ADVERTISEMENT

ಬಗರ್‌ಹುಕುಂ ರೈತರ ಒಕ್ಕಲೆಬ್ಬಿಸುವಿಕೆಗೆ ವಿರೋಧ

ದಲಿತ ವಿಮೋಚನೆ ಮಾನವ ಹಕ್ಕುಗಳ ವೇದಿಕೆ ರಾಜ್ಯ ಘಟಕ

​ಪ್ರಜಾವಾಣಿ ವಾರ್ತೆ
Published 18 ಜುಲೈ 2013, 8:28 IST
Last Updated 18 ಜುಲೈ 2013, 8:28 IST

ಚಿತ್ರದುರ್ಗ: ಆದಿವಾಸಿ, ಭೂರಹಿತ ದಲಿತರು ಮತ್ತು ಬಡ ರೈತರನ್ನು ಬಗರ್‌ಹುಕುಂ ಜಮೀನಿನಿಂದ ಒಕ್ಕಲೆಬ್ಬಿಸುವ ಕ್ರಮವನ್ನು ಅರಣ್ಯ ಇಲಾಖೆ ತಕ್ಷಣ ನಿಲ್ಲಿಸಬೇಕು ಎಂದು ದಲಿತ ವಿಮೋಚನೆ ಮಾನವ ಹಕ್ಕುಗಳ ವೇದಿಕೆ ರಾಜ್ಯ ಘಟಕದ ಸಂಚಾಲಕ ಬಸವರಾಜ್ ಕೌತಾಳ ಒತ್ತಾಯಿಸಿದರು.

ನೂರಾರು ವರ್ಷಗಳಿಂದ ದಲಿತರು, ಆದಿವಾಸಿಗಳು ಹಾಗೂ ಬಡರೈತರು ಬಗರ್‌ಹುಕುಂ ಜಮೀನಿನಲ್ಲಿ ಸಾಗುವಳಿ ಮಾಡುತ್ತಾ ಬಂದಿದ್ದು, ಬಲಾಢ್ಯರು ದೌರ್ಜನ್ಯದಿಂದ ಭೂಮಿಯನ್ನು ವಶಪಡಿಸಿಕೊಂಡು ಒಕ್ಕಲೆಬ್ಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅದನ್ನು ಕೈಬಿಟ್ಟು ಬಗರ್‌ಹುಕುಂ ಭೂಮಿಯನ್ನು ಬಡವರಿಗೆ ದಕ್ಕಿಸುವ ಕೆಲಸ ಸರ್ಕಾರ ಮಾಡಬೇಕು ಎಂದು ಬುಧವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.

ಶತಮಾನಗಳಿಂದ ಬಗರ್‌ಹುಕುಂ ಭೂಮಿಯಲ್ಲಿ ವ್ಯವಸಾಯ ಮಾಡುತ್ತಾ ಬಂದಿರುವ ಬಡ ಕುಟುಂಬಗಳಿಗೆ ಸೂಕ್ತ ನ್ಯಾಯ ಒದಗಿಸಿಕೊಡುವಂತೆ ಆಗ್ರಹಿಸಿ ಹಲವಾರು ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೆ ಅಧಿಕಾರಿಗಳು ಕೂಡ ಶ್ರೀಮಂತ ವರ್ಗದವರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಜತೆಗೆ ನಿರಂತರವಾಗಿ ಬಡವರ ಮೇಲೆ ದೌರ್ಜನ್ಯ ಮಾತ್ತಿದ್ದಾರೆ. ಹಾಗಾಗಿ  ಈವರೆಗೂ ಬಡವರಿಗೆ ಪೂರ್ಣ ಪ್ರಮಾಣದ ಹಕ್ಕು ಪತ್ರ ಸಿಕ್ಕಿಲ್ಲ ಎಂದು ದೂರಿದರು.

ಕೇಂದ್ರ ಸರ್ಕಾರದ ಭೂ ಬ್ಯಾಂಕ್‌ನಲ್ಲಿರುವ ಸುಮಾರು 18 ಲಕ್ಷ ಎಕರೆ ಸಿ ಮತ್ತು ಡಿ ಕಂದಾಯ ಭೂಮಿ ಅರಣ್ಯ ಇಲಾಖೆಗೆ ಪುನಃ ವಾಪಸ್ಸು ಪಡೆದುಕೊಳ್ಳುವ ಷರತ್ತಿನ ಮೇಲೆ ವರ್ಗಾಯಿಸಿರುವ ಭೂಮಿಯನ್ನು ಮತ್ತೆ ಮರಳಿ  ಪಡೆದು ಈ ಭೂಮಿಯಲ್ಲಿ ವ್ಯವಸಾಯ ಮಾಡಿ ಬದುಕು ಸಾಗಿಸುತ್ತಿರುವ ಬಡವರ್ಗದ ಭೂ ಹಿಡುವಳಿದಾರರಿಗೆ ಹಕ್ಕು ಪತ್ರ ವಿತರಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.

