಿಸಿರುವ ಈ ಚೆಕ್ ಡ್ಯಾಂಗಳನ್ನು ಒಂದು ತುಂಬಿದರೆ, ಮತ್ತೊಂದಕ್ಕೆ ನೀರು ಹರಿದು ಬರುವಂತೆ ರೂಪಿಸಿರುವ ಕಾರಣ ಸೋಮೇರಹಳ್ಳಿವರೆಗಿನ ಎಲ್ಲಾ 10 ಚೆಕ್ ಡ್ಯಾಂಗಳು ಭರ್ತಿಯಾಗಿವೆ.

ಹಿಂದಿನ ಬೇಸಿಗೆಯಲ್ಲಿ ಹಿಂದೆಂದೂ ಕಾಣದಂತಹ ಬರ ಪರಿಸ್ಥಿತಿ ತಲೆದೋರಿತ್ತು. ನೂರಾರು ಕೊಳವೆ ಬಾವಿಗಳು ಬತ್ತಿ ಹೋಗಿದ್ದರಿಂದ ಅಡಿಕೆ, ದಾಳಿಂಬೆ, ತೆಂಗಿನ ತೋಟಗಳು ಒಣಗಿ ಹೋಗಿದ್ದವು. ಇನ್ನೇನು ಕೃಷಿ ಮತ್ತು ತೋಟಗಾರಿಕೆ ನಿಂತೇ ಹೋಯಿತು ಎಂದು ರೈತರು ಹತಾಶೆಗೊಂಡಿದ್ದರು.

ADVERTISEMENT

ಇಂತಹ ಸಂದರ್ಭದಲ್ಲಿ ಒಂದೂವರೆ ತಿಂಗಳಿನಿಂದ ವರುಣನ ಕೃಪೆಯಾದ ಕಾರಣ ಚೆಕ್ ಡ್ಯಾಂ, ಕೃಷಿಹೊಂಡ, ನಾಲಾಬದುಗಳು ಆರೇಳು ವರ್ಷದ ನಂತರ ತುಂಬಿ ಹರಿಯುತ್ತಿವೆ. ಉಡುವಳ್ಳಿ ಕೆರೆ ಶುಕ್ರವಾರ ಬೆಳಿಗ್ಗೆ ಕೋಡಿ ಬಿದ್ದಿದ್ದು, ಸುತ್ತಮುತ್ತಲ 10–12 ಹಳ್ಳಿಗಳಲ್ಲಿ ಅಂತರ್ಜಲ ವೃದ್ಧಿಗೊಂಡಿದೆ.

ಕೆಲವು ಕಡೆ ತೆರೆದ ಬಾವಿಗಳಲ್ಲಿ ನೀರು ಕಾಣಿಸಿಕೊಂಡಿದ್ದು, ಮುಂದಿನ ಎರಡು ವರ್ಷ ನೀರಿಗೆ ತೊಂದರೆಯಾಗದು ಎಂದು ರೈತರು ಸಂತಸಗೊಂಡಿದ್ದಾರೆ ಎಂದು ಅಮೃತೇಶ್ವರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.