ಚಿತ್ರದುರ್ಗ: ದಶಕಗಳ ಬೇಡಿಕೆಯಾದ ದಾವಣಗೆರೆ-ಚಿತ್ರದುರ್ಗ-ತುಮಕೂರು ರೈಲ್ವೆ ಮಾರ್ಗ ತ್ವರಿತಗತಿಯಲ್ಲಿ ನಡೆಯುವ ಆಶಾವಾದವನ್ನು ಸಂಸದ ಜನಾರ್ದನಸ್ವಾಮಿ ವ್ಯಕ್ತಪಡಿಸಿದ್ದಾರೆ.
ರೈಲ್ವೆ ಬಜೆಟ್‌ಗೆ ಪ್ರತಿಕ್ರಿಯೆ ನೀಡಿರುವ ಅವರು, ಯೋಜನಾ ಆಯೋಗ ಅನುಮೋದನೆ ನೀಡಿರುವ ರೈಲ್ವೆ ಯೋಜನೆಗಳನ್ನು ಪ್ರಥಮ ಆದ್ಯತೆಯ ಮೇರೆಗೆ ಕೈಗೊಳ್ಳುವುದಾಗಿ ರೈಲ್ವೆ ಸಚಿವರು ತಿಳಿಸಿದ್ದಾರೆ.
ಆದ್ದರಿಂದ, ರೂ. 913 ಕೋಟಿ ಅಂದಾಜು ವೆಚ್ಚದ ದಾವಣಗೆರೆ-ಚಿತ್ರದುರ್ಗ-ತುಮಕೂರುರೈಲ್ವೆ ಮಾರ್ಗಕ್ಕೆ ಈಗಾಗಲೇ ಯೋಜನಾ ಆಯೋಗ ಅನುಮೋದನೆ ನೀಡಿರುವುದರಿಂದ ಈ ಯೋಜನೆಗೆ ಸಹಜವಾಗಿ ಆದ್ಯತೆ ದೊರೆಯಲಿದೆ ಎಂದು ತಿಳಿಸಿದರು.
ರಾಷ್ಟ್ರದಲ್ಲಿ ಒಟ್ಟು 31 ರೈಲ್ವೆ ಯೋಜನೆಗಳನ್ನು ರಾಜ್ಯ ಸರ್ಕಾರದ ಸಹಯೋಗದಲ್ಲಿ ಕೈಗೊಳ್ಳಲಾಗಿದೆ. ಇವುಗಳಲ್ಲಿ 14 ಯೋಜನೆಗಳು ಕರ್ನಾಟಕಕ್ಕೆ ಸೇರಿವೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ನೇರ ರೈಲ್ವೆ ಯೋಜನೆಯನ್ನು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಕೈಗೊಳ್ಳಲು ಒಪ್ಪಿಗೆ ಸೂಚಿಸಿದ್ದರಿಂದ ದಶಕಗಳ ಯೋಜನೆ ಈಗ ಅನುಷ್ಠಾನಗೊಳ್ಳುತ್ತಿದೆ. ರೈಲ್ವೆ ಖಾತೆ ರಾಜ್ಯ ಸಚಿವ ಮುನಿಯಪ್ಪ ಅವರು ಸಹ ಹೆಚ್ಚಿನ ಆಸಕ್ತಿ ತೋರಿದರು. ಆದ್ದರಿಂದ, ಈ ಯೋಜನೆಗೆ ಸಹಕರಿಸಿದ ಬಿ.ಎಸ್. ಯಡಿಯೂರಪ್ಪ, ಮುನಿಯಪ್ಪ ಅಭಿನಂದನೆ ಸಲ್ಲಿಸಬೇಕು. ಇದೇ ರೀತಿ ಈಗಿನ ಮುಖ್ಯಮಂತ್ರಿ ಸದಾನಂದಗೌಡ ಅವರು ಬೆಂಬಲ ನೀಡುತ್ತಿದ್ದಾರೆ ಎಂದು ವಿವರಿಸಿದರು.
ಈಗಾಗಲೇ ಈ ಯೋಜನೆಯ ಅಂತಿಮ ಸ್ಥಳ ಸಮೀಕ್ಷೆ (ಎಫ್‌ಎಲ್‌ಎಸ್) ನಡೆಸಲು ಒಂದು ಕೋಟಿ ರೂಪಾಯಿಗೆ ಟೆಂಡರ್ ಕರೆಯಲಾಗಿದೆ. ಆದ್ದರಿಂದ ಯೋಜನೆ ಇನ್ನೂ ಮುಂದೆ ಮತ್ತಷ್ಟು ತ್ವರಿತಗತಿಯಲ್ಲಿ ನಡೆಯುವ ವಿಶ್ವಾಸವಿದೆ. ಈ ಯೋಜನೆಗಾಗಿ ದಶಕಗಳಿಂದ ಹೋರಾಟ ನಡೆಸಿರುವ ರೈಲ್ವೆ ಹೋರಾಟ ಸಮಿತಿ, ಜನಪ್ರತಿನಿಧಿಗಳು, ಮಠಾಧೀಶರು ಹಾಗೂ ಸಾರ್ವಜನಿಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.