ADVERTISEMENT

ಜಿಲ್ಲೆಯಲ್ಲಿ 22,116 ಬೈಸಿಕಲ್ ವಿತರಣೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2011, 8:40 IST
Last Updated 21 ಜೂನ್ 2011, 8:40 IST

ಚಿತ್ರದುರ್ಗ: ಜಿಲ್ಲೆಯಲ್ಲಿ ಹಿಂದಿನ ವರ್ಷ 46,834 ಸೈಕಲ್ ಹಾಗೂ ಈ  ಬಾರಿ 22,116 ಸೈಕಲ್ ವಿತರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಮತ್ತು ಕಂದಾಯ ಸಚಿವ ಜಿ. ಕರುಣಾಕರರೆಡ್ಡಿ ತಿಳಿಸಿದರು.

ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಸೋಮವಾರ ಜಿಲ್ಲಾಮಟ್ಟದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್ ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ 20 ಲಕ್ಷ ವಿದ್ಯಾರ್ಥಿಗಳಿಗೆ ಬೈಸಿಕಲ್ ವಿತರಿಸಲಾಗಿದೆ. ಬೈಸಿಕಲ್‌ಗಳನ್ನು ಸದುಪಯೋಗಪಡಿಸಿಕೊಳ್ಳಿ. ಅಪ್ಪ, ಅಣ್ಣನಿಗೆ ಕೊಡಬೇಡಿ ಎಂದು ಸಚಿವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಗರದಲ್ಲಿ ಐಎಎಸ್ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲು ಕೇಂದ್ರವನ್ನು ಆರಂಭಿಸಲಾಗಿದೆ ಎಂದರು.

ರಾಜ್ಯದಲ್ಲಿ 10 ಲಕ್ಷ ಮಂದಿಗೆ ಭಾಗ್ಯಲಕ್ಷ್ಮಿ ಬಾಂಡ್ ವಿತರಣೆ ಸೇರಿದಂತೆ ಪರಿಶಿಷ್ಟರಿಗೆ ಹಲವಾರು ಅಭಿವೃದ್ಧಿ ಕಾರ್ಯಕೈಗೊಳ್ಳಲಾಗಿದೆ ಎಂದರು.

ರಾಜ್ಯದಲ್ಲಿ ಹೆಣ್ಣುಮಕ್ಕಳ ಸಾಕ್ಷರತಾ ಪ್ರಮಾಣ ಶೇ. 64ರಷ್ಟು ಇದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಶೇ. 62ರಷ್ಟು ಇದೆ. 10 ವರ್ಷದ ಹಿಂದೆ ಶೇ. 45ರಷ್ಟು ಇತ್ತು. ಈ ಮೂಲಕ ಶೇ. 17ರಷ್ಟು ಬೆಳವಣಿಗೆಯಾಗಿರುವುದು ಸಂತಸದ ವಿಷಯ. ಆದರೆ, ಗಂಡುಮಕ್ಕಳ ಸಾಕ್ಷರತೆ ಪ್ರಮಾಣದಲ್ಲಿ ಶೇ. 12ರಷ್ಟು ಹಿನ್ನಡೆಯಾಗಿದೆ.

ಆದ್ದರಿಂದ ವಿಶೇಷ ಅನುದಾನ ನೀಡಿ ಸಾಕ್ಷರತೆ ಪ್ರಮಾಣ ಹೆಚ್ಚಿಸಬೇಕಾಗಿದೆ ಎಂದು ತಿಳಿಸಿದರು.
ಇದಕ್ಕೂ ಮೊದಲು ಸಚಿವ ವೀರವನಿತೆ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ್ಙ 3 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಸಿಂಥೆಟಿಕ್ ಟ್ರ್ಯಾಕ್ ಉದ್ಘಾಟಿಸಿದರು. ಕಳೆದ ಮೂರ‌್ನಾಲ್ಕು ತಿಂಗಳ ಹಿಂದೆ ಟ್ರ್ಯಾಕ್ ಸಿದ್ಧವಾಗಿದ್ದರೂ ಇದುವರೆಗೂ ಉದ್ಘಾಟನೆಯಾಗಿರಲಿಲ್ಲ.

ಜಿ.ಪಂ. ಅಧ್ಯಕ್ಷ ಸಿ. ಮಹಾಲಿಂಗಪ್ಪ, ಶಾಸಕ ಗೂಳಿಹಟ್ಟಿ ಡಿ. ಶೇಖರ್, ವಿಧಾನಪರಿಷತ್ ಸದಸ್ಯರಾದ ಜಿ.ಎಚ್. ತಿಪ್ಪಾರೆಡ್ಡಿ, ಎನ್.ವೈ. ನಾರಾಯಣಸ್ವಾಮಿ, ನಗರಸಭೆ ಅಧ್ಯಕ್ಷೆ ಸುನೀತಾ ಮಲ್ಲಿಕಾರ್ಜುನ್, ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಎಚ್. ಚಂದ್ರಪ್ಪ, ತಾ.ಪಂ. ಅಧ್ಯಕ್ಷ ಆನಂದ್, ಉಪಾಧ್ಯಕ್ಷೆ ನಿರ್ಮಲ, ಜಿಲ್ಲಾಧಿಕಾರಿ ವಿಪುಲ್ ಬನ್ಸಾಲ್, ಜಿ.ಪಂ. ಸಿಇಒ ರಂಗೇಗೌಡ, ಜ್ಲ್ಲಿಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ನಾಗರಾಜ್, ಡಿಡಿಪಿಐ ಎಚ್. ಮಂಜುನಾಥ್, ಡಯಟ್ ಪ್ರಾಂಶುಪಾಲ ಎಂ. ಮಲ್ಲಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ರವಿಶಂಕರರೆಡ್ಡಿ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.