ಚಿತ್ರದುರ್ಗ: ರಜಾ ದಿನವಾದ ಭಾನುವಾರ ನಗರದ ವಾಸವಿ ಮಹಲ್ ಮುಂದಿನ ರಸ್ತೆಯಲ್ಲಿರುವ ಕೋಳಿ ಮತ್ತು ಕುರಿ ಮಾಂಸದ ಮಾರುಕಟ್ಟೆಗಳಲ್ಲಿ ಭರ್ಜರಿ ವ್ಯಾಪಾರ ನಡೆಸಲಾಯಿತು.
ಮಟನ್, ಚಿಕನ್ ಖರೀದಿಸಲು ಜನರು ಅಂಗಡಿಗಳ ಮುಂದೆ ಜಮಾಯಿಸಿದ್ದರು. ಬೆಳಿಗ್ಗೆ ಸುಮಾರು 6 ಗಂಟೆಯಿಂದಲೇ ಜನರು ಕೋಳಿ, ಕುರಿ ಮಾಂಸ ಖರೀದಿಸಲು ಮಾರುಕಟ್ಟೆಗೆ ಆಗಮಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಮಾರುಕಟ್ಟೆಗೆ ಬೆಳಿಗ್ಗೆಯಿಂದಲೇ ಜನರು ಆಗಮಿಸುತ್ತಿದ್ದ ಕಾರಣ ಮಾರುಕಟ್ಟೆಯ ಸುತ್ತಮುತ್ತಲಿನ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಗ್ರಾಹಕರ ವಾಹನಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪ್ರಸನ್ನ ಚಿತ್ರಮಂದಿರದ ರಸ್ತೆಯಲ್ಲಿ ತಂತಿಯ ಕೋಳಿಗೂಡುಗಳನ್ನು ಇಡಲಾಗಿತ್ತು.
`ಪಟ್ಲಿ~ (ಗಂಡು ಕುರಿ) ಮಟನ್‌ಗೆ ಮಾರುಕಟ್ಟೆಯಲ್ಲಿ ಬೇಡಿಕೆ ಅಧಿಕವಾಗಿತ್ತು. ವ್ಯಾಪಾರಸ್ಥರು 1 ಕೆ.ಜಿ ಮಟನ್‌ಗೆ ರೂ 300ರಿಂದ 350ವರೆಗೆ ಮಾರಾಟ ಮಾಡಿದರು. ಹೆಣ್ಣು ಕುರಿ ಮಟನ್ 1 ಕೆ.ಜಿ. ರೂ 250 ರಿಂದ 300ವರೆಗೆ ಮಾರಾಟ ಮಾಡಲಾಯಿತು. ಚಿಕನ್‌ಗೆ ರೂ 120ರಿಂದ 160ರವರೆಗೆ ಮಾರಾಟ ಮಾಡಲಾಯಿತು. ನಾಟಿ ಕೋಳಿ ಚಿಕನ್‌ಗೆ ಬಹು ಬೇಡಿಕೆ ಇತ್ತು. ನಾಟಿ ಕೋಳಿ ಮಾಂಸಕ್ಕೆ ರೂ 200ರಿಂದ 250ವರೆಗೆ ವ್ಯಾಪಾರ ನಡೆಯಿತು. 1 ಕೆ.ಜಿಗೆ ಮೀನಿಗೆ ರೂ 100ರಂತೆ ಮಾರಾಟ ಮಾಡಲಾಯಿತು.
ಹಲವು ಕೋಳಿ ಅಂಗಡಿಗಳಲ್ಲಿ ಜನರ ನಿಯಂತ್ರಣಕ್ಕಾಗಿ ಟೋಕನ್ ವ್ಯವಸ್ಥೆ ಮಾಡಲಾಗಿತ್ತು. ಸರದಿ ಸಾಲಿನಲ್ಲಿ ಎರಡು- ಮೂರು ಗಂಟೆ ಕಾದು ಮಾಂಸ ಪಡೆಯಬೇಕಾಯಿತು.
ನಗರದ ವಿವಿಧ ಬಡಾವಣೆಗಳ್ಲ್ಲಲೂ ಇದೇ ಪರಿಸ್ಥಿತಿಯಾಗಿತ್ತು. ಕುರಿ ಮತ್ತು ಕೋಳಿ ಅಂಗಡಿಗಳಲ್ಲಿಯು ಮಟನ್ ಖರೀದಿಸಲು ಜನರು ಜಮಾಯಿಸಿದ್ದರು.
ಯುಗಾದಿ ಮರುದಿನ ಮತ್ತು ಭಾನುವಾರ ಆಗಿದ್ದರಿಂದ ಮಾಂಸಾಹಾರಿಗಳು ಚಿಕನ್, ಮಟನ್ ಸೇವಿಸುವುದು ಸಾಮಾನ್ಯ. ಹೀಗಾಗಿ ಬೇಡಿಕೆ ಅಪಾರವಾಗಿತ್ತು. ಜತೆಗೆ ಮದ್ಯ ಖರೀದಿಗೆ ಎಂಎಸ್‌ಐಎಲ್ ಅಂಗಡಿಗಳ ಮುಂದೆ ಮದ್ಯಪ್ರಿಯರು ಸೇರಿದ್ದರು. ಈ ಅಂಗಡಿಗಳಲ್ಲೂ ಭರ್ಜರಿ ವ್ಯಾಪಾರ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.