ಚಿತ್ರದುರ್ಗ: ‘ಕಾಡುಗೊಲ್ಲರನ್ನು ಅಧಿಕೃತ ಜಾತಿ ಪಟ್ಟಿಗೆ ಸೇರಿಸಬೇಕು, ಸಮುದಾಯದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆಯಾಗಬೇಕು, ಕಾಡುಗೊಲ್ಲರನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಬೇಕು, ಪ್ರತ್ಯೇಕ ಪ್ರಾಧಿಕಾರ ರಚಿಸಬೇಕು’ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಕಾಡುಗೊಲ್ಲರ ಯುವ ಸೇನೆ ಸೋಮವಾರ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿತು.
ಇದಕ್ಕೂ ಮೊದಲು ಪ್ರತಿಭಟನಾ ಮೆರವಣಿಗೆ ನಡೆಯಿತು. ಕಾಡುಗೊಲ್ಲರ ವೇಷ ತೊಟ್ಟ ಕೆಲವು ಯುವಕರು, ಹಿರಿಯರು ಬೇಡಿಕೆ ಈಡೇರಿಸುವಂತೆ ಘೋಷಣೆ ಕೂಗಿದರು. ಒಂದೂವರೆ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿದ್ದ ಕಾಡುಗೊಲ್ಲರು ವಿವಿಧ ತಮಟೆ, ಉರಿಮೆ ವಾದ್ಯಗಳೊಂದಿಗೆ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡರು.
‘ಕಾಡುಗೊಲ್ಲರ ಆದಾಯ ಮಿತಿ ರದ್ದು ಮಾಡಿ, ಗೊಲ್ಲರ ಹಟ್ಟಿಗಳನ್ನು ಕಂದಾಯ ಗ್ರಾಮವಾಗಿಸಿ’ ಎಂಬ ಫಲಕಗಳನ್ನು ಹಿಡಿದು ಸಾಗಿದರು. ನಗರದ ಕನಕವೃತ್ತದಿಂದ ಬೆಳಿಗ್ಗೆ 11 ಗಂಟೆಗೆ ಆರಂಭಗೊಂಡ ಪ್ರತಿಭಟನೆ ಬಿ.ಡಿ.ರಸ್ತೆಯಲ್ಲಿ ಸಾಗುತ್ತಾ, ಎಂ.ಜಿ.ವೃತ್ತ, ಎಸ್‌ಬಿಎಂ ವೃತ್ತ, ಐ.ಬಿ.ವೃತ್ತವನ್ನು ದಾಟಿ ಜಿಲ್ಲಾಧಿಕಾರಿ ಕಚೇರಿ ವೃತ್ತವನ್ನು ತಲುಪಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕಾಡುಗೊಲ್ಲ ಸಮುದಾಯದ ಮುಖಂಡ ಮೀಸೆ ಮಹಾಲಿಂಗಪ್ಪ, ‘ರಾಜ್ಯದಲ್ಲಿ ಕಾಡುಗೊಲ್ಲ ಎಂಬ ಜಾತಿ ಇಲ್ಲ ಎಂದು ಹೇಳಲಾಗುತ್ತಿದೆ. ಇದರಿಂದ ಸಮುದಾಯ ಅನೇಕ ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಗೊಲ್ಲರ ಹಟ್ಟಿಗಳು ಮೂಲ ಸೌಕರ್ಯಗಳಿಂದ ವಂಚಿತವಾಗಿವೆ. ಮಕ್ಕಳಿಗೆ ಶಿಕ್ಷಣ ಸೌಲಭ್ಯ ಪಡೆಯಲು ಕಷ್ಟವಾಗುತ್ತಿದೆ’ ಎಂದು ದೂರಿದರು.
‘ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ರಾಜ್ಯದ ಅಧಿಕೃತ ಜಾತಿಪಟ್ಟಿಗೆ ಕಾಡುಗೊಲ್ಲರನ್ನು ಸೇರ್ಪಡೆ ಗೊಳಿಸಬೇಕು. ಶೀಘ್ರ ಜಾತಿ ಪ್ರಮಾಣ ಪತ್ರ ನೀಡಬೇಕು’ ಎಂದರು. ಸಂಘಟನೆಯ ರಾಜ್ಯ ಗೌರವಾಧ್ಯಕ್ಷ ಸಿ.ಶಿವು ಯಾದವ್ ಮಾತನಾಡಿ, ‘ಸರ್ಕಾರದ ಆದೇಶದಂತೆ ಅಲೆಮಾರಿ ವಿದ್ಯಾರ್ಥಿಗಳಿಗೆ ಊಟ ಮತ್ತು ವಸತಿ ವ್ಯವಸ್ಥೆ ಜಾರಿಗೊಳಿಸಬೇಕು. ಎಲ್ಲ ಗೊಲ್ಲರಹಟ್ಟಿಗಳನ್ನು ಕಂದಾಯ ಗ್ರಾಮಗಳಾಗಿ ಮಾಡಲು ಸರ್ಕಾರ ವಿಶೇಷ ಕಾನೂನು ರಚಿಸಬೇಕು. ಕಾಡುಗೊಲ್ಲರಿಗೆ ಪ್ರತ್ಯೇಕ ಪ್ರಾಧಿಕಾರ ರಚಿಸಿ, ಸಮುದಾಯದ ಸರ್ವ ತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು’ ಎಂದು ಒತ್ತಾಯಿಸಿದರು.
‘ಬೇಡಿಕೆಗಳು ಈಡೇರದಿದ್ದರೆ, ಹೋರಾಟವನ್ನು ತೀವ್ರಗೊಳಿಸ ಲಾಗುವುದು’ ಎಂದು ಎಚ್ಚರಿಸಿದರು.ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ನಾಗಪ್ಪ, ಕಾಡುಗೊಲ್ಲರ ಯುವ ಸೇನೆ ಜಿಲ್ಲಾಧ್ಯಕ್ಷ ಎಸ್. ರಾಜ್‌ಕುಮಾರ್, ರಾಜ್ಯ ಗೌರವ ಸಂಚಾಲಕ ಜೆ. ಜಗದೀಶ್ ಕರುನಾಡ ಮಿತ್ರ, ರಾಜ್ಯ ಘಟಕದ ಅಧ್ಯಕ್ಷ ಜಿ.ವಿ.ರಮೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್. ಪ್ರಕಾಶ್ ಸೇರಿದಂತೆ ಪಾಲ್ಗೊಂಡರು. ಪ್ರತಿಭಟನೆಯಲ್ಲಿ ದಾವಣಗೆರೆ, ತುಮಕೂರು ಜಿಲ್ಲೆಗಳಲ್ಲಿನ ಕಾಡುಗೊಲ್ಲರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.