ADVERTISEMENT

ನಿಯಮಾನುಸಾರ ಪರಿಹಾರ ವಿತರಣೆ ಭರವಸೆ

ಹಿರಿಯೂರು ಸಮೀಪ ಶ್ರೀರಂಗಪಟ್ಟಣ–ಜೇವರ್ಗಿ ಬೈಪಾಸ್ ರಸ್ತೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2013, 7:12 IST
Last Updated 20 ಡಿಸೆಂಬರ್ 2013, 7:12 IST

ಹಿರಿಯೂರು: ‘ನಗರದ ಹೊರವಲಯದಲ್ಲಿ ಹಾದು ಹೋಗುವ ಶ್ರೀರಂಗಪಟ್ಟಣ–ಜೇವರ್ಗಿ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಭೂಮಿ ಕಳೆದುಕೊಳ್ಳುವ ರೈತರಿಂದ ಆಕ್ಷೇಪಣೆ ಆಹ್ವಾನಿಸಿದ ನಂತರ ಭೂಮಿ ವಶಕ್ಕೆ ಪಡೆಯಲಾಗುವುದು’ ಎಂದು ಉಪ ವಿಭಾಗಾಧಿಕಾರಿ ಎನ್. ತಿಪ್ಪೇಸ್ವಾಮಿ ತಿಳಿಸಿದರು.

ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಶ್ರೀರಂಗಪಟ್ಟಣ–ಜೇವರ್ಗಿ ಬೈಪಾಸ್ ರಸ್ತೆಗೆ ಭೂಮಿ ಕಳೆದುಕೊಳ್ಳುವ ಗ್ರಾಮಗಳ ರೈತರ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

7.37 ಕಿ.ಮೀ. ಉದ್ದದ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಸೋಮೇರಹಳ್ಳಿ, ಆದಿವಾಲ, ಹುಲುಗಲಕುಂಟೆ ಮತ್ತು ಲಕ್ಕನಾಳ ಗ್ರಾಮಗಳ 79 ರೈತರ 29.34 ಎಕರೆ ಭೂಸ್ವಾಧೀನ ಮಾಡಲಾಗುವುದು. ಹುಲುಗಲ ಕುಂಟೆಯ 1.32 ಎಕರೆ, ಸೋಮೇರಹಳ್ಳಿಯ 11.9 ಎಕರೆ, ಆದಿವಾಲ ಗ್ರಾಮದ 8.36 ಎಕರೆ, ಲಕ್ಕನಾಳು ಗ್ರಾಮದ 7.36 ಎಕರೆ ಭೂಮಿ ರಸ್ತೆ ಕಾಮಗಾರಿಗೆ ಬಳಕೆಯಾಗಲಿದೆ ಎಂದು ಅವರು ವಿವರಿಸಿದರು.

ಪ್ರತಿ ಎಕರೆಗೆ ಮಾರ್ಗದರ್ಶಿ ಸೂತ್ರದಂತೆ ಪರಿಹಾರ ನೀಡಲಾಗುತ್ತದೆ. ಉದಾಹರಣೆಗೆ ಉಪನೋಂದಣಿ ಇಲಾಖೆಯಲ್ಲಿ ಜಮೀನಿನ ದರ ₨ 1 ಲಕ್ಷ ಇದ್ದಲ್ಲಿ, ಅದಕ್ಕೆ ಶೇ 30 ರಷ್ಟು, ನಂತರ ಮೊದಲ ಒಂದು ವರ್ಷಕ್ಕೆ ಶೇ 9 ರಂತೆ, ಅಲ್ಲಿಂದ ಮುಂದಿನ 2 ವರ್ಷಕ್ಕೆ ಶೇ 15ರಂತೆ ಬಡ್ಡಿ ಸೇರಿಸಿ ಪರಿಹಾರ ನೀಡಲಾಗುತ್ತದೆ.

