ADVERTISEMENT

ತೋಳಗಳ ದಾಳಿಗೆ 24 ಕುರಿಗಳು ಬಲಿ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2011, 8:20 IST
Last Updated 10 ಅಕ್ಟೋಬರ್ 2011, 8:20 IST

ಹೊಸದುರ್ಗ: ತೋಳಗಳ ಹಿಂಡೊಂದು ಕುರಿ ಮಂದೆಯ ಮೇಲೆ ದಾಳಿ ನಡೆಸಿ 24 ಕುರಿಗಳನ್ನು ಬಲಿ ತೆಗೆದುಕೊಂಡ ಘಟನೆ ತಾಲ್ಲೂಕಿನ ಮತ್ತೋಡು ಹೋಬಳಿ ಅಜ್ಜಿಕಂಸಾಗರ ಗ್ರಾಮದಲ್ಲಿ ಭಾನುವಾರ ನಸುಕಿನ ವೇಳೆ ಜರುಗಿದೆ.

ಗ್ರಾಮದ ಹೊರವಲಯದಲ್ಲಿನ ರೊಪ್ಪದಲ್ಲಿನ ಕುರಿಗಳನ್ನು ಕಾದು ಕೊಂಡಿದ್ದ ಕುರಿಗಾಹಿಗಳು ಬೆಳಗಾಗುತ್ತಲೇ ಮನೆಗೆ ಮರಳಿದಾಗಿ ಕುರಿ ಹಿಂಡಿನಮೇಲೆ ದಾಳಿ ಇಟ್ಟ 8-10 ತೋಳಗಳು ಮನಸೋ ಇಚ್ಛೆ ಕುರಿಗಳನ್ನು ಹಿಡಿದು ರಕ್ತಹೀರಿವೆ. ತೋಳಗಳ ದಾಳಿಯಿಂದಾಗಿ 24 ಕುರಿಗಳು ಸ್ಥಳದಲ್ಲಿಯೇ ಮೃತಪಟ್ಟರೆ 15 ಕುರಿಗಳು ಚಿಂತಾಜನಕ ಸ್ಥಿತಿಯಲ್ಲಿವೆ.

ಅಜ್ಜಿಕಂಸಾಗರದ ರಾಮಚಂದ್ರಪ್ಪ ಎಂಬುವರಿಗೆ ಸೇರಿದ 7 ಕುರಿಗಳು ಮೃತ ಪಟ್ಟಿದ್ದು, 5 ಕುರಿಗಳು ತೀವ್ರವಾಗಿ ಗಾಯಗೊಂಡಿದ್ದು, ಯಾವುದೇ ಸಂದರ್ಭದಲ್ಲಿ ಸಾಯುವ ಸ್ಥಿತಿಯಲ್ಲಿವೆ. ರಾಮಪ್ಪ ಎಂಬುವರಿಗೆ ಸೇರಿದ 10 ಕುರಿಗಳು ಮೃತಪಟ್ಟು, 5 ಕುರಿಗಳು ಚಿಂತಾಜನಕ ಸ್ಥಿತಿ ತಲುಪಿವೆ. ದೊಡ್ಡಯ್ಯ ಎಂಬುವರಿಗೆ ಸೇರಿದ 7 ಕುರಿಗಳು ಮೃತಪಟಿಟಟ್ಟಿದ್ದರೆ 5 ಕುರಿಗಳು ಗಾಯಗೊಂಡಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ತೋಳಗಳ ದಾಳಿಯಿಂದಾಗಿ ಕುರಿ ಮಾಲೀಕರಿಗೆ ಸುಮಾರು ್ಙ 2 ಲಕ್ಷ ನಷ್ಟ ಸಂಭವಿಸಿದ್ದು, ಬರದ ಬೇಗೆಯಲ್ಲಿ ಬೇಯುತ್ತಿರುವ ರೈತಾಪಿ ಜನರಿಗೆ ಗಾಯದ ಮೇಲೆ  ಬರೆ ಎಳೆದಂತಾಗಿದೆ.

ಪಶು ವೈದ್ಯರು ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿದರು. ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿರತೆ ಪ್ರತ್ಯಕ್ಷ: ಈಚೆಗೆ ತಾಲ್ಲೂಕಿನ ಶ್ರೀರಾಂಪುರ ಹೋಬಳಿ ಬೆಲಗೂರು ಸಮೀಪ ರಸ್ತೆ ದಾಟುತ್ತಿದ್ದ ಚಿರತೆಯೊಂದು ಅಪರಿಚಿತ ವಾಹನಕ್ಕೆ ಬಲಿಯಾದ ಕೆಲವೇ ದಿನಗಳಲ್ಲಿ ಮತ್ತೆ ಜಮೀನುಗಳಲ್ಲಿ ಚಿರತೆಗಳು ಕಾಣಿಸಿಕೊಂಡು ರೈತಾಪಿ ಜನರನ್ನು ಭಯಭೀತಿಗೊಳಿಸಿವೆ.

ಹೊಸಹಟ್ಟಿಯ ಜಮೀನೊಂದರಲ್ಲಿ ಚಿರತೆ  ಕಾಣಿಸಿಕೊಂಡಿದ್ದು,  ರೈತನೊಬ್ಬ ಭೀತಿಯಿಂದ ಓಡಿ ಹೋಗಿದ್ದಾನೆ. ಈಚೆಗೆ ಕಾಡು ಪ್ರಾಣಿಗಳು ಗ್ರಾಮಗಳಿಗೆ ನುಗ್ಗಿ ಜನರನ್ನು ಭಯಭೀತರನ್ನಾಗಿಸುತ್ತಿವೆ.  ಜತೆಗೇ, ಜಾನುವಾರುಗಳ ಪ್ರಾಣಕ್ಕೆ ಕುತ್ತು ತರುತ್ತಿದ್ದು ಸಂಬಂಧಿಸಿದವರು ಕಾಡು ಪ್ರಾಣಿಗಳ ಹಾವಳಿ ತಪ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ತಾಲ್ಲೂಕಿನ ಜನರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.