ADVERTISEMENT

ಬಯಲುಸೀಮೆಗೆ ಕುಡಿಯುವ ನೀರು ಯೋಜನೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2012, 5:34 IST
Last Updated 7 ಡಿಸೆಂಬರ್ 2012, 5:34 IST

ಹಿರಿಯೂರು: ಜೆಡಿಎಸ್ ಅಧಿಕಾರಕ್ಕೆ ತಂದರೆ ಕೇವಲ 48 ಗಂಟೆಗಳಲ್ಲಿ ಚಿತ್ರದುರ್ಗ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರು ಪೂರೈಕೆ ಮಾಡುವ ಯೋಜನೆಗೆ ಚಾಲನೆ ನೀಡಿ, ಐದು ವರ್ಷದ ಕಾಲಮಿತಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಘೋಷಿಸಿದರು.

ನಗರದ ನೆಹರು ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ತಾವು ಮುಖ್ಯಮಂತ್ರಿ ಆಗಿದ್ದಾಗ ಭದ್ರಾ ಮೇಲ್ದಂಡೆ ಯೋಜನೆ ಮೂಲಕ ಬಯಲುಸೀಮೆಯ ಜಿಲ್ಲೆಗಳಿಗೆ 19 ಟಿಎಂಸಿ ನೀರು ಹರಿಸಲುರೂ. 4 ಸಾವಿರ ಕೋಟಿ ವೆಚ್ಚದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದೆ. ಆದರೆ, ಬಿಜೆಪಿ ಸರ್ಕಾರ ಆಮೆಗತಿಯಲ್ಲಿ ಕಾಮಗಾರಿ ನಡೆಸುತ್ತಿರುವ ಕಾರಣ ಜನ ನೀರಿನ ಬವಣೆ ಅನುಭವಿಸುವುದು ತಪ್ಪಿಲ್ಲ. ಅಧಿಕಾರಕ್ಕೆ ಬಂದರೆ ನಾಡಿನ ರೈತರ ಎಲ್ಲಾ ಸಾಲಗಳನ್ನು ಒಮ್ಮೆ ಮನ್ನಾ ಮಾಡುತ್ತೇನೆ. ಹಿಂದೆ ರೈತರು ಕೇಳದಿದ್ದರೂ ಸಾಲ ಮನ್ನಾ ಮಾಡಿದ್ದೆ. ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಯಡಿಯೂರಪ್ಪ ಹಾವೇರಿಯಲ್ಲಿ ಗೋಲಿಬಾರ್ ಮಾಡಿಸಿದ ಜಾಗದಲ್ಲಿ ಸತ್ತ ರೈತರ ಸಮಾಧಿ ಮೇಲೆ ಕೆಜೆಪಿ ಸಮಾವೇಶ ನಡೆಸಲು ಹೊರಟಿದ್ದಾರೆ. ನಾಡಿನ ಜನತೆ ಚಿಂತಿಸಬೇಕು ಎಂದರು.

