ADVERTISEMENT

ನಗರಸಭೆ ಅವ್ಯವಸ್ಥೆಗೆ ಕಂಗೆಟ್ಟ ಅಂಗವಿಕಲೆ

ಅಧ್ಯಕ್ಷೆ, ಆಯುಕ್ತರ ನಡುವೆ ಜಟಾಪಟಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2012, 11:25 IST
Last Updated 18 ಡಿಸೆಂಬರ್ 2012, 11:25 IST
ಚಿತ್ರದುರ್ಗದ ನಗರಸಭೆ ಕಚೇರಿ ಮುಂದೆ ತ್ರಿಚಕ್ರ ವಾಹನಕ್ಕೆ ಅರ್ಜಿಸಲ್ಲಿಸಿದ್ದ ಅಂಗವಿಕಲೆ ರೇಣುಕಮ್ಮ (ಕುಳಿತವರು).
ಚಿತ್ರದುರ್ಗದ ನಗರಸಭೆ ಕಚೇರಿ ಮುಂದೆ ತ್ರಿಚಕ್ರ ವಾಹನಕ್ಕೆ ಅರ್ಜಿಸಲ್ಲಿಸಿದ್ದ ಅಂಗವಿಕಲೆ ರೇಣುಕಮ್ಮ (ಕುಳಿತವರು).   

ಚಿತ್ರದುರ್ಗ: ಅಂಗವಿಕಲೆಯೊಬ್ಬರಿಗೆ ತ್ರಿಚಕ್ರ ವಾಹನ ನೀಡಲು ನಗರಸಭೆ ಆಯುಕ್ತರು ಮತ್ತು ಸಿಬ್ಬಂದಿ ಪದೇ ಪದೇ ಅಲೆದಾಡಿಸಿದ ಪ್ರಸಂಗ ಸೋಮವಾರ ವಿಕೋಪಕ್ಕೆ ತಿರುಗಿತು. ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಧ್ಯಪ್ರವೇಶಿಸಿ ನಗರಸಭೆ ಆಡಳಿತದ ಅವ್ಯವಸ್ಥೆಯನ್ನು ಖಂಡಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇದೇ ಸಂದರ್ಭದಲ್ಲಿ ಅಧ್ಯಕ್ಷೆ ಸುನಿತಾ ಮಲ್ಲಿಕಾರ್ಜುನ್ ಮತ್ತು ಆಯುಕ್ತರಾದ ಭಾರತಿ ನಡುವೆ ಬಿರುಸಿನ ಮಾತಿನ ಚಕಮಕಿಗೆ ಈ ಪ್ರಸಂಗ ಸಾಕ್ಷಿಯಾಯಿತು.

ನಗರದ ಕಾಮನಬಾವಿ ಬಡಾವಣೆಯ ರೇಣುಕಮ್ಮ ಹುಟ್ಟು ಅಂಗವಿಕಲೆಯಾಗಿದ್ದು, ಎರಡೂ ಕಾಲುಗಳು ಊನವಾಗಿವೆ. ಕೈಗಳ ಸಹಾಯದಿಂದ ರೇಣುಕಮ್ಮ ತೆವಳಿಕೊಂಡು ನಡೆಯಬೇಕಾದ ಪರಿಸ್ಥಿತಿ. ಇದರಿಂದ ನಡೆದಾಡಲು ತೀವ್ರ ಸಂಕಟ ಪಡುತ್ತಿದ್ದರು. ಈ ನರಕಯಾತನೆಯಿಂದ ಹೊರಬರಲು ಅಂಗವಿಕಲರಿಗೆ ನಗರಸಭೆಯಿಂದ ನೀಡುವ ತ್ರಿಚಕ್ರದ ವಾಹನ ಪಡೆಯಲು ರೇಣುಕಮ್ಮ ಅರ್ಜಿ ಹಾಕಿದ್ದರು. ಈ ಹಿಂದೆ ಎರಡು ಬಾರಿ ಅರ್ಜಿ ಸಲ್ಲಿಸಿದ್ದರೂ ತ್ರಿಚಕ್ರ ವಾಹನ ಮಂಜೂರಾಗಿರಲಿಲ್ಲ. ಈಗ ಮೂರನೇ ಬಾರಿ ಅರ್ಜಿ ಹಾಕಿ ಮುಂಜೂರಾತಿಯೂ ದೊರೆಯಿತು.

ಒಟ್ಟು ಹತ್ತು ಮಂದಿ ಅಂಗವಿಕಲರು ಸೌಲಭ್ಯ ಪಡೆಯಲು ಅರ್ಜಿ ಹಾಕಿದ್ದು, ಅವರಲ್ಲಿ ಆರು ಮಂದಿಗೆ ತ್ರಿಚಕ್ರ ವಾಹನ ಮೊಪೆಡ್ ತರಿಸಲಾಗಿತ್ತು. ಅದನ್ನು ಪಡೆಯಲು ಕಳೆದ ಒಂದು ತಿಂಗಳಿನಿಂದ ನಗರಸಭೆಗೆ ಅಲೆಯುತ್ತಿದ್ದೇನೆ. ನಗರಸಭೆ ಸಿಬ್ಬಂದಿ ಇಂದು,ನಾಳೆ ಎಂದು ಅನಗತ್ಯವಾಗಿ ನನ್ನನ್ನು ಅಲೆದಾಡಿಸುತ್ತಿದ್ದಾರೆ. ಪೌರಾಯುಕ್ತರನ್ನು ಕೇಳಲು ಹೋದರೆ ನನ್ನನ್ನು ಗದರಿಸುತ್ತಾರೆ. ನಮ್ಮ ಮೇಲೆ ದೌರ್ಜನ್ಯ ನಡೆಸುತ್ತಾರೆಂದು ರೇಣುಕಮ್ಮ ಹಾಗೂ ಅವರ ಸಂಬಂಧಿಕರು ದೂರಿದರು.

ಅರ್ಹ ಫಲಾನುಭವಿಗಳಿಗೆ ಸೌಲಭ್ಯ ನೀಡುವಂತೆ ನಗರಸಭೆ ಅಧ್ಯಕ್ಷೆ ಸುನಿತಾ ಮಲ್ಲಿಕಾರ್ಜುನ್ ಸಹಿ ಮಾಡಿ ಸಮ್ಮತಿ ಸೂಚಿಸಿದ್ದರೂ ಪೌರಾಯುಕ್ತರಾದ ಎಸ್. ಭಾರತಿ ಅನಗತ್ಯವಾಗಿ ಅಂಗವಿಕಲರಾದ ರೇಣುಕಮ್ಮ ಅವರನ್ನು ಅಲೆದಾಡಿಸುತ್ತಿದ್ದಾರೆ. ಮೊಪೆಡ್‌ಗಳನ್ನು ಖರೀದಿಸಿದ್ದರೂ ಅವುಗಳನ್ನು ನೀಡುವಲ್ಲಿ ಅನಗತ್ಯ ವಿಳಂಬ ಮಾಡುತ್ತಿರುವುದೇಕೆ?. ಸವಲತ್ತು ಕೇಳಲು ಹೋದ ಅಂಗವಿಕಲರನ್ನು ಗದರಿಸುವುದು, ಅವರ ಮೇಲೆ ದೌರ್ಜನ್ಯ ನಡೆಸುವುದು ಸರಿಯಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.