ADVERTISEMENT

`ನನ್ನ ಕುರಿ ಕಾಯುವ ವೃತ್ತಿಗೆ ಆಪತ್ತು ಬಂದಿದೆ...'

ಜಡೇಕುಂಟೆ ಮಂಜುನಾಥ್
Published 25 ಮೇ 2013, 5:40 IST
Last Updated 25 ಮೇ 2013, 5:40 IST

ಚಳ್ಳಕೆರೆ: `ಸ್ವಾಮೀ ನಾವು ದಲಿತ ಕುಟುಂಬದಿಂದ ಬಂದವನು. ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿಯಲ್ಲಿದ್ದ ಕಾರಣ ಅಮೃತ ಮಹಲ್ ಕಾವಲ್‌ನಲ್ಲಿ ಕುರಿ, ದನ, ಮೇಕೆ ಕಾಯಲಿಕ್ಕೆ ನನ್ನನ್ನು ಪ್ರಾಥಮಿಕ ಶಿಕ್ಷಣ ಹಂತದಲ್ಲೇ ಶಾಲೆ ಬಿಡಿಸಲಾಯಿತು. ಅಂದಿನಿಂದ ಇಂದಿನವರೆಗೂ ಕುರಿ, ದನ ಕಾಯುತ್ತಾ ಬಂದ ನನಗೆ ಇದೀಗ ಅಮೃತ ಮಹಲ್ ಕಾವಲ್‌ನಲ್ಲಿ ಅದ್ಯಾರೋ ಸಂಸ್ಥೆಯವರು ಕಾಂಪೌಂಡ್ ಕಟ್ಟಿ ಕುರಿ ಕಾಯುವ ವೃತ್ತಿಗೂ ಅಡ್ಡಗಾಲು ಹಾಕುತ್ತಿದ್ದಾರೆ. ನನ್ನ ಬದುಕೇ ಈಗ ಅತಂತ್ರವಾಗಿದೆ' ಎಂದು ತಮ್ಮ ಗೋಳು ತೋಡಿ ಕೊಂಡವರು ದೊಡ್ಡ ಉಳ್ಳಾರ್ತಿ ಗ್ರಾಮದ ದಲಿತ ಯುವಕ ಓಂಕಾರಪ್ಪ.

ತಾಲ್ಲೂಕಿನ ದೊಡ್ಡ ಉಳ್ಳಾರ್ತಿ ಸಮೀಪದ ಅಮೃತ ಮಹಲ್ ಕಾವಲ್ ಅನ್ನು ದೇಶದ ಪ್ರತಿಷ್ಠಿತ ಸಂಸ್ಥೆಗಳಿಗೆ ಸಾವಿರಾರು ಎಕರೆ ಭೂಮಿಯನ್ನು ಸರ್ಕಾರ ನೀಡಿರುವ ಕ್ರಮದ ವಿರುದ್ಧ ಚೆನ್ನೈನ ಹಸಿರು ನ್ಯಾಯಪೀಠದಲ್ಲಿ ವಕೀಲ ಲಿಯೋ ಸಾಲ್ಡಾನಾ ದಾಖಲಿಸಿರುವ ದೂರಿನ ಸತ್ಯಾಸತ್ಯತೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ನೇಮಿಸಿರುವ ಸತ್ಯ ಶೋಧನಾ ಸಮಿತಿ ತಂಡದ ಸದಸ್ಯರು ಶುಕ್ರವಾರ ಖದ್ದು ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಲು ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಯುವಕನ ಅಂತರಾಳದ ಮಾತುಗಳು ಕೇಳಿ ಬಂದಿದ್ದು ಹೀಗೆ.

`ತಾತ, ಮುತ್ತಾತರ ಕಾಲದಿಂದಲೂ ಇಲ್ಲಿನ ಅಮೃತ ಮಹಲ್ ಕಾವಲ್‌ನಲ್ಲಿ ಜನ ಜಾನುವಾರುಗಳು ತಮ್ಮ ಬದುಕನ್ನು ಕಂಡುಕೊಂಡಿದ್ದವು. ಇದಲ್ಲದೇ ದಿನನಿತ್ಯದ ಅಡುಗೆ ತಯಾರಿಗೆ ಬೇಕಾಗುವ ಉರುವಲನ್ನು ಇದೇ ಕಾವಲ್‌ನಿಂದ ತರಬೇಕಿತ್ತು. ಅನೇಕ ಗಿಡಮೂಲಿಕೆ ಗಿಡಗಳು, ಹಣ್ಣು ಹಂಪಲುಗಳು ಇಲ್ಲಿ ದೊರೆ ಯುತ್ತಿದ್ದವು. ಇದೀಗ ಇಲ್ಲಿ ಕಾಂಪೌಂಡ್ ನಿರ್ಮಾಣ ಆಗುತ್ತಿರುವುದರಿಂದ ಸ್ಥಳೀಯರಿಗೆ ಪ್ರವೇಶ ಇಲ್ಲದಂತಾಗಿರುವುದು ನೋವು ತಂದಿದೆ' ಎಂದು ಅವರು ತಮ್ಮ ಅಳಲನ್ನು ತೋಡಿಕೊಂಡರು.

