ADVERTISEMENT

ಪರಿಶಿಷ್ಟ ಜಾತಿಗೆ ಕಾಡುಗೊಲ್ಲರನ್ನು ಸೇರಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಜೂನ್ 2011, 9:00 IST
Last Updated 20 ಜೂನ್ 2011, 9:00 IST

ಮೊಳಕಾಲ್ಮುರು: ಎಲ್ಲಾ ರಂಗಗಳಲ್ಲಿ ಅತ್ಯಂತ ಹಿಂದುಳಿದಿರುವ ಕಾಡುಗೊಲ್ಲ ಜನಾಂಗಕ್ಕೆ ಪರಿಶಿಷ್ಟ ಜಾತಿ ಸ್ಥಾನಮಾನ ನೀಡಬೇಕು ಎಂದು ತಾಲ್ಲೂಕು ಕಾಡುಗೊಲ್ಲ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಆಗ್ರಹಿಸಿದ್ದಾರೆ.

ಇಲ್ಲಿನ ಪಿ.ಟಿ. ಹಟ್ಟಿ ಯಾದವ ವಿದ್ಯಾರ್ಥಿನಿಲಯ ಆವರಣದಲ್ಲಿ ಭಾನುವಾರ  ತಾಲ್ಲೂಕುಮಟ್ಟದ ಜನಾಂಗದ ಸಭೆ ನಡೆಯಿತು.

ಸಭೆಯಲ್ಲಿ ಜನಾಂಗದ ಅಭಿವೃದ್ಧಿ ಕುರಿತು ಚರ್ಚಿಸಿದ ಮುಖಂಡರು, ಬಹು ಹಿಂದಿನಿಂದಲೂ ಜನಾಂಗದ ಜನರು ಕಾಡುಗಳಲ್ಲಿ ಜಾನುವಾರು ಮೇಯಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಇದು ಪರೋಕ್ಷವಾಗಿ ಜನಾಂಗದ ಶೈಕ್ಷಣಿಕ, ಆರ್ಥಿಕ ಅಭಿವೃದ್ಧಿ ಮೇಲೆ ದುಷ್ಪರಿಣಾಮ ಬೀರಿದೆ. ಈ ಬಗ್ಗೆ ಈಗಾಗಲೇ ಸಮಾಜ ಕಲ್ಯಾಣ ಸಚಿವರ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.

ಸರ್ಕಾರ ಈಗಾಗಲೇ ಸಮಿತಿಯೊಂದನ್ನು ರಚನೆ ಮಾಡಿ ರಾಜ್ಯದಲ್ಲಿನ ಗೊಲ್ಲರ ಹಟ್ಟಿಗಳ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆಯುತ್ತಿದೆ. ಆದರೆ, ಸಮಿತಿ `ಊರುಗೊಲ್ಲರು~ ಹಾಗೂ `ಕಾಡುಗೊಲ್ಲರು~ ಎಂಬ ವಿಭಾಗ ಮಾಡುತ್ತಿಲ್ಲ.

ಆದ್ದರಿಂದ ಕಾಡುಗೊಲ್ಲ ಜನಾಂಗ ಅನುಭವಿಸುತ್ತಿರುವ ಸಂಕಷ್ಟಗಳನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವುದು ಅಗತ್ಯವಾಗಿದೆ ಎಂದು ಮುಖಂಡರು ಸಲಹೆ ನೀಡಿದರು.

ಸರ್ಕಾರದ ಸೌಲಭ್ಯಗಳನ್ನು ಪಡೆಯುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಜನಾಂಗದ ಸಂಘಗಳನ್ನು ರಚಿಸಿಕೊಂಡು ಹೋರಾಟ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ತಾಲ್ಲೂಕಿನಲ್ಲಿ ಸಹ ಇದೇ ವೇಳೆ `ತಾಲ್ಲೂಕು ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘ~ ರಚನೆ ಮಾಡಲಾಯಿತು ಎಂದು ನೂತನ ಪ್ರಧಾನ ಕಾರ್ಯದರ್ಶಿ ಕೆ. ಶಾಂತವೀರಣ್ಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.