ಚಿತ್ರದುರ್ಗ: ಜಿಲ್ಲೆಯ ವಿದ್ಯಾರ್ಥಿ ನಿಲಯಗಳಲ್ಲಿನ ಅವ್ಯವಸ್ಥೆಗಳನ್ನು ಸರಿಪಡಿಸಬೇಕು ಎಂದು ಜಿ.ಪಂ. ಅಧ್ಯಕ್ಷ ಸಿ. ಮಹಲಿಂಗಪ್ಪ ಸಮಾಜ ಕಲ್ಯಾಣ ಹಾಗೂ ಬಿಸಿಎಂ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮೊರಾರ್ಜಿ ವಸತಿ ಶಾಲೆ ಸೇರಿದಂತೆ ವಿವಿಧ ವಿದ್ಯಾರ್ಥಿನಿಲಯಗಳಿಗೆ ಸ್ವತಃ ಭೇಟಿ ನೀಡಿದ್ದು, ಕೆಲವೆಡೆ ನಿಲಯಪಾಲಕರ ಹಾಗೂ ಸಿಬ್ಬಂದಿಗಳ ವೈಯಕ್ತಿಕ ದ್ವೇಷಗಳಿಂದ ವಿದ್ಯಾರ್ಥಿಗಳಿಗೆ ಕಳಪೆ ಮಟ್ಟದ ಆಹಾರ ನೀಡಲಾಗುತ್ತಿದೆ. ಅಲ್ಲಿ ತಯಾರಿಸುವ ಆಹಾರವನ್ನು ಭಿಕ್ಷುಕರು ಹಾಗೂ ಜಾನುವಾರುಗಳು ಸಹ ತಿನ್ನದ ರೀತಿಯಲ್ಲಿವೇ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಗುಣಮಟ್ಟದ ಆಹಾರ ನೀಡುವಂತೆ ವಿದ್ಯಾರ್ಥಿಗಳು ಮನವಿ ಮಾಡಿದರೇ ಕೆಲವೆಡೆ ನಿಲಯಪಾಲಕರು ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಮಾಡಿರುವ ದೂರುಗಳು ಬಂದಿವೆ. ಸರ್ಕಾರ ವಿದ್ಯಾರ್ಥಿಗಳಿಗೆ ವಿವಿಧ ಸೌಲಭ್ಯಗಳನ್ನು ನೀಡುತ್ತಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು ಅಗತ್ಯ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇನ್ನೊಮ್ಮೆ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡುವ ಮುನ್ನ ಅವ್ಯವಸ್ಥೆ ಸರಿಪಡಿಸಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.
ತಾಲ್ಲೂಕಿನ ಪಿಳ್ಳೆಕೇರನಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆ ಸ್ಥಳಾಂತರಗೊಳಿಸುವಂತೆ ಸೂಚನೆ ನೀಡಿದರೂ ಕ್ರಮ ಕೈಗೊಳ್ಳದ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಂಗೇಗೌಡ ತರಾಟೆಗೆ ತೆಗೆದುಕೊಂಡರು.
ಶಾಲೆ ನಿರ್ಮಾಣ ಮಾಡಲು ನಿವೇಶನದ ಅಗತ್ಯವಿದೆ. ಅದಕ್ಕೆ ಜಿಲ್ಲಾಧಿಕಾರಿಗಳ ಅನುಮತಿ ದೊರೆತಿಲ್ಲ ಎನ್ನುವ ಅಧಿಕಾರಿಗಳ ಉತ್ತರಕ್ಕೆ ಜಿಲ್ಲಾ ಪಂಚಾಯ್ತಿ ವತಿಯಿಂದ ನಿವೇಶನ ಖರೀದಿ ಮಾಡಲು ಹಣ ನೀಡಲಾಗುತ್ತದೆ. ಶೀಘ್ರವಾಗಿ ಶಾಲೆ ಸ್ಥಳಾಂತರಗೊಳಿಸಬೇಕು. ಮುಂದಿನ ಸಭೆಯಲ್ಲಿ ಪಿಳ್ಳೆಕೇರನಹಳ್ಳಿಯ ಶಾಲೆ ಬಗ್ಗೆ ಚರ್ಚೆ ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಪೈಕಾ ಕ್ರೀಡಾಕೂಟಕ್ಕಾಗಿ ಜಿಲ್ಲೆಯ ಗ್ರಾಮ ಪಂಚಾಯ್ತಿ ವತಿಯಿಂದ ತಲಾ 2 ಸಾವಿರ ರೂ. ಪಡೆದಿರುವ ವಿವರಗಳನ್ನು ನೀಡುವಂತೆ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗೆ ಸೂಚಿಸಿದರು. ಕೃಷಿ ಇಲಾಖೆ ವತಿಯಿಂದ ಫಲಾನುಭವಿಗಳಿಗೆ ನೀಡಲಾಗುತ್ತಿರುವ ಪರಿಕರಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು, ಇದಕ್ಕೆ ಸಂಬಂಧಿಸಿದ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳುವಂತೆ ಜಿ.ಪಂ. ಅಧ್ಯಕ್ಷ ಮಹಾಲಿಂಗಪ್ಪ ಸೂಚಿಸಿದರು.
