ADVERTISEMENT

ನೀರೆರಚುವ ಹಬ್ಬ; ವಿವಿಧೆಡೆ ಸಂಭ್ರಮ 

ಹಬ್ಬದ ಉತ್ಸಾಹದಲ್ಲಿ ತೇಲಾಡಿದ ಯುವಕ – ಯುವತಿಯರು

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2018, 8:54 IST
Last Updated 21 ಮಾರ್ಚ್ 2018, 8:54 IST

ಚಿತ್ರದುರ್ಗ: ಇಲ್ಲಿನ ವಿವಿಧ ಬಡಾವಣೆಗಳಲ್ಲಿ ಮಂಗಳವಾರ ಹಿರಿಯರು – ಕಿರಿಯರು ನೀರೆರಚುವ ಹಬ್ಬದಾಟವನ್ನು ಸಡಗರದಿಂದ ಆಚರಿಸಿದರು.

ಯುಗಾದಿ ಹೊಸ ವರ್ಷಾಚರಣೆ ಯಲ್ಲಿ ಚಂದ್ರನನ್ನು ನೋಡಿದ ಮರುದಿನ ನೀರೆರಚುವ ಆಟ ಎಲ್ಲೆಡೆ ನಡೆಯುತ್ತದೆ.

ವಿವಿಧ ಬಡಾವಣೆಗಳಲ್ಲಿ ಆಚರಣೆ: ಜೋಗಿಮಟ್ಟಿ ರಸ್ತೆ, ದೊಡ್ಡಪೇಟೆ, ಚಿಕ್ಕಪೇಟೆ, ಕೆಳಗೋಟೆ, ಮುನ್ಸಿಪಲ್ ಕಾಲೊನಿ, ಜಿಲ್ಲಾ ಕ್ರೀಡಾಂಗಣ ರಸ್ತೆ, ಬುರುಜನಹಟ್ಟಿ, ಹೊಳಲ್ಕೆರೆ ರಸ್ತೆ, ನೆಹರೂ ನಗರ, ಫಿಲ್ಟರ್ ಹೌಸ್ ರಸ್ತೆ, ಧರ್ಮಶಾಲಾ ರಸ್ತೆ, ಗೋಪಾಲಪುರ ರಸ್ತೆ, ಗಾರೆಹಟ್ಟಿ ಸೇರಿ ವಿವಿಧೆಡೆ ಹಿರಿಯರು, ಯುವ ಸಮೂಹ, ಮಹಿಳೆಯರು, ಮಕ್ಕಳು ನೀರೆರಚುವ ಆಟದಲ್ಲಿ ತೊಡಗಿದ್ದರು.

ADVERTISEMENT

ಇಲ್ಲಿನ ಕರುವಿನಕಟ್ಟೆ ರಸ್ತೆ, ಸುಣ್ಣದಗುಮ್ಮಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಯುವಕ – ಯುವತಿಯರು ನೀರೆರಚುವ ಆಟದಲ್ಲಿ ತೊಡ­ಗಿದ್ದರು. 

ನೆಂಟರಾದವರಿಗೆ ನೀರೆರಚುವ ಪದ್ಧತಿ: ಹೊಸದಾಗಿ ನೆಂಟರಾದವರು, ಪರಸ್ಪರ ಒಬ್ಬರಿಗೊಬ್ಬರು ನೀರೆರಚುವ ಪದ್ಧತಿ ರೂಢಿಯಲ್ಲಿದೆ ಎನ್ನಲಾಗಿದೆ. ಯುಗಾದಿ ಬೇಸಿಗೆಯಲ್ಲಿ ಬರುವುದರಿಂದ ನೀರೆರಚುವ ಆಟ ಸುಡು ಬಿಸಿಲಿನ ಮಧ್ಯೆ ದೇಹಕ್ಕೆ ತಂಪು ನೀಡುತ್ತದೆ ಎಂಬ ಕಾರಣಕ್ಕೆ ಹಿರಿಯರು ಮಾಡಿಕೊಂಡು ಬಂದಿರಬಹುದು ಎನ್ನುತ್ತಾರೆ ಹಬ್ಬದಾಟದಲ್ಲಿ ತೊಡಗಿದ್ದವರು.

ನಗರದಲ್ಲೂ ಹೆಚ್ಚಿದ ಉತ್ಸಾಹ: ಮಾವ, ಅಳಿಯ, ಅತ್ತೆ, ಸೊಸೆಯಂದಿರು ಹೆಚ್ಚಾಗಿ ನೀರೆರಚುವ ಆಟದಲ್ಲಿ ಪಾಲ್ಗೊಳ್ಳುವುದೇ ಈ ಆಚರಣೆಯ ವಿಶೇಷ. ಹೊಸದಾಗಿ ಮದುವೆಯಾದ ದಂಪತಿಗಳು ಯುಗಾದಿ ಹಬ್ಬಕ್ಕೆ ಮಾವನ ಮನೆಗೆ ಹೋಗುತ್ತಾರೆ. ಹಬ್ಬವಾದ ಮರುದಿನ ಅಳಿಯನಿಗೆ ಮಾವ, ಅತ್ತೆ, ಸೊಸೆ ಎಲ್ಲರೂ ನೀರು ಎರಚುತ್ತಾರೆ.  ಈ ಆಟದಲ್ಲಿ ಅಣ್ಣ, ತಮ್ಮ, ಅಕ್ಕ, ತಂಗಿಯರು ಪರಸ್ಪರ ನೀರೆರಚುವ ಹಾಗಿಲ್ಲ.

**

ಕೊರತೆ ನಡುವೆ ಆಚರಣೆ
ನೀರಿಗಾಗಿ ಪರಿತಪಿಸುವಂಥ ಪರಿಸ್ಥಿತಿ ಕೆಲವೆಡೆಗಳಲ್ಲಿ ಇದ್ದರೂ ಯಾವುದನ್ನೂ ಲೆಕ್ಕಿಸದೇ  ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.