ADVERTISEMENT

ಬಯಲುಸೀಮೆಗೆ ಬರ ಸಿಡಿಲು

​ಪ್ರಜಾವಾಣಿ ವಾರ್ತೆ
Published 6 ಜುಲೈ 2012, 8:55 IST
Last Updated 6 ಜುಲೈ 2012, 8:55 IST

ಉದಾಹರಣೆ 1: ಚಳ್ಳಕೆರೆ ತಾಲ್ಲೂಕಿನ ಮೀರಸಾಬಿಹಳ್ಳಿಯ ಜಯಕುಮಾರ್ ಅವರ 28 ಎಕರೆ ಜಮೀನು ಪಾಳು ಬಿದ್ದಿದೆ. ಕಳೆದ ವರ್ಷ ಒಂದು ಕಾಳು ಸಹ ಬಿತ್ತಿಲ್ಲ. ಈ ವರ್ಷ ಇದುವರೆಗೂ ಒಂದು ಕಾಳು ಬಿತ್ತಲು ಸಾಧ್ಯವಾಗಿಲ್ಲ. ಬಿತ್ತುವ ಆಸಕ್ತಿಯೂ ಈಗ ಉಳಿದಿಲ್ಲ. ಇನ್ನೂ ಬೆಳೆದು ಮಾರಾಟ ಮಾಡಿದರೆ ಖರ್ಚು ಸಹ ಗಿಟ್ಟುವುದಿಲ್ಲ ಎನ್ನುವ ನಿರಾಸೆ. ಈಗಾಗಲೇ ಗ್ರಾಮದಲ್ಲಿ ಹಲವು ಉದ್ಯೋಗ ಅರಸಿ ಬೆಂಗಳೂರು ಸೇರಿದ್ದಾರೆ.

ಉದಾಹರಣೆ 2: ಚಿತ್ರದುರ್ಗ ನಗರದಿಂದ ಸುಮಾರು 10 ಕಿ.ಮೀ. ದೂರದಲ್ಲಿ ಕಲ್ಲಹಳ್ಳಿ ಗ್ರಾಮದ ವೆಂಕಟೇಶ್ ಅವರ ಈರುಳ್ಳಿ ಜಮೀನು ಒಣಗುವ ಸ್ಥಿತಿಗೆ ತಲುಪುತ್ತಿದೆ. ಬಿತ್ತನೆ ಮಾಡಿರುವ ಈರುಳ್ಳಿಗೆ ನೀರುಹರಿಸಲು ಹಗಲಿರುಳು ಶ್ರಮಿಸಬೇಕು. ಅಪರೂಪಕ್ಕೆ ನೀಡುವ ವಿದ್ಯುತ್‌ನಿಂದ ಪಂಪ್‌ಸೆಟ್‌ಗಳಿಂದ ಈರುಳ್ಳಿಗೆ ನೀರುಹರಿಸಿ ಈರುಳ್ಳಿ ಬದುಕಿಸಿಕೊಳ್ಳುವ ಪ್ರಯತ್ನ ಅವರದ್ದು.

-ಇದು ಜಿಲ್ಲೆಯ ಬರ ಪರಿಸ್ಥಿತಿಗೆ ಎರಡು ಉದಾಹರಣೆಗಳು ಮಾತ್ರ. ಜಿಲ್ಲೆಯಲ್ಲಿ ವಿವಿಧೆಡೆ ಸುತ್ತಿದಾಗ ಬಹುತೇಕ ಪ್ರದೇಶಗಳಲ್ಲಿ ಕಾಣುವುದು ಖಾಲಿ ಜಮೀನುಗಳು. ಅಲ್ಲಲ್ಲಿ ಮಾತ್ರ ಹಸಿರು ಕಾಣುತ್ತದೆ. ಅದು ಸಹ ಕೊಳವೆಬಾವಿಗಳಿರುವ ಪ್ರದೇಶದಲ್ಲಿ ಮಾತ್ರ. ಜಮೀನು ಸಿದ್ಧಪಡಿಸಿಕೊಂಡು ಬಿತ್ತನೆಗಾಗಿ ಜಮೀನುಗಳು ಕಾಯುತ್ತಿವೆ.

ADVERTISEMENT

ಕಳೆದ 100 ವರ್ಷಗಳಲ್ಲಿ ಸುಮಾರು 50ಕ್ಕೂ ಹೆಚ್ಚು ಬಾರಿ ಬರ ಎದುರಿಸಿರುವ ಚಿತ್ರದುರ್ಗ ಜಿಲ್ಲೆ ಈಗ ಮತ್ತೊಮ್ಮೆ ಬರಸಿಡಿಲು ಬಡಿದಿದೆ. ಆದರೆ, ಸತತ ಎರಡನೇ ಬಾರಿ ಬರ ಎದುರಿಸಿದ್ದ ಉದಾಹರಣೆಗಳು ಕಡಿಮೆ. ಈ ಬಾರಿಯ ಭೀಕರ ಬರ ಪರಿಸ್ಥಿತಿ ರೈತರ ಬದುಕು ಅಭದ್ರಗೊಳಿಸಿದೆ.

ರೂ. 450 ಕೋಟಿಯಷ್ಟು ನಷ್ಟ

ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ಸಕಾಲಕ್ಕೆ ಮಳೆ ಬಾರದೆ ಬಿತ್ತನೆ ಮಾಡಲಿಲ್ಲ. ಪರಿಣಾಮವಾಗಿ ಬರ ಪರಿಸ್ಥಿತಿ ಎದುರಿಸಿತು. ಸುಮಾರು ರೂ. 450 ಕೋಟಿಗೂ ಹೆಚ್ಚು ಕೃಷಿ ಬೆಳೆ ನಷ್ಟವಾಯಿತು. ಎರಡು ಬಾರಿ ಕೇಂದ್ರ ಅಧ್ಯಯನ ತಂಡಗಳು ಜಿಲ್ಲೆಗೆ ಭೇಟಿ ನೀಡಿ ಅಧ್ಯಯನ ಮಾಡಿದವು. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಮುಖ್ಯಮಂತ್ರಿ ಸದಾನಂದಗೌಡ ಅವರು ಮಿಂಚಿನ ಸಂಚಾರ ನಡೆಸಿ ಅವಲೋಕನ ನಡೆಸಿದರು. ಆದರೆ, ಜಿಲ್ಲೆಗೆ ವಿಶೇಷ ಅನುದಾನ ದೊರೆಯಲಿಲ್ಲ. ಬರ ಪರಿಹಾರದ ಅನುದಾನದ ಅಡಿಯಲ್ಲಿ ಒಂದಿಷ್ಟು ಕಾಮಗಾರಿಗಳು ನಡೆದವು. ಮೇವಿನ ಕೊರತೆಯಾದಾಗ ಗೋಶಾಲೆಗಳನ್ನು ತೆರೆಯಲಾಯಿತು. ಆದರೆ, ಈ ಯೋಜನೆಗಳು ತೋರಿಕೆಯಾಗಿ ಕಂಡವು.

ಶೇ 50ರಷ್