ಹಿರಿಯೂರು ತಾಲ್ಲೂಕು ಬಬ್ಬೂರಿನ ಶಾಲೆಗೆ ಕಳಪೆ ಮಟ್ಟದ ಕಿಟಕಿ ಮತ್ತು ಬಾಗಿಲು ಅಳವಡಿಸಲಾಗಿದೆ ಹಾಗೂ ಇದೇ ತಾಲ್ಲೂಕಿನ ಜಿಗಳೆಕಟ್ಟೆ ಶಾಲೆಯಲ್ಲಿ ಬಿಸಿಯೂಟಕ್ಕೆ ನೀಡುವ ಆಹಾರ ಪದಾರ್ಥಗಳನ್ನು ಶಿಕ್ಷಕರೇ ಕಳವು ಮಾಡುತ್ತಿರುವ ಬಗ್ಗೆ ಗ್ರಾಮಸ್ಥರಿಂದ ದೂರು ಬಂದಿದ್ದು, ಈ ಬಗ್ಗೆ ಪರಿಶೀಲಿಸುವಂತೆ ಜಿ.ಪಂ. ಉಪಾಧ್ಯಕ್ಷೆ ವಿಜಯಮ್ಮ ಅಧಿಕಾರಿಗಳಿಗೆ ಸೂಚಿಸಿದರು. |
ಪರೀಕ್ಷಾಮೇಲ್ವಿಚಾರಕರು ಮಾರಾಟಕ್ಕೆ!
ಮುಂಬರಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೊಠಡಿ ಮೇಲ್ವಿಚಾರಕರಾಗಿ ನೇಮಕವಾಗುತ್ತಿರುವವರು ಮಾರಾಟವಾಗುತ್ತಿದ್ದಾರೆ ಎಂದು ಜಿ.ಪಂ. ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ರಂಗೇಗೌಡ ಹೇಳಿದರು. ಶುಕ್ರವಾರ ನಗರದ ಜಿ.ಪಂ. ಸಭಾಂಗಣದಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದರು.
ಖಾಸಗಿ ಶಾಲೆಗಳ ಮುಖ್ಯಸ್ಥರು ಎಸ್ಸೆಸ್ಸೆಲ್ಸಿಯಲ್ಲಿ ಪರೀಕ್ಷೆಯಲ್ಲಿ ತಮ್ಮ ಶಾಲೆಗಳಿಗೆ ಉತ್ತಮ ಫಲಿತಾಂಶ ಬರಬೇಕು ಎನ್ನುವ ಉದ್ದೇಶದಿಂದ ಪರೀಕ್ಷಾ ಕೊಠಡಿ ಮೇಲ್ವಿಚಾರಕರಾಗಿ ನೇಮಕಗೊಳ್ಳುತ್ತಿರುವವರನ್ನು ಖರೀದಿ ಮಾಡುತ್ತಿರುವ ಬಗ್ಗೆ ತಮಗೆ ದೂರವಾಣಿ ಕರೆ ಬಂದಿದೆ ಎಂದು ತಿಳಿಸಿದರು. ಈ ಅಕ್ರಮಗಳ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಸೂಕ್ತವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.