ADVERTISEMENT

ನಗರದಲ್ಲಿ ಅದ್ದೂರಿ ಮಾರಿಕಾಂಬಾ ಜಾತ್ರಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2011, 9:15 IST
Last Updated 21 ಸೆಪ್ಟೆಂಬರ್ 2011, 9:15 IST
ನಗರದಲ್ಲಿ ಅದ್ದೂರಿ ಮಾರಿಕಾಂಬಾ ಜಾತ್ರಾ ಮಹೋತ್ಸವ
ನಗರದಲ್ಲಿ ಅದ್ದೂರಿ ಮಾರಿಕಾಂಬಾ ಜಾತ್ರಾ ಮಹೋತ್ಸವ   

ಚಿತ್ರದುರ್ಗ: ನಗರದ ಸಿ.ಕೆ. ಪುರದ ಬಳಿಯ ವಿವಿಧ ಬಡಾವಣೆಗಳಲ್ಲಿ ಮಾರಮ್ಮ ಜಾತ್ರಾ ಮಹೋತ್ಸವ ಸಡಗರ ಹಾಗೂ ಸಂಭ್ರಮದಿಂದ ಮಂಗಳವಾರ ನಡೆಯಿತು.ಸೋಮವಾರ ದೇವಿಗಳ ಮೆರವಣಿಗೆ ಅದ್ದೂರಿಯಿಂದ ನಡೆಯಿತು.

ನಗರದ ಐತಿಹಾಸಿಕ ದೇವತೆಗಳಾದ ಸಿ.ಕೆ. ಪುರದ ಗೌರಸಮುದ್ರ ಮಾರಮ್ಮ, ತ್ರಿಪುರ ಸುಂದರಿ ತಿಪ್ಪಿನಘಟ್ಟಮ್ಮ, ರಾಯರಹಟ್ಟಿಯ ಮಾರಮ್ಮ, ಬೊಸೇದೇವರಹಟ್ಟಿ ಬೊಸೇದೇವರು ಹಾಗೂ ಮಾರಮ್ಮ  ಮತ್ತು ಗುಡಿಮಾಳಜ್ಜಿ ದೇವರು, ಅಂಬೇಡ್ಕರ್ ನಗರದ ಮಾರಮ್ಮ ಹಾಗೂ ದುರ್ಗಾಂಬಿಕೆದೇವಿ, ಕರಿಯಪ್ಪನಹಟ್ಟಿಯ ಕೊಲ್ಲಾಪುರದಮ್ಮ ಹಾಗೂ ಸರ್ಕಾರಿ ವಿಜ್ಞಾನ ಕಾಲೇಜಿನ ಮುಂಭಾಗದಲ್ಲಿ ಇರುವ ಗಾಳಿ ಮಾರಮ್ಮ ದೇವಿಯ ಜಾತ್ರೆಯೂ ಪೂಜಾ ಕಾರ್ಯಕ್ರಮ ವಿಶಿಷ್ಟ ರೀತಿಯಲ್ಲಿ ನಡೆಯಿತು.

ಸಿ.ಕೆ. ಪುರದ ಮಾರಿಕಾಂಬಾ ಸಮಿತಿಯಿಂದ ತಿಪ್ಪಿನ ಘಟ್ಟಮ್ಮ ಹಾಗೂ ಮಾರಮ್ಮದೇವಿ ಹಾಗೂ ಬೋಸೇದೇವರ ಹಟ್ಟಿಯ ಮಾರಮ್ಮ ಹಾಗೂ ಬೋಸೇದೇವರನ್ನು ಹೂವಿನ ಪಲ್ಲಕ್ಕಿ ಹಾಗೂ ದೀಪಾಲಂಕಾರಗಳೊಂದಿಗೆ ಆಕರ್ಷಕ ರೀತಿಯಲ್ಲಿ ಮೆರವಣಿಗೆ ಮಾಡಲಾಯಿತು.
 

ಜನಪದ ಕಲಾ ತಂಡಗಳು, ಡೊಳ್ಳು, ಉರಿಮೆ, ತಮಟೆ ವಾದ್ಯಗಳು ಮೆರವಣಿಗೆಗೆ ಮೆರುಗು ನೀಡಿದ್ದವು. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು.

ಮಾರಮ್ಮನ ಹಬ್ಬ ಈ ಭಾಗದಲ್ಲಿ ವಿಶಿಷ್ಟವಾಗಿ ಆಚರಿಸಲಾಗುತ್ತಿದೆ. ಈ ಹಬ್ಬಕ್ಕೆ ಬಂಧು-ಬಳಗದವರು ಹೊರ ಊರಿನಲ್ಲಿ ಕೆಲಸದಲ್ಲಿರುವವರು ಈ ಜಾತ್ರೆಗೆ ಕಡ್ಡಾಯವಾಗಿ ಬರುವುದು ವಾಡಿಕೆ. ಎಲ್ಲರೂ ಸೇರಿ ಬಾಡೂಟ ಮಾಡುವುದು ವಿಶೇಷ.

ನೂರಾರು ಕುರಿ-ಕೋಳಿಗಳ ಬಲಿ: ಸಿ.ಕೆ. ಪುರದ ವಿವಿಧ ಬಡಾವಣೆಯ ಆಯಾ ಭಾಗದ ದೇವಸ್ಥಾನ ಮುಂಭಾಗದಲ್ಲಿ ಡೊಳ್ಳು, ಉರಿಮೆ, ಕಾಳೆ ನಂದಿಕೋಲು ಹಾಗೂ ವಿವಿಧ ವಾದ್ಯಗಳೊಂದಿಗೆ ನೂರಾರು ಕುರಿ ಹಾಗೂ ಕೋಳಿಗಳನ್ನು ಬಲಿ ನೀಡಲಾಯಿತು.

ಇದಕ್ಕೂ ಮುನ್ನ ಕುರಿಗಳಿಗೆ ಹೂ ಕುಂಕುಮ ಹಾಗೂ ಕೊರಳಿಗೆ ಹಾರ ಹಾಕಿ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಕರೆ ತಂದು ಮಚ್ಚಿನಿಂದ ಕುರಿಗಳನ್ನು ಒಂದೇ ಏಟಿಗೆ ಕಡಿಯುವ ಸ್ಪರ್ಧೆ ನಡೆಯುತ್ತದೆ. ಈ ಹಬ್ಬದಲ್ಲಿ ಸಾವಿರಾರು ಕುರಿ-ಕೋಳಿಗಳನ್ನು ಬಲಿ ನೀಡಲಾಗುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT