ADVERTISEMENT

ಬದ್ಧತೆಯಿರುವ ಸಂಶೋಧಕರ ಸಂತಾನ ಹೆಚ್ಚಲಿ

ವಿಚಾರ ಸಂಕಿರಣ ಸಮಾರೋಪದಲ್ಲಿ ಸಾಹಿತಿ ಪ್ರೊ. ಎಸ್.ಜಿ.ಸಿದ್ದರಾಮಯ್ಯ ಆಶಯ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2014, 7:13 IST
Last Updated 7 ಫೆಬ್ರುವರಿ 2014, 7:13 IST
ಚಿತ್ರದುರ್ಗದ ಸರ್ಕಾರಿ ಕಲಾ ಕಾಲೇಜಿನಲ್ಲಿ ಗುರುವಾರ ನಡೆದ ವಿಭಾಗವಾರು ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಸಾಹಿತಿ ಎಸ್. ಜಿ.ಸಿದ್ದರಾಮಯ್ಯ ಮಾತನಾಡಿದರು. ಉಪನ್ಯಾಸಕರಾದ ಮಧುಸೂದನ್, ಪ್ರೊ.ಕರಿಯಪ್ಪ ಮಾಳಿಗಿ, ಪ್ರಾಂಶುಪಾಲ ಲಿಂಗಯ್ಯ ಮತ್ತಿತರರು ಹಾಜರಿದ್ದರು
ಚಿತ್ರದುರ್ಗದ ಸರ್ಕಾರಿ ಕಲಾ ಕಾಲೇಜಿನಲ್ಲಿ ಗುರುವಾರ ನಡೆದ ವಿಭಾಗವಾರು ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಸಾಹಿತಿ ಎಸ್. ಜಿ.ಸಿದ್ದರಾಮಯ್ಯ ಮಾತನಾಡಿದರು. ಉಪನ್ಯಾಸಕರಾದ ಮಧುಸೂದನ್, ಪ್ರೊ.ಕರಿಯಪ್ಪ ಮಾಳಿಗಿ, ಪ್ರಾಂಶುಪಾಲ ಲಿಂಗಯ್ಯ ಮತ್ತಿತರರು ಹಾಜರಿದ್ದರು   

ಚಿತ್ರದುರ್ಗ: ‘ಬೋಧನಾಂಗ, ಸಂಶೋಧನಾಂಗ ಮತ್ತು ಪ್ರಸಾರಂಗಗಳು ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡಿದಾಗ ಮಾತ್ರ ವಿಶ್ವವಿದ್ಯಾಲಯಗಳು ಸಮರ್ಥವಾಗಿ ಕಾರ್ಯನಿರ್ವಹಿಸಲು ಸಾಧ್ಯ ’ ಎಂದು ಖ್ಯಾತ ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಗುರುವಾರ ನಡೆದ ವಿಭಾಗವಾರು ವಿಚಾರಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ರಾಷ್ಟ್ರಕವಿ ಕುವೆಂಪು ಅವರು ಮೈಸೂರು ವಿಶ್ವವಿದ್ಯಾಲಯದ ಉಪ ಕುಲಪತಿಗಳಾಗಿದ್ದಾಗ, ಇಂಥದ್ದೊಂದು ಅಭಿಪ್ರಾಯ ಹೊಂದಿದ್ದರು. 

ಬೋಧನಾಂಗ ಮತ್ತು ಸಂಶೋಧನಾಂಗ ಕೂಡಿ ಮಾಡುವ ಕೆಲಸವನ್ನು ಪ್ರಸಾರಾಂಗ ಸಮಾಜಕ್ಕೆ ತಲುಪಿಸುವ ಕೆಲಸ ಮಾಡುತ್ತದೆ’ ಎಂದು ಹೇಳಿದ್ದರು. ಆದರೆ ಇವತ್ತಿನ ವಿಶ್ವ ವಿದ್ಯಾಲಯಗಳಲ್ಲಿ ಗುಣಮಟ್ಟದ ಸಂಶೋಧನೆ ಗಳು ನಡೆಯುತ್ತಿಲ್ಲ ಎಂದು ವಿಷಾದಿಸಿದರು.

