ADVERTISEMENT

ಚಳ್ಳಕೆರೆ: ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2011, 13:25 IST
Last Updated 23 ಅಕ್ಟೋಬರ್ 2011, 13:25 IST

ಚಳ್ಳಕೆರೆ: ಡಾ.ಡಿ.ಎಂ. ನಂಜುಂಡಪ್ಪ ಅವರ ವರದಿ ಪ್ರಕಾರ ಹಿಂದುಳಿದ ತಾಲ್ಲೂಕು ಎಂದು ಗುರುತಿಸಿ ಕೊಂಡಿರುವ ಚಳ್ಳಕೆರೆ ತಾಲ್ಲೂಕು ಪ್ರಸಕ್ತ ವರ್ಷದಲ್ಲಿ ಮಳೆ ಇಲ್ಲದೇ ಬರಪೀಡಿತ ಪ್ರದೇಶವಾಗಿರುವುದರಿಂದ ರೈತರ ಜಾನುವಾರುಗಳ ರಕ್ಷಣೆಗಾಗಿ ಸರ್ಕಾರ ಈ ಕೂಡಲೇ ಪ್ರತಿ ಗ್ರಾಮ ಪಂಚಾಯ್ತಿಗೆ ಒಂದರಂತೆ ಗೋಶಾಲೆಗಳನ್ನು ತೆರೆಯಬೇಕು ಎಂದು ಕಾಂಗ್ರೆಸ್ ಮುಖಂಡ ಟಿ. ರಘುಮೂರ್ತಿ ಒತ್ತಾಯಿಸಿದರು.

ಪಟ್ಟಣದಲ್ಲಿ ಶನಿವಾರ ರಾಜ್ಯ ಸರ್ಕಾರದ ವಿರುದ್ಧ ಬ್ಲಾಕ್ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.

ದುಡಿಯುವ ಕೈಗಳಿಗೆ ಕೆಲಸ ಇಲ್ಲದೇ ಜನರು ಗುಳೆ ಹೋಗುವ ಸ್ಥಿತಿಯಲ್ಲಿದ್ದಾರೆ. ಜಾನುವಾರುಗಳಿಗೆ ಮೇವು ಕೊರತೆ ಕಂಡುಬಂದಿದೆ. ಆದ್ದರಿಂದ, ಇನ್ನಾದರೂ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಜನರ ಹಿತ ಕಡೆಗಣಿಸುತ್ತಿದೆ. ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಬಿಜೆಪಿ ಮುಖ್ಯಮಂತ್ರಿಯೊಬ್ಬರು ಭ್ರಷ್ಟಾಚಾರದ ಆರೋಪದಲ್ಲಿ ಕಾರಾಗೃಹ ಸೇರಿರುವುದು ಅವರ ಭ್ರಷ್ಟತೆಗೆ ಹಿಡಿದ ಕನ್ನಡಿಯಾಗಿದೆ ಎಂದು ಅವರು ವ್ಯಂಗ್ಯವಾಡಿದರು.

ಇಂತಹ ಸರ್ಕಾರವನ್ನು ಎಚ್ಚರಿಸಿ ಜನಜಾಗೃತಿ ಮೂಡಿಸುವ ಸಲುವಾಗಿ ರಾಜ್ಯ ಕಾಂಗ್ರೆಸ್ ಘಟಕ ಪ್ರತಿ ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆಗಳನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಕಚೇರಿಯಿಂದ ನೆಹರು ವೃತ್ತದ ಮಾರ್ಗವಾಗಿ ತಾಲ್ಲೂಕು ಕಚೇರಿಗೆ ತೆರಳಿದ ನೂರಾರು ಕಾರ್ಯಕರ್ತರು ತಹಶೀಲ್ದಾರ್ ಅಲ್ಕೂರ ಭೋವಿ ಅವರಿಗೆ ಮನವಿ ಸಲ್ಲಿಸಿದರು.

ಕಾಂಗ್ರೆಸ್ ಮುಖಂಡರಾದ ಪ್ರಭುದೇವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ. ತಿಪ್ಪೇಸ್ವಾಮಿ, ಮಾಜಿ ಪುರಸಭೆ ಸದಸ್ಯ ಎಚ್.ಎಸ್. ಸೈಯ್ಯದ್ ಜಿಲ್ಲಾ ಪಂಚಾಯ್ತಿ ಸದಸ್ಯ ರಂಗಸ್ವಾಮಿ, ಮಲ್ಲಿಕಾರ್ಜುನ, ಪುರಸಭೆ ಸದಸ್ಯರಾದ ಪ್ರಸನ್ನಕುಮಾರ್, ಮುಜೀಬುಲ್ಲಾ, ಗೀತಾಬಾಯಿ, ಮೂಡಲಗಿರಿಯಪ್ಪ, ಹುಣಸೇಕಟ್ಟೆ ವೆಂಕಟೇಶ್, ಮಲ್ಲಿಕಾರ್ಜುನ, ಪಾಪಣ್ಣ, ಸೋಮಶೇಖರ್ ಪಿ. ತಿಪ್ಪೇಸ್ವಾಮಿ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೋಹನ್ ಎಸ್. ಮೀರಾಸಾಬಿಹಳ್ಳಿ, ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಸೂರನಹಳ್ಳಿ ಶಿವಕುಮಾರ್ ಮತ್ತಿತರರು  ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.     

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.