ADVERTISEMENT

ನೂತನ ಎಸ್ಪಿ ಅಧಿಕಾರ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2011, 8:05 IST
Last Updated 24 ಮಾರ್ಚ್ 2011, 8:05 IST
ನೂತನ ಎಸ್ಪಿ ಅಧಿಕಾರ ಸ್ವೀಕಾರ
ನೂತನ ಎಸ್ಪಿ ಅಧಿಕಾರ ಸ್ವೀಕಾರ   

ಚಿತ್ರದುರ್ಗ: ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಎಂ.ಎನ್. ನಾಗರಾಜ್ ಬುಧವಾರ ಅಧಿಕಾರ ಸ್ವೀಕರಿಸಿದರು.ದಕ್ಷಿಣ ಕನ್ನಡ ಜಿಲ್ಲೆಗೆ ವರ್ಗಾವಣೆಯಾಗಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಾಭೂರಾಮ್ ಅವರು ಎಂ.ಎನ್. ನಾಗರಾಜ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ಕಳೆದ ಮೂರು ವರ್ಷದಿಂದ ಲಾಭೂರಾಮ್ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಈಗ ಹಾಲಿ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿರುವ ನಾಗರಾಜ್ ಈ ಹಿಂದೆ ಚಿತ್ರದುರ್ಗ ಜಿಲ್ಲೆಯಲ್ಲಿ ಲೋಕಾಯುಕ್ತ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು.

ಬಳ್ಳಾರಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ನಾಗರಾಜ್ ಅವರು ವರ್ಗಾವಣೆಗೊಂಡು ಸ್ಥಳದ ನಿಯೋಜನೆಗೆ ಕಾಯುತ್ತಿದ್ದರು. ಅಧಿಕಾರ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಾಗರಾಜ್, ಪೊಲೀಸ್ ವ್ಯವಸ್ಥೆಯನ್ನು ಜನಸ್ನೇಹಿಗೊಳಿಸಲು ಗಮನಹರಿಸುತ್ತೇನೆ. ನೊಂದವರು, ಮೋಸ, ಅನ್ಯಾಯಕ್ಕೆ ಒಳಗಾದವರು ದೂರು ಸಲ್ಲಿಸಲು ಠಾಣೆಗೆ ಬಂದಾಗ ಪೊಲೀಸರು ಸೌಜನ್ಯದಿಂದ ವರ್ತಿಸಬೇಕು. ಇದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡ ಬಗ್ಗೆ ದೂರುಗಳು ಬಂದರೆ ಅಂತವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲೆಯಲ್ಲಿ ಯಾವುದೇ ರೀತಿಯ ಜೂಜು, ಮಟ್ಕಾ ವ್ಯವಹಾರ ನಡೆಯದಂತೆ ಹಾಗೂ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗುವುದು. ಬಹು ಮುಖ್ಯವಾಗಿ ಈಗಿರುವ ಸಂಚಾರಿ ವ್ಯವಸ್ಥೆಗೆ ಹೊಸ ರೂಪ ನೀಡಿ ಸುಗಮ ಸಂಚಾರಕ್ಕೆ ಅಗತ್ಯವಿರುವ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.ಈ ಸಂದರ್ಭದಲ್ಲಿ ಹಾವೇರಿ ಜಿಲ್ಲೆಗೆ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆಗೊಂಡ ಚೇತನ್‌ಸಿಂಗ್ ರಾಠೋಡ್ ಹಾಜರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.