ರಾಜ್ಯದಲ್ಲಿ ಸಂಶೋಧನೆ ಕುರಿತು ಮಾತನಾಡುವವಾಗ ಉತ್ತರ ಕರ್ನಾಟಕದಲ್ಲಿ ಎಂ.ಎಂ.ಕಲ್ಬುರ್ಗಿ, ದಕ್ಷಿಣ ಕರ್ನಾಟಕದಲ್ಲಿ ಚಿದಾನಂದ ಮೂರ್ತಿ ಧಾರವಾಡ  ವ್ಯಾಪ್ತಿಯಲ್ಲಿ ಎಸ್.ಷಟ್ಟರ್ ಅವರನ್ನು ನೆನಪಿಸಿಕೊಳ್ಳುತ್ತೇವೆ. ಇವರೆಲ್ಲ ಬದ್ಧತೆ ಹೊಂದಿದ ಸಂಶೋಧಕರು.

ಈ ಮಹನೀಯರ ಸಂಶೋಧನೆಗಳನ್ನು ಪಂಥ, ಸಿದ್ಧಾಂತ, ಧೋರಣೆ ಆಧಾರದಲ್ಲಿ ವಿಭಾಗಿಸಿ, ತಿರಸ್ಕರಿಸುವ ಬದಲಿಗೆ, ಸಂಶೋಧನೆಗಳ ಸಾಧಕ–ಬಾದಕಗಳನ್ನು ಪ್ರಶ್ನಿಸುವ ಗುಣವನ್ನು ನಾವೆಲ್ಲ ಬೆಳೆಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದ ಅವರು, ಆ ಮೂಲಕ ಇಂಥವರ ಸಂತಾನ ಹೆಚ್ಚುತ್ತಾ ಹೋಗಬೇಕು’ ಎಂದು ಅಭಿಪ್ರಾಯಪಟ್ಟರು.

‘ಪ್ರಸಾರಂಗ ಎನ್ನುವುದು ಖಾಸಗಿಯವರ ಪಾಲಾಗಬಾರದು. ಅದನ್ನು ವಿಶ್ವವಿದ್ಯಾಲಯಗಳೇ ನಡೆಸಬೇಕು. ಹಿಂದೆ ಮೈಸೂರು ವಿವಿಯಲ್ಲಿ ಒಂದು , ಎರಡು ರೂಪಾಯಿಗೆಲ್ಲ ಅಂಗೈ ಅಗಲದ 60 – 70 ಪುಟದ ಪುಸ್ತಕಗಳು ಓದಲು ಸಿಗುತ್ತಿದ್ದವು. ಅವು ನಮ್ಮ ಅರಿವಿನ ಜ್ಞಾನ ವಿಸ್ತರಣೆಯ ಪ್ರತೀಕಗಳಾಗಿದ್ದವು. ಇತ್ತೀಚೆಗೆ ಇ–ಬುಕ್, ಕಂಪ್ಯೂಟರ್, ಇಂಟರ್‌ನೆಟ್‌ನಿಂದಾಗಿ ಪುಸ್ತಕ ಸಂಸ್ಕೃತಿಯೂ ಕಡಿಮೆಯಾಗುತ್ತಿದೆ’ ಎಂದು ವಿಷಾದಿಸಿದರು.

‘ತಂತ್ರಜ್ಞಾನಗಳು ಎಷ್ಟೇ ಬೆಳೆದಿದ್ದರೂ, ಶೇ 10ರಷ್ಟು ಮಂದಿಗೆ ಮಾತ್ರ ಇ–ಬುಕ್ ತಲುಪುತ್ತಿದೆ. ಉಳಿದ ಶೇ 90ರಷ್ಟು ಮಂದಿ ಪುಸ್ತಕಗಳ ಮೇಲೆ ಅವಲಂಬಿತರಾಗಿದ್ದಾರೆ. ಅಂಥ ವರ್ಗದವರಿಗಾಗಿ ವಿಶ್ವ ವಿದ್ಯಾಲಯದ ಪ್ರಸಾರಂಗಗಳು ಕಡಿಮೆ ಬೆಲೆಯಲ್ಲಿ ಪುಸ್ತಕಗಳನ್ನು ಕೊಡುವ ಕೆಲಸ ಮಾಡಬೇಕಿದೆ. ಹಾಗೆಯೇ ಈ ವರ್ಗಕ್ಕೆ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸುವ ಕೆಲಸ ಮಾಡಬೇಕಿದೆ’ ಎಂದು ಹೇಳಿದರು.

