ADVERTISEMENT

ಪ್ರತಿಭಟನೆಗೆ ತಿರುಗಿದ ಆಟೋ ಬಾಡಿಗೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2011, 9:00 IST
Last Updated 15 ಜೂನ್ 2011, 9:00 IST

ಚಿತ್ರದುರ್ಗ: ಆಟೋರಿಕ್ಷಾ ಬಾಡಿಗೆ ನೀಡುವ ವಿಚಾರದಲ್ಲಿ ಶಿಕ್ಷಕಿ ಮತ್ತು ಚಾಲಕ ನಡುವೆ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಪರಸ್ಪರ ಹಲ್ಲೆ ಹಂತ ತಲುಪಿದ ಘಟನೆ ಮಂಗಳವಾರ ನಗರದಲ್ಲಿ ನಡೆದಿದೆ.

ಈ ಘಟನೆ ಖಂಡಿಸಿ ಆಟೋ ಚಾಲಕರು ನಗರ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ನಂತರಮುಖಂಡರ ನೇತೃತ್ವದಲ್ಲಿ ರಾಜಿಯಾದರು.

ಪ್ರಕರಣದ ವಿವರ: ಇಲ್ಲಿನ ಎಸ್‌ಬಿಎಂ ವೃತ್ತದಿಂದ ಕ್ರೀಡಾಂಗಣಕ್ಕೆ ಆಟೋದಲ್ಲಿ ತೆರಳಿದ ಶಿಕ್ಷಕಿಯೊಬ್ಬರು ರೂ 20 ಬಾಡಿಗೆ ನೀಡುವಂತೆ ಚಾಲಕ ಕೇಳಿದ್ದಾನೆ.  ತಾನು ರೂ 15 ಮಾತ್ರ ನೀಡುವುದಾಗಿ ಹೇಳಿದ್ದರಿಂದ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಮಹಿಳೆ ತನ್ನ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದಳು ಎಂದು ಚಾಲಕ ಶಬ್ಬೀರ್ ಇಲ್ಲಿನ ನಗರ ಠಾಣೆಯಲ್ಲಿ ದೂರು ದಾಖಲಿಸಿದರು.

ಈ ವಿಷಯ ತಿಳಿದು ಠಾಣೆಗೆ ಆಗಮಿಸಿದ ಆಗಮಿಸಿದ ಆಟೋ ಚಾಲಕರು, ಮಾಲೀಕರು ಹಲ್ಲೆ ನಡೆಸಿದ ಮಹಿಳೆಯನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಠಾಣೆ ಎದುರಿನ ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.

ಆಟೋ ಚಾಲಕರ ಸಂಘದ ಮುಖಂಡರು ಆಗಮಿಸಿ ಮಹಿಳೆಯಾಗಿರುವುದರಿಂದ ಕಠಿಣ ತೀರ್ಮಾನ ಬೇಡ ಎಂದು ಮನವೊಲಿಸಿ ರಾಜಿಗೆ ಯತ್ನಿಸಿದರು. ನಂತರ ಮಹಿಳೆಯನ್ನು ಠಾಣೆಗೆ ಕರೆಸಿಕೊಂಡು ಪರಸ್ಪರ ಮಾತುಕತೆ ನಡೆಸಿ ರಾಜಿ ಮಾಡುವ ಮೂಲಕ ಪ್ರಕರಣವನ್ನು ಸುಖಾಂತ್ಯಗೊಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.