ಜನವರಿಯಲ್ಲಿ ಹುಬ್ಬಳ್ಳಿ ಅಥವಾ ವಿಜಾಪುರದಲ್ಲಿ ರೈತ ಸಮಾವೇಶ ನಡೆಸಿ, ಕೇವಲ 24 ಗಂಟೆಯಲ್ಲಿ ಒಂದು ಪೈಸೆ ಲಂಚವಿಲ್ಲದೆ ರೈತರ ಖಾತೆ ಬದಲಾವಣೆ, ರಾಜ್ಯದ 60 ಲಕ್ಷ ರೈತ ಕುಟುಂಬಗಳಿಗೆ ಬಿತ್ತನೆಬೀಜ, ರಸಗೊಬ್ಬರ ಕೊಳ್ಳಲು ತಲಾರೂ. 5 ಸಾವಿರ ನೀಡುವ, ರೈತರ ಮಕ್ಕಳಿಗೆ ಶಿಕ್ಷಣದಲ್ಲಿ ಪ್ರಾತಿನಿಧ್ಯ ನೀಡುವ ತೀರ್ಮಾನ ಕೈಗೊಳ್ಳಲಾಗುವುದು. ವಿಕಲಚೇತನರಿಗೆರೂ. 2,5000, ವೃದ್ಧರು, ವಿಧವೆಯರಿಗೆ ಮಾಸಿಕರೂ. 1,500, ಯುವತಿಯರಿಗೆ ಮಾಸಿಕರೂ. 1,500 ಗೌರವಧನ, ನಿರುದ್ಯೋಗಿ ಯುವಕರಿಗೆ ಮಾಸಿಕರೂ. 10-15 ಸಾವಿರ ವೇತನ ಸಿಗುವ ಉದ್ಯೋಗ ಕೊಡಿಸಲಾಗುವುದು ಎಂದು ಘೋಷಿಸಿದರು. ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿವೆ. ಹಿಂದಿನ ಚುನಾವಣೆ ಯಲ್ಲಿ ನನಗೆ ಶಿಕ್ಷೆ ನೀಡಿದ್ದೀರಿ. ಈಗ ಆಶೀರ್ವದಿಸಿ ಅಭಿವೃದ್ಧಿಗೆ ಅವಕಾಶ ನೀಡಬೇಕು ಎಂದರು.

ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ, ತಾಲ್ಲೂಕು ಪಂಚಾಯ್ತಿ ಸದಸ್ಯೆ ಡಾ.ಸುಜಾತಾ, ಸುಮೇರ್‌ಮಲ್‌ಷಾ, ಸತ್ಯನಾರಾಯಣ, ಎಂ. ಜಯಣ್ಣ, ಭೋಜೇಗೌಡ, ದಯಾನಂದ್, ಮುನಿಕೃಷ್ಣ, ಮುನಿರಾಜು, ಪುಷ್ಪಾ ತಮ್ಮಣ್ಣ, ಅರುಣಾ ಪಟೇಲ್, ಶಾರದಮ್ಮ, ಮೀನಾಕ್ಷಿ ನಂದೀಶ್, ರವಿಕುಮಾರ್, ಜಿ.ಬಿ. ಶೇಖರ್, ಜ್ಯೋತಿಲಕ್ಷ್ಮೀ ಉಪಸ್ಥಿತರಿದ್ದರು.
ಪನ್ನೀರ್‌ಸೆಲ್ವಂ ಸ್ವಾಗತಿಸಿದರು. ಕೆ. ಶಂಕರಮೂರ್ತಿ ನಿರೂಪಿಸಿದರು.

ಜೆಡಿಎಸ್‌ನಲ್ಲೇ ಇದ್ದು ಮಂತ್ರಿಯಾಗಿ ಬರ‌್ತೀನಿ; ಬಸವರಾಜನ್
ಹಿರಿಯೂರು: ಜೆಡಿಎಸ್‌ನಲ್ಲೇ ಇದ್ದು, ಎಚ್.ಡಿ. ಕುಮಾರಸ್ವಾಮಿ ಸಂಪುಟದಲ್ಲಿ ಮಂತ್ರಿಯಾಗಿ ಜಿಲ್ಲೆಗೆ ಬರುತ್ತೇನೆ ಎಂದು ಶಾಸಕ ಎಸ್.ಕೆ. ಬಸವರಾಜನ್ ಘೋಷಿಸಿದರು.

ನಗರದ ನೆಹರು ಮೈದಾನದಲ್ಲಿ ಗುರುವಾರ ತಾಲ್ಲೂಕು ಜೆಡಿಎಸ್ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತನ್ನ ಮೇಲೆ ನಾನಾ ರೀತಿಯ ಊಹಾಪೋಹಗಳು ಹರಡಿವೆ. ಅವೆಲ್ಲ ಊಹಾಪೋಹ ಮಾತ್ರ. ಜೆಡಿಎಸ್ ಬಿಡುವ ಮಾತಿಲ್ಲ ಎಂದು ಹೇಳಿದರು.