`ನಾನು ಹುಟ್ಟಿದಾಗಿನಿಂದ ಇದೇ ಕಾವಲ್‌ನ ಜಮೀನಿನಲ್ಲಿ ನಮ್ಮ ದನ, ಕರು, ಎಮ್ಮೆಗಳನ್ನು ಮೇಯಿಸುತ್ತಾ ಬೆಳೆದು ದೊಡ್ಡವಳಾದವಳು. ಈಗ ಅದ್ಯಾರೋ ಸಂಸ್ಥೆ ಅವರು ಬಂದು ತಂತಿ ಬೇಲಿ ಹಾಕಿ ನಾವು ಓಡಾಡುವ ದಾರಿಯನ್ನೇ ಮುಚ್ಚಿ ನಮ್ಮ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ನಾನು ಸಾಯೋ ಕಾಲಕ್ಕೆ ನಮ್ಮ ಮಕ್ಕಳು, ಮೊಮ್ಮಕ್ಕಳನ್ನು ಊರು ಬಿಟ್ಟು ಓಡಿಸೋಕೆ ಎಲ್ಲರೂ ಸಿದ್ದರಾಗಿದ್ದಾರೆ' ಎಂದು ಇಳಿ ವಯಸ್ಸಿನಲ್ಲೂ ಖಡಕ್ಕಾಗಿ ಹೇಳಿದವರು ವೃದ್ಧೆ ನಾಗಜ್ಜಿ.

ಹೀಗೇ ತಮ್ಮ ಅಭಿಪ್ರಾಯಗಳನ್ನು ತಮ್ಮದೇ ದಾಟಿಯಲ್ಲಿ ಸತ್ಯ ಶೋಧನಾ ಸಮಿತಿ ಸದಸ್ಯರ ಮುಂದೆ ಹೇಳಿದ ಸ್ಥಳೀಯರು ಒಬ್ಬೊಬ್ಬರಾಗಿ ತಮ್ಮ ಅಳಲನ್ನು ತೋಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸುತ್ತಿದ್ದ ತಂಡದ ಸದಸ್ಯರು ವೈಯಕ್ತಿಕವಾಗಿ ಕೆಲ ಪ್ರಶ್ನೆಗಳನ್ನು ಹಾಕಿ ಉತ್ತರ ಪಡೆಯುತ್ತಿರುವುದು ಕಂಡು ಬಂದಿತು.

ಪ್ರತಿಧ್ವನಿಸಿದ `ಪ್ರಜಾವಾಣಿ' ಲೇಖನ
ಗ್ರಾಮಸಭೆಯಲ್ಲಿ ಗ್ರಾಮದ ಮುಖಂಡ ಹನುಮಂತರಾಯಪ್ಪ ಮಾತನಾಡುವಾಗ `ಪ್ರಜಾವಾಣಿ' ಪತ್ರಿಕೆಯನ್ನು ಹಿಡಿದು ಈಚೆಗೆ ನಾಗೇಶ ಹೆಗೆಡೆ ಅವರು ಬರೆದ ಲೇಖನ ವೊಂದನ್ನು ಸಮಿತಿ ಸದಸ್ಯರ ಮುಂದೆ ತೋರಿಸುವ ಮೂಲಕ ನಮ್ಮ ಬದುಕು ಮುಂದಿನ ದಿನಗಳಲ್ಲಿ ಬೇವಿನ ಸವಿಯನ್ನು ಮಾತ್ರ ಸವಿಯಬೇಕಾಗಿದೆ ಎಂದು ಮಾರ್ಮಿಕವಾಗಿ ಹೇಳಿದರು.
ಇದರಿಂದ ಕ್ಷಣಕಾಲ ತಬ್ಬಿಬ್ಬಾದ ಸದಸ್ಯರು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಲೇಖನವನ್ನು ಓದುವ ಮೂಲಕ ತಮ್ಮ ವರದಿಯಲ್ಲಿ ದಾಖಲಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.