ಆದರೆ, ಈಗ ನಡೆಸುತ್ತಿರುವ ಸಭೆ ದರ ನಿಗದಿ ಮಾಡುವುದಕ್ಕಲ್ಲ. ಜಮೀನುಗಳ ಸರ್ವೇ ಕಾರ್ಯ ಮುಗಿದಿದ್ದು, ಭೂಸ್ವಾಧೀನ ಕಾಯ್ದೆ ಪ್ರಕಾರ ಸಾರ್ವಜನಿಕ ಉದ್ದೇಶಕ್ಕಾಗಿ ಈ ಭೂಮಿಯನ್ನು ವಶ ಪಡಿಸಿಕೊಳ್ಳಲಾಗುತ್ತಿದೆ. ಚಿತ್ರದುರ್ಗ– ದಾವಣಗೆರೆ ರೈಲು ಮಾರ್ಗ ಸೇರಿದಂತೆ ಜಿಲ್ಲೆಯಲ್ಲಿ 33 ಭೂಸ್ವಾಧೀನ ಪ್ರಕರಣಗಳಿವೆ ಎಂದು ತಿಪ್ಪೇಸ್ವಾಮಿ ಹೇಳಿದರು.

ರೈತರಿಗೆ ಯಾವುದೇ ರೀತಿಯಲ್ಲೂ ಮೋಸವಾಗಲು ಬಿಡುವುದಿಲ್ಲ. ಕಾನೂನು ಪ್ರಕಾರ ಅವರಿಗೆ ಪರಿಹಾರ ಕೊಡಲು ಬದ್ಧರಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.

ತೆಂಗು, ಹೊಂಗೆ, ಹುಣಸೆ, ಬೇವು, ದಾಳಿಂಬೆ ಮತ್ತಿತರ ಬೆಳೆ ಇರುವ ಭೂಮಿಗೂ, ಸಾಧಾರಣ ಭೂಮಿಗೂ ಒಂದೇ ದರ ನಿಗದಿಪಡಿಸಬಾರದು. ರಾಷ್ಟ್ರೀಯ ಹೆದ್ದಾರಿ ನಾಲ್ಕರ ವಿಸ್ತರಣೆ ಸಂದರ್ಭದಲ್ಲಿ ಪಟ್ರೆಹಳ್ಳಿ, ಆದಿವಾಲ ಗ್ರಾಮಗಳ ರೈತರಿಗೆ ನೀಡಿರುವ ಪರಿಹಾರದಷ್ಟೇ ಮೊತ್ತವನ್ನು ತಮಗೂ ನೀಡಬೇಕು. ರಸ್ತೆಯಂಚಿಗೆ ಬರುವ ಮರಗಳನ್ನೂ ನಷ್ಟದ ಲೆಕ್ಕಕ್ಕೆ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಬೇಕು ಎಂದು ರೈತರು ಮನವಿ ಮಾಡಿದರು.


ಪರಿಹಾರ ನೀಡುವ ಸಮಯದಲ್ಲಿ ಕೊಳವೆ ಬಾವಿ, ಕೊಳವೆ ಮಾರ್ಗ, ನೀರಿನ ತೊಟ್ಟಿ, ತೋಟದ ಮನೆ, ಶಾಶ್ವತ ಫಸಲು ಮತ್ತಿತರ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುತ್ತೇವೆ. ತಾವು ನಂಬಿರುವ ಭೂಮಿ ಕಳೆದುಕೊಳ್ಳುವ ರೈತರಿಗೆ ಗರಿಷ್ಠ ಪ್ರಮಾಣದಲ್ಲಿ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ತಿಪ್ಪೇಸ್ವಾಮಿ ಭರವಸೆ ನೀಡಿದರು.

ತಹಶೀಲ್ದಾರ್ ಎಂ.ಎನ್. ಮಂಜುನಾಥ್, ಗ್ರೇಡ್‌–2 ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ, ಲೋಕೋಪಯೋಗಿ ಇಲಾಖೆ
ಎಇಇ ಮುಕ್ಕಣ್ಣನಾಯ್ಕ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT