ADVERTISEMENT

ಪುರಾತನ ದೇಗುಲ ಆಶ್ರಮ ವಶಕ್ಕೆ ಬೇಡ: ಒತ್ತಾಯ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2013, 10:05 IST
Last Updated 5 ಆಗಸ್ಟ್ 2013, 10:05 IST

ಚಳ್ಳಕೆರೆ: ತಾಲ್ಲೂಕಿನ ದೊಡ್ಡೇರಿ ಗ್ರಾಮದ ಹೊರವಲಯದಲ್ಲಿರುವ ಗೋಕರ್ಣೇಶ್ವರ ದೇಗುಲವನ್ನು ಸಮೀಪದಲ್ಲೇ ಇರುವ ಕನ್ನೇಶ್ವರ ಆಶ್ರಮದ ಮಲ್ಲಪ್ಪ ಸ್ವಾಮಿ ವಶಕ್ಕೆ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಯಾವುದೇ ಕಾರಣಕ್ಕೆ ದೇಗುಲವನ್ನು ಆಶ್ರಮದ ವ್ಯಾಪ್ತಿಗೆ ಸೇರಿಸಬಾರದು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಭಾನುವಾರ ಸ್ಥಳಕ್ಕೆ ಭೇಟಿ ನೀಡಿದ್ದ ಕಂದಾಯ ಅಧಿಕಾರಿಗಳಿಗೆ ಗ್ರಾಮಸ್ಥರು ಈ ಸಂಬಂಧ ಒತ್ತಡ ಹೇರಿದ್ದಾರೆ.
ದೇಗುಲವನ್ನು ಆಶ್ರಮದ ವ್ಯಾಪ್ತಿಗೆ ಒಳಪಡುವಂತೆ ಮಾಡಿ ಎಂದು  ಆಶ್ರಮದ ವತಿಯಿಂದ ಲಿಖಿತವಾಗಿ ಮನವಿ ನೀಡಲಾಗಿತ್ತು. ಮನವಿಯನ್ನು ಚಳ್ಳಕಶಾಸಕರು, ತಹಶೀಲ್ದಾರ್ ಅವರಿಗೆ ಪರಿಶೀಲಿಸಿ ಕ್ರಮ ಕೈಗೊಳ್ಳಿ ಎಂದು ಇಲಾಖೆಗೆ ವರ್ಗಾಯಿಸಿದ್ದಾರೆ.

ಈ ವಿಷಯ ತಿಳಿದ ಗ್ರಾಮಸ್ಥರು ತಹಶೀಲ್ದಾರ್‌ಗೆ ಗೋಕರ್ಣೇಶ್ವರ ದೇಗುಲವನ್ನು ಯಥಾಸ್ಥಿತಿಯಲ್ಲೇ ಉಳಿಸಿಕೊಡಬೇಕು. ಯಾವುದೇ ಕಾರಣಕ್ಕೂ ಕನ್ನೇಶ್ವರ ಆಶ್ರಮದ ವ್ಯಾಪ್ತಿಗೆ ಬಿಟ್ಟುಕೊಡಬಾರದು ಎಂದು ಮನವಿ ನೀಡಿದ್ದರು.

ಈ ಎರಡೂ ಮನವಿಗಳ ಕುರಿತು ಕಂದಾಯ ಇಲಾಖೆ ಅಧಿಕಾರಿಗಳು ಭಾನುವಾರ ಸ್ಥಳ ಪರಿಶೀಲಿಸಲು ಗ್ರಾಮದ ದೇಗುಲಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಾವಿರಾರು ಜನರು ಜಮಾಯಿಸಿ ಇಲ್ಲಿ ಎಲ್ಲಾ ಜಾತಿಯ ಜನರು ಪೂಜೆ ಸಲ್ಲಿಸುವುದು ವಾಡಿಕೆ. ಆದ್ದರಿಂದ, ಇದು ಆಶ್ರಮದ ವ್ಯಾಪ್ತಿಗೆ ಒಳಪಡುವುದು ಬೇಡ ಎಂದು ಪಟ್ಟುಹಿಡಿದರು.

ಸ್ಥಳದಲ್ಲಿ ಇದ್ದ ಕನ್ನೇಶ್ವರ ಆಶ್ರಮದ ಮಲ್ಲಪ್ಪಸ್ವಾಮಿ `ನಾನು ಆಶ್ರಮದ ವ್ಯಾಪ್ತಿಗೆ ದೇಗುಲವನ್ನು ಸೇರಿಸಿ ಎಂದು ಯಾರಿಗೂ ಮನವಿ ಮಾಡಿಲ್ಲ. ಆದರೂ, ಆಶ್ರಮದಲ್ಲಿ ಯಾರೋ ಭಕ್ತರು ಈ ಕೆಲಸ ಮಾಡಿದ್ದಾರೆ. ಆದ್ದರಿಂದ, ಈ ದೇಗುಲ ಎಲ್ಲರಿಗೂ ಸೇರಿದ್ದು' ಎಂದಷ್ಟೇ ಹೇಳಿ ದೇಗುಲದ ಬೀಗದ ಕೀಯನ್ನು ಗ್ರಾಮಸ್ಥರಿಗೆ ನೀಡಿ ಹೊರಬಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರು, ಗ್ರಾಮದ ಮುಖಂಡರು, ಯುವಕರು ಹಾಗೂ ಭಕ್ತರು ಸೇರಿದ್ದರು.
ಕಂದಾಯ ನಿರೀಕ್ಷಕ ಭಾನುಮೂರ್ತಿ ಹಾಗೂ ಸಿಬ್ಬಂದಿ ಇದ್ದರು. ಮುಂಜಾಗ್ರತಾ ಕ್ರಮವಾಗಿ ಸಾಕಷ್ಟು ಪೊಲೀಸರು ಸ್ಥಳದಲ್ಲಿದ್ದು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.