‘ಎಷ್ಟೇ ವಿಶ್ವ ವಿದ್ಯಾಲಯಗಳು, ಅಧ್ಯಯನ ಕೇಂದ್ರಗಳು ತೆರೆದುಕೊಂಡರೂ, ಇವತ್ತಿನ ಜನಸಂಖ್ಯಾ ಸ್ಫೋಟಕ್ಕೆ ಜ್ಞಾನ ಪೂರೈಸಲು ಸಾಧ್ಯವಾಗುತ್ತಿಲ್ಲ. ಅಕ್ಷರ ವಂಚಿತರಿಗೆ ವಿದ್ಯೆ ದೊರೆಯಬಾರದೆಂಬ ಮನಸ್ಥಿತಿ ಹೊಂದಿರುವವರು ಮಾತ್ರ, ಅಧ್ಯಯನ ಕೇಂದ್ರಗಳನ್ನು ನಾಯಿಕೊಡೆ ಎಂದು ಮೂದಲಿಸುತ್ತಾರೆ’ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಕಲಾ ಕಾಲೇಜಿನಲ್ಲಿ ವಾರದಿಂದ ನಡೆಯುತ್ತಿರುವ ವಿಚಾರ ಸಂಕಿರಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಿದ್ದರಾಮಯ್ಯ, ‘ಇಂಥ ಕಾರ್ಯಕ್ರಮಗಳು ಸರ್ಕಾರಿ ಕಾಲೇಜುಗಳಲ್ಲಿ ಮಾತ್ರ ನಡೆಯಲು ಸಾಧ್ಯ’ ಎಂದು ಹೇಳಿದರು. ಇಂಥ ಸಮುದಾಯದ ಮೈಂಡ್‌ಸೆಟ್‌ಗಳು ಸಂಕುಚಿತವಾಗಿರುವುದರಿಂದ ಇಂಥ ಯೋಜನೆಗಳೂ ಬರುತ್ತವೆ’ ಎಂದರು.

ಉಪನ್ಯಾಸಗಳ ಬಗ್ಗೆ ಮಾತನಾಡಿದ ಅವರು, ‘ತಜ್ಞರೊಬ್ಬರಿಂದ ಒಂದು ಗಂಟೆ ಉಪನ್ಯಾಸ ಕೇಳುವುದು, ಒಂದು ಪುಸ್ತಕವನ್ನು ಒಂದು ವರ್ಷ ಓದಿ ಅರ್ಥಮಾಡಿಕೊಂಡು ಜ್ಞಾನ ಪಡೆಯುವುದಕ್ಕೆ ಸಮವಾಗಿರುತ್ತದೆ’ ಎಂದು ಉದಾಹರಣೆ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ, ಲಿಂಗಯ್ಯ ಮಾತನಾಡಿ, ‘ಈ ವಿಭಾಗವಾರು ವಿಚಾರ ಸಂಕಿರಣ ವಿದ್ಯಾರ್ಥಿಗಳಲ್ಲಿನ ಜ್ಞಾನ ದಿಗಂತವನ್ನು ವಿಸ್ತರಿಸುವುದಕ್ಕಾಗಿ ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ಉಪನ್ಯಾಸ ಕೇಳಿದ ನಂತರ ಆ ವಿಚಾರಗಳನ್ನು ನಿತ್ಯದ ಪಠ್ಯಗಳ ಜೊತೆಗೆ ತಳಕು ಹಾಕಿಕೊಂಡು ಓದಿಕೊಳ್ಳಬೇಕು’ ಎಂದು ಕಿವಿ ಮಾತು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಸಾಂಸ್ಕೃತಿಕ ಸಮಿತಿಯ ಸಹ ಕಾರ್ಯದರ್ಶಿ ಮಧುಸೂದನ್ ‘ಸರ್ಕಾರ ನೀಡಿರುವ ಹಣ ಖರ್ಚು ಮಾಡುವುದಕ್ಕಾಗಿ ನಾವು ಉಪನ್ಯಾಸ ಏರ್ಪಡಿಸಿಲ್ಲ. ಹಾಗೆಯೇ ಉಪನ್ಯಾಸಗಳಲ್ಲಿ ನೀಡಿರುವ ವಿಚಾರಗಳು ಕೇವಲ ಪಠ್ಯಕ್ಕೆ ಸೀಮಿತಗೊಳಿಸಿಕೊಳ್ಳುವ ಅಗತ್ಯವಿಲ್ಲ.

ಪಠ್ಯದ ಜೊತೆಗೆ, ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳಲು ಉಪನ್ಯಾಸದ ವಿಚಾರಗಳು ನೆರವಾಗುತ್ತವೆ’ ಎಂದರು.ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಕರಿಯಪ್ಪ ಮಾಳಿಗೆ ಅವರು ಪ್ರೊ. ಎಸ್. ಜಿ.ಸಿದ್ದರಾಮಯ್ಯ ಅವರನ್ನು ಪರಿಚಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.