ಕೆಲವು ದಿನಗಳ ಹಿಂದೆ ಬಿಜೆಪಿ ತೊರೆದಿದ್ದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎನ್.ಆರ್. ಲಕ್ಷ್ಮೀಕಾಂತ್, ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಗೊಂಡು ಮಾತನಾಡಿ, ಕುಮಾರಸ್ವಾಮಿ ಅವರ 20 ತಿಂಗಳ ಆಡಳಿತ ರಾಜ್ಯದ ಇತಿಹಾಸದಲ್ಲಿ ಉಳಿದಿದೆ. ಮರುಭೂಮಿಯಂತೆ ಆಗಿರುವ ಚಿತ್ರದುರ್ಗ ಜಿಲ್ಲೆಗೆ ನೀರು ಹರಿಸುವ ಶಕ್ತಿ ಅವರಲ್ಲಿದೆ ಎಂಬ ಕಾರಣಕ್ಕೆ ಜೆಡಿಎಸ್ ಸೇರುತ್ತಿದ್ದೇನೆ. ಪಕ್ಷ ನೀಡುವ ಯಾವುದೇ ಜವಾಬ್ದಾರಿ ನಿರ್ವಹಿಸುತ್ತೇನೆ ಎಂದರು.

ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ. ಯಶೋಧರ ಮಾತನಾಡಿ, ಸ್ಥಳೀಯ ಶಾಸಕರ ಕುಮ್ಮಕ್ಕಿನಿಂದ ಚಳ್ಳಕೆರೆಗೆ ವಾಣಿವಿಲಾಸ ಜಲಾಶಯದ ನೀರು ತೆಗೆದುಕೊಂಡು ಹೋಗಲಾಗುತ್ತಿದೆ. ಧರ್ಮಪುರ ಬದಲು ಪರಶುರಾಂಪುರ ತಾಲ್ಲೂಕು ಕೇಂದ್ರ ಮಾಡುವ ಹುನ್ನಾರ ನಡೆದಿದೆ. ಅಧಿಕಾರಕ್ಕೆ ಬರುವ ಮುಂಚೆ ನೀಡಿದ್ದ ವಾಣಿವಿಲಾಸ ಜಲಾಶಯಕ್ಕೆ ನೀರು, ಗಾಯತ್ರಿ ಜಲಾಶಯದ ಕೋಡಿ ಉಠಾವಣೆ, ಧರ್ಮಪುರ ಕೆರೆಗೆ ಪೂರಕ ನಾಲೆ ಮೊದಲಾದ ಯಾವ ಕೆಲಸವೂ ಆಗಿಲ್ಲ. ಮತದಾರರು ಸ್ಥಳೀಯರನ್ನೇ ಆಯ್ಕೆ ಮಾಡಿದರೆ ಇಂತಹ ನಿರ್ಲಕ್ಷ್ಯ ಆಗುವುದಿಲ್ಲ ಎಂದು ಹೇಳಿದರು.

ಪಕ್ಷದ ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಎಚ್.ಎಂ. ಷಕೀಲ್ ನವಾಜ್ ಮಾತನಾಡಿ, ಯಡಿಯೂರಪ್ಪ ಅವರಿಗೆ ಬಿಜೆಪಿ ತೊರೆದ ಮೇಲೆ ಅಲ್ಪಸಂಖ್ಯಾತರ ನೆನಪಾಗಿದೆ. ಮಂಗಳೂರು, ಮೈಸೂರು, ದಾವಣಗೆರೆ, ಶಿವಮೊಗ್ಗ ಮೊದಲಾದ ಕಡೆ ನಡೆದ ಗಲಭೆಗಳಿಗೆ ಯಾರು ಕಾರಣ ಎಂದು ಅವರು ಸ್ಪಷ್ಟಪಡಿಸಬೇಕು. ವಕ್ಫ್  ಆಸ್ತಿ ಕಬಳಿಸಿರುವವರ ಪಟ್ಟಿಯಲ್ಲಿ ಶೇ 90ರಷ್ಟು ಕಾಂಗ್ರೆಸ್‌ನವರಿದ್ದಾರೆ. ಇಂಥವರಿಂದ ಅಲ್ಪಸಂಖ್ಯಾತರ ಉದ್ದಾರ ಸಾಧ್ಯವೇ? ಎಂದು ಪ್ರಶ್ನಿಸಿದರು.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.