ADVERTISEMENT

ಚುನಾವಣೆ: ಶಾಲಾ-ಕಾಲೇಜುಗಳಲ್ಲಿ ಪ್ರಚಾರ ಜೋರು

​ಪ್ರಜಾವಾಣಿ ವಾರ್ತೆ
Published 13 ಜನವರಿ 2012, 7:10 IST
Last Updated 13 ಜನವರಿ 2012, 7:10 IST

ಚಿತ್ರದುರ್ಗ: ವಿಧಾನ ಪರಿಷತ್ ಚುನಾವಣೆಯ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಭರ್ಜರಿ ಪ್ರಚಾರ ಆರಂಭವಾಗಿದೆ.

ಕಳೆದ ಬಾರಿಗಿಂತಲೂ ಈ ಬಾರಿ ಬಿರುಸಿನ ಪೈಪೋಟಿ ನಡೆಯುವ ಲಕ್ಷಣಗಳು ಗೋಚರಿಸುತ್ತಿವೆ. ಜೂನ್‌ನಲ್ಲಿ ಚುನಾವಣೆ ನಡೆಯಲಿದ್ದು, ಇನ್ನೂ ಸಾಕಷ್ಟು ಕಾಲಾವಕಾಶವಿದೆ. ಇದರಿಂದಾಗಿ ಅಭ್ಯರ್ಥಿಗಳು ಈಗಿನಿಂದಲೇ ತಯಾರಿ ನಡೆಸುತ್ತಿದ್ದಾರೆ.

ಹಾಲಿ ಸದಸ್ಯ ವೈ.ಎ. ನಾರಾಯಣಸ್ವಾಮಿ ಅವರು ನಿರಂತರವಾಗಿ ಶಿಕ್ಷಕರನ್ನು ಓಲೈಸುವಲ್ಲಿ ತೊಡಗಿದ್ದು, ಜಿಲ್ಲೆಯಲ್ಲಿ ಸುತ್ತಾಡಿ ಶಿಕ್ಷಕರನ್ನು ಭೇಟಿ ನೀಡಿ ಮತ್ತೊಮ್ಮೆ ಬೆಂಬಲಿಸುವಂತೆ ಕೋರುತ್ತಿದ್ದಾರೆ.

ನಾರಾಯಣಸ್ವಾಮಿ ಅವರಿಗೆ ಬಿರುಸಿನ ಸ್ಪರ್ಧೆ ನೀಡಲು ಸಿದ್ಧರಾಗಿರುವ ಕೋಲಾರ ಜಿಲ್ಲೆಯ ತೂಪಲ್ಲಿ ಗ್ರಾಮದ ಆರ್. ಚೌಡರೆಡ್ಡಿ ಅವರು ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ.

ಗುರುವಾರ ಶಾಲಾ ಕಾಲೇಜುಗಳಲ್ಲಿ ಚೌಡರೆಡ್ಡಿ ಅವರು ಚುನಾವಣಾ ಪ್ರಚಾರ ನಡೆಸಿದರು. ಶಿಕ್ಷಕ ಮತದಾರರನ್ನು ಭೇಟಿಯಾಗಿ ತಮಗೆ ಬೆಂಬಲ ನೀಡುವಂತೆ ಕೋರಿದರು.

ಶಾಸಕ ಎಸ್.ಕೆ. ಬಸವರಾಜನ್, ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಎಸ್. ಶಿವಶಂಕರ್, ಮಾಜಿ ಶಾಸಕ ಎ.ವಿ. ಉಮಾಪತಿ ಅವರೊಂದಿಗೆ ಚೌಡರೆಡ್ಡಿ ಸರ್ಕಾರಿ ಕಲಾ, ವಿಜ್ಞಾನ ಕಾಲೇಜುಗಳು, ಬಾಲಕಿಯರ ಕಾಲೇಜು ಸೇರಿದಂತೆ ನಗರದ ವಿವಿಧ ಕಾಲೇಜುಗಳಿಗೆ ಭೇಟಿ ನೀಡಿದ್ದರು.

ಆದರೆ, ಶಾಲಾ, ಕಾಲೇಜು ಅವಧಿಯಲ್ಲೇ ಪ್ರಚಾರ ನಡೆಸಿದ್ದರೂ ಯಾರೂ ಪ್ರಶ್ನಿಸಲಿಲ್ಲ. ಶಿಕ್ಷಕರು ಸಹ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಬಸವರಾಜನ್, ಶಾಲಾ ಅವಧಿಯಲ್ಲಿ ಪ್ರಚಾರ ನಡೆಸಿಲ್ಲ. ಆದರೆ, ಶಿಕ್ಷಕರು ಸಿಗುವುದೇ ಶಾಲಾ- ಕಾಲೇಜುಗಳಲ್ಲಿ. ಆದ್ದರಿಂದ ಅಲ್ಲಿಗೆ ತೆರಳಿ ಪ್ರಚಾರ ನಡೆಸಬೇಕಾಯಿತು. ತೊಂದರೆಯಾಗದ ರೀತಿಯಲ್ಲಿ ಪ್ರಚಾರ ನಡೆಸಲಾಯಿತು ಎಂದು ಸಮಜಾಯಿಷಿ ನೀಡಿದರು.

ವಿಧಾನಪರಿಷತ್ ಮಾಜಿ ಸದಸ್ಯ ಪುಟ್ಟಸಿದ್ಧಶೆಟ್ಟಿ, ವಕೀಲ ರಾಜಣ್ಣ, ಮಾಧ್ಯಮಿಕ ಶಿಕ್ಷಕರ ಸಂಘದ  ಬಸವರಾಜ್ ಮತ್ತಿತರರು ಸಹ ಚುನಾವಣೆಯಲ್ಲಿ ಸ್ಪರ್ಧಿಸಲು ಸಜ್ಜಾಗಿದ್ದಾರೆ.

ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಮತದಾರರಿದ್ದಾರೆ. ಮತದಾರರ ನೋಂದಣಿಗೆ ಇನ್ನೂ ಕಾಲಾವಕಾಶ ಇರುವುದರಿಂದ ಅಭ್ಯರ್ಥಿಗಳು ಮತದಾರರನ್ನು ನೋಂದಾಯಿಸಲು ಶ್ರಮಿಸುವ ಕಾರ್ಯದಲ್ಲೂ ತೊಡಗಿದ್ದಾರೆ. ಎಲ್ಲ ಅಭ್ಯರ್ಥಿಗಳು ಶಿಕ್ಷಕರನ್ನು ಓಲೈಸಲು ತಂತ್ರ ರೂಪಿಸುತ್ತಿರುವುದು ಕಂಡುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.