ADVERTISEMENT

ಚುನಾವಣಾ ಯಶಸ್ಸಿಗೆ ಉತ್ತಮ ಸಂವಹನವೇ ಆಧಾರ

ಸೆಕ್ಟೆರ್ ಅಧಿಕಾರಿಗಳ ತರಬೇತಿ ಕಾರ್ಯಾಗಾರದಲ್ಲಿ ವಿ.ವಿ.ಜ್ಯೋತ್ಸ್ನಾ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2018, 9:06 IST
Last Updated 20 ಮಾರ್ಚ್ 2018, 9:06 IST

ಚಿತ್ರದುರ್ಗ: ಯಶಸ್ವಿಯಾಗಿ ಚುನಾವಣೆ ನಡೆಸಲು ಉತ್ತಮ ಸಂವಹನ ಕೌಶಲ ಅಗತ್ಯವಿದ್ದು, ಅಧಿಕಾರಿಗಳು  ಮಾಹಿತಿ ಹಂಚಿಕೆಯಲ್ಲಿ ನಿಖರವಾಗಿರಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ವಿ.ವಿ.ಜ್ಯೋತ್ಸ್ನಾ ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮುರು, ಹಿರಿಯೂರು, ಹೊಸದುರ್ಗ ಹಾಗೂ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿ ಹಾಗೂ ಸೆಕ್ಟರ್ ಅಧಿಕಾರಿಗಳಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತ ಚುನಾವಣೆ ನಡೆಸಲು ಸೆಕ್ಟರ್ ಅಧಿಕಾರಿಗಳ ಪಾತ್ರ ಬಹುಮುಖ್ಯ. ಪ್ರತಿ ಸೆಕ್ಟರ್ ಅಧಿಕಾರಿಗಳಿಗೆ 10 ರಿಂದ 12 ಮತಗಟ್ಟೆಗಳು ಸೇರುತ್ತವೆ. ಪ್ರತಿ ಸೆಕ್ಟರ್ ಅಧಿಕಾರಿ ಚುನಾವಣಾ ಆಯೋಗದಿಂದ ನೀಡಿರುವ 23 ಅಂಶಗಳನ್ನೊಳಗೊಂಡ ಮಾಹಿತಿಯನ್ನು ಸಿದ್ಧಪಡಿಸಿ ಆಯಾ ಕ್ಷೇತ್ರದ ಚುನಾವಣಾಧಿಕಾರಿಗೆ ವರದಿ ನೀಡಬೇಕು. ಈ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ADVERTISEMENT

‘ಚುನಾವಣಾ ಆಯೋಗಕ್ಕೆ ಪ್ರತಿ ಮತಗಟ್ಟೆ ವರದಿಯನ್ನು ನೀಡಬೇಕು. ಹಾಗಾಗಿ ಸೆಕ್ಟರ್ ಅಧಿಕಾರಿಗಳು ಮತಗಟ್ಟೆಯ ಹೆಸರು, ಕ್ಷೇತ್ರ, ಸೆಕ್ಟರ್ ಸಂಖ್ಯೆ, ಮತಗಟ್ಟೆ ಹೆಸರು, ಗ್ರಾಮ, ಸೇರ್ಪಡೆಯಾಗಿರುವ ಗ್ರಾಮಗಳ ವಿವರ, ಕಾನೂನು ಸುವ್ಯವಸ್ಥೆ, ಪ್ರಭಾವಿ ವ್ಯಕ್ತಿಗಳ ವಿವರ, ದೌರ್ಜನ್ಯ, ಮತದಾನಕ್ಕೆ ಅಡೆತಡೆಯಾಗಿರುವ ಯಾವುದೇ ಅಂಶಗಳಿದ್ದಲ್ಲಿ ಅಂತಹ ವರದಿ ನೀಡಬೇಕು ಎಂದು ವಿವರಿಸಿದರು.

ಸೆಕ್ಟರ್ ಅಧಿಕಾರಿಗಳು ಪ್ರತಿ ಹಂತದಲ್ಲಿ ಜಾಗೃತಿಯಿಂದ ಕೆಲಸ ಮಾಡಬೇಕು. ಕೆಲವು ಸಂದರ್ಭದಲ್ಲಿ ಸಣ್ಣಪುಟ್ಟ ಪ್ರಕರಣಗಳು ಅಪಾಯಕಾರಿ ಯಾಗಬಹುದು. ಎಲ್ಲಾ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ತಿಳಿಸಿದರು.

ಮಹಿಳೆಯರು ಸೇರಿದಂತೆ ಎಲ್ಲ ವರ್ಗದ ಜನರೂ ಪಾಲ್ಗೊಂಡು ಮತದಾನ ಮಾಡುವಂತಹ ವಾತಾವರಣ ಸೃಷ್ಟಿ ಮಾಡಬೇಕು. ಇದಕ್ಕೆ ಬೇಕಾದ ಎಲ್ಲಾ ಕ್ರಮಗಳನ್ನು ಆಯೋಗ ತೆಗೆದುಕೊಳ್ಳಲಿದೆ. ಮತದಾರರ ಜಾಗೃತಿಗಾಗಿ ಸ್ವೀಪ್ ಯೋಜನೆಯಡಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.

ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರವೀಂದ್ರ, ಉಪವಿಭಾಗಾಧಿಕಾರಿ ವಿಜಯಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.