ADVERTISEMENT

ದುರ್ಗದ ಇತಿಹಾಸ ಸಾರಿದ ಆದರ್ಶ ಮಕ್ಕಳು

​ಪ್ರಜಾವಾಣಿ ವಾರ್ತೆ
Published 27 ಜನವರಿ 2012, 10:45 IST
Last Updated 27 ಜನವರಿ 2012, 10:45 IST

ಚಳ್ಳಕೆರೆ: ಕರ್ನಾಟಕ ಇತಿಹಾಸದಲ್ಲಿ ಚಿತ್ರದುರ್ಗಕ್ಕೆ ತನ್ನದೇ ಆದ ಐತಿಹಾಸಿಕ ಮಹತ್ವ ಇದೆ. ದುರ್ಗದ ಏಳು ಸುತ್ತಿನ ಕೋಟೆಯನ್ನು ಆಳಿದ ನಾಯಕರ ಹೆಸರಿನ ಜತೆಗೆ ವೀರ ಮಹಿಳೆ ಎನಿಸಿಕೊಂಡ ಓಬವ್ವ ಎದುರಾಳಿಗಳನ್ನು ಮಟ್ಟ ಹಾಕಿದ ಸಾಹಸಮಯ ಇತಿಹಾಸ ಚರಿತ್ರೆಯಲ್ಲಿ ಎಂದೋ ದಾಖಲಾಗಿದೆ.
 
ಇಂತಹ ಐತಿಹಾಸಿಕ ಹಿನ್ನೆಲೆಯ ಚರಿತ್ರೆಯನ್ನು ಪಟ್ಟಣದ ಆದರ್ಶ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು ಗಣರಾಜ್ಯೋತ್ಸವ ವೇಳೆ ಇಲ್ಲಿನ ಬಿ.ಎಂ. ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಬಿಸಿಲಿಗೂ ಜಗ್ಗದೇ ಹಾಡಿನ ರೂಪಕವನ್ನು ಪ್ರದರ್ಶಿಸಿದ ಬಗೆ ನೋಡುಗರ ಮೈನವಿರೇಳಿಸುವಂತೆ ಮಾಡಿತು.

ದುರ್ಗದ ಇತಿಹಾಸ ಕುರಿತ ಯಾವುದೇ ಏಕಪಾತ್ರಾಭಿನಯ, ಹಾಡುಗಳನ್ನು ಕೇಳುವ ಸಂದರ್ಭದಲ್ಲಿ ಇತಿಹಾಸ ಗೊತ್ತಿರುವ ಎಲ್ಲರಿಗೂ ಕ್ಷಣಕಾಲ ಮೈ ರೋಮಾಂಚನಗೊಳ್ಳುವುದು ಸಹಜ. ಆದರೆ, ಆಗಿನ್ನೂ ಎಳೆ ಬಿಸಿಲು ದೇಹದ ಮೇಲೆ ಬೀರುತ್ತಿದ್ದರೂ ಮಕ್ಕಳು ಮಾತ್ರ ಅದ್ಭುತ ರೂಪಕ ಪ್ರದರ್ಶನ ನೀಡಿದ್ದು ಸಾವಿರಾರು ವಿದ್ಯಾರ್ಥಿಗಳು, ಪೋಷಕರು, ಜನಪ್ರತಿನಿಧಿಗಳು, ಅಧಿಕಾರಿ ವರ್ಗವನ್ನು ಮಂತ್ರ ಮುಗ್ಧರನ್ನಾಗಿಸುವಂತಿತ್ತು. ಮಕ್ಕಳು ಪ್ರದರ್ಶಿಸುತ್ತಿರುವ ಪ್ರತಿ ದೃಶ್ಯಕ್ಕೂ ನೋಡುಗರಿಂದ ಚಪ್ಪಾಳೆಯ ಪ್ರೋತ್ಸಾಹ ಹೊರ ಹೊಮ್ಮಿತು.

ನವಾಬ ಹೈದರನ ಸೈನ್ಯ ಚಿತ್ರದುರ್ಗ ಕೋಟೆಗೆ ಕಿಂಡಿಯ ಕಿರಿದಾದ ದಾರಿಯಲ್ಲಿ ನಸುಳಲು ಯತ್ನಿಸುತ್ತಿರುವ ಸಂದರ್ಭದಲ್ಲಿ ಧೈರ್ಯದಿಂದ ಮುನ್ನುಗಿದ ಓಬವ್ವ ಶತ್ರುಗಳ ನೆತ್ತರನ್ನು ಹರಿಸಿ, ಹೆಣಗಳ ಗುಡ್ಡೆ ಹಾಕಿದ್ದು ಮಾತ್ರ ಜಿಲ್ಲೆಯ ರೋಚಕ ಇತಿಹಾಸಕ್ಕೆ ಕನ್ನಡಿ ಹಿಡಿದಿದೆ. ಅಂದಿನಿಂದಲೇ ಒನಕೆ ಓಬವ್ವ ಚರಿತ್ರೆಯ ಪುಟಗಳಲ್ಲಿ ಅಮರಳಾದಳು.
ಇಂತಹ ಐತಿಹಾಸಿಕ ದೃಶ್ಯಾವಳಿಗಳನ್ನು ಶಾಲಾ ಮಕ್ಕಳಿಂದ ಪ್ರಯೋಗಕ್ಕೆ ಇಳಿಸಿದ ಶಿಕ್ಷಕರ ಕ್ರಿಯಾಶೀಲತೆಯನ್ನು ನೆರೆದಿದ್ದ ಜನರು ಮೆಚ್ಚುವಂತೆ ಮಾಡಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.