ADVERTISEMENT

ಜನಸಂಖ್ಯೆ ಬೆಳವಣಿಗೆ ಆರ್ಥಿಕ ಅಭಿವೃದ್ಧಿಗೆ ಮಾರಕ

​ಪ್ರಜಾವಾಣಿ ವಾರ್ತೆ
Published 12 ಜುಲೈ 2012, 5:25 IST
Last Updated 12 ಜುಲೈ 2012, 5:25 IST

ಚಿತ್ರದುರ್ಗ: ಸಮಾಜದಲ್ಲಿನ ಬಡತನ, ಅಜ್ಞಾನ, ಮೂಢನಂಬಿಕೆ, ಬಾಲ್ಯ ವಿವಾಹ, ಸಾಕ್ಷರತೆ ಕೊರತೆಯಿಂದ ಜನಸಂಖ್ಯೆಯ ಪ್ರಮಾಣ ಹೆಚ್ಚಾಗಲಿದ್ದು, ಇದರಿಂದ ಆರ್ಥಿಕಾಭಿವೃದ್ಧಿ ಸೇರಿದಂತೆ ಸಾಮಾಜಿಕ ಏರುಪೇರುಗಳು ಉಂಟಾಗಲಿದೆ ಎಂದು ಆರೋಗ್ಯಾಧಿಕಾರಿ ಡಾ.ಸುಧಾ ತಿಳಿಸಿದರು.

ಕೊಂಡ್ಲಹಳ್ಳಿಯಲ್ಲಿ ಕೇಂದ್ರ ಕ್ಷೇತ್ರ ಪ್ರಚಾರ ನಿರ್ದೇಶನಾಲಯ, ಆರೋಗ್ಯ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಹಾಗೂ ಗ್ರಾಮ ಪಂಚಾಯ್ತಿ ಸಂಯುಕ್ತ ಆಶ್ರಯದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಿಶೇಷ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶದ ಜನಸಂಖ್ಯೆ 2011ರ ಜನಗಣತಿ ಪ್ರಕಾರ 121 ಕೋಟಿಯಷ್ಟಿದೆ. ಇದೇ ರೀತಿ ಜನಸಂಖ್ಯೆ ಬೆಳವಣಿಗೆ ಮುಂದುವರಿದಲ್ಲಿ ಮುಂದಿನ 40 ವರ್ಷಗಳಲ್ಲಿ ದೇಶದ ಜನಸಂಖ್ಯೆ 240 ಕೋಟಿ ದಾಟಲಿದೆ. ಇದರಿಂದ ದೇಶದ ಅರ್ಥಿಕ ಬೆಳವಣಿಗೆ ಮೇಲೆ ಪರಿಣಾಮ ಬೀರಲಿದೆ ಎಂದು ತಿಳಿಸಿದರು.

ಜನಸಂಖ್ಯೆ ಹೆಚ್ಚಾದಂತೆ ನಮ್ಮಲ್ಲಿರುವ ನೈಸರ್ಗಿಕ ಸಂಪನ್ಮೂಲಗಳ ಬಳಕೆ ಹೆಚ್ಚಾಗಿ ಮುಂದೊಂದು ದಿನ ಇವು ಸಹ ಬರಿದಾಗಲಿವೆ. ಇದಲ್ಲದೆ ಎಲ್ಲರಿಗೂ ಶಿಕ್ಷಣ ಕೊಡುವುದು ಮತ್ತು ಸೌಲಭ್ಯ ಕಲ್ಪಿಸುವುದು ಕಷ್ಟಕರವಾಗಲಿದೆ. ನಿರುದ್ಯೋಗದ ಸಮಸ್ಯೆ ಹೆಚ್ಚಳವಾಗಿ ಗುಣಮಟ್ಟದ ಜೀವನ ನಡೆಸುವುದು ದುಸ್ತರವಾಗಲಿದೆ. ಈ ನಿಟ್ಟಿನಲ್ಲಿ ಸಾಕ್ಷರರಾಗಿ ನಿಗದಿತ ವಯೋಮಾನದಲ್ಲಿ ವಿವಾಹ ಮಾಡಿಕೊಂಡು ಕುಟುಂಬ ಕಲ್ಯಾಣ ಪದ್ಧತಿಯನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳ ಬೇಕಾಗುತ್ತದೆ ಎಂದರು.

 ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ಟಿ. ಸುಶೀಲಮ್ಮ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪಿ.ಟಿ. ಶಾರದಾ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪದ್ಮಾವತಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿರುಮಲಯ್ಯ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕರಿಯಣ್ಣ ಉಪಸ್ಥಿತರಿದ್ದರು.

 ಕಾರ್ಯಕ್ರಮದ ಅಂಗವಾಗಿ ಗ್ರಾಮೀಣ ಕ್ರೀಡಾಕೂಟವನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಂಗೀತ ಮತ್ತು ನಾಟಕ ವಿಭಾಗದ ಕಲಾವಿದರಿಂದ ಜಾಗೃತಿ ಗೀತೆಗಳ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕ್ಷೇತ್ರ ಪ್ರಚಾರ ಸಹಾಯಕ ರಾಮಕೃಷ್ಣಪ್ಪ ಸ್ವಾಗತಿಸಿದರು ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಚಿದಾನಂದಪ್ಪ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.