ಸರ್ಕಾರ ಸಚಿವ ಸಂಪುಟದಲ್ಲಿ ಭೂ ಮಂಜೂರಾತಿಗಾಗಿ ಉಪ ಸಮಿತಿ ರಚಿಸಿ ರಾಜ್ಯದ ಎಲ್ಲ ತಾಲ್ಲೂಕುಗಳಲ್ಲಿ ಭೂ ಮಂಜೂರಾತಿ ಪ್ರಕ್ರಿಯೆ ಜಾರಿಗೆ ತರಬೇಕು. ರಾಜ್ಯದ ನಾನಾ ವರ್ಷಗಳಿಂದ ಬಗರ್‌ಹುಕುಂ ಜಮೀನನ್ನು ಸಾಗುವಳಿ ಮಾಡುತ್ತಾ ರಾಜ್ಯದ  ಸುಮಾರು 20 ಲಕ್ಷ ಎಕರೆಗೆ ಸಂಬಂಧಿಸಿದಂತೆ ಫಾರಂ 50 ಮತ್ತು 52ರಲ್ಲಿ ಒಟ್ಟು 20 ಲಕ್ಷ ಅರ್ಜಿಗಳು ಕಂದಾಯ ಇಲಾಖೆ, ಭೂ ಮಂಜೂರಾತಿ ಇಲಾಖೆಗೆ ಬಂದಿದೆ. ಕೂಡಲೇ ಈ ಅರ್ಜಿಗಳನ್ನು ಇತ್ಯರ್ಥ ಮಾಡಿ ಅರ್ಜಿದಾರರಿಗೆ ಭೂಮಿ ನೀಡಬೇಕು ಎಂದು ಒತ್ತಾಯಿಸಿದರು.

ಡಾ.ವಿ. ಸುಬ್ರಹ್ಮಣ್ಯಂ ಸಮಿತಿ ಶಿಫಾರಸ್ಸಿನಂತೆ ರಾಜ್ಯದಲ್ಲಿ ಅಕ್ರಮವಾಗಿ ಒತ್ತುವರಿಯಾದ ಹೆಚ್ಚುವರಿ ಭೂಮಿಯನ್ನು ವಶಪಡಿಸಿಕೊಳ್ಳಬೇಕು. ಕನಿಷ್ಠ 10 ಎಕರೆ ಒಳಗಡೆ ಒತ್ತುವರಿ ಮಾಡಿದ ಕುಟುಂಬಗಳ ಭೂಮಿಯನ್ನು ಹೊರತುಪಡಿಸಿ ಇತರರು ಅಕ್ರಮವಾಗಿ ವಶಪಡಿಸಿಕೊಂಡ ಭೂಮಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಆಗ್ರಹಿಸಿದರು.

ಮುಖಂಡ ರಂಗಪ್ಪ ಮಾತನಾಡಿ, ದಲಿತರಿಗೆ ದಕ್ಕದ ಭೂ ರಕ್ಷಣೆ ಮಾಡಲು ಜಾರಿಗೆ ತಂದಿರುವ ಎಸ್ಸಿಪಿಟಿಎಲ್ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ, ಭೂ ಕಬಳಿಕೆಯನ್ನು ಕೊನೆಗೊಳಿಸಿ ರಾಜ್ಯದ ಪ್ರಾಕೃತಿಕ ಸಂಪನ್ಮೂಲ ರಕ್ಷಿಸಬೇಕು ಎಂದು ಒತ್ತಾಯಿಸಿದರು.

ದಲಿತ ವಿಮೋಚನೆ ಮಾನವ ಹಕ್ಕುಗಳ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಭೀಮನಕೆರೆ ಶಿವಮೂರ್ತಿ, ಚೌಡಮ್ಮ, ರೇಣುಕಾ, ಜಯಣ್ಣ, ಪಾಲಾಕ್ಷಪ್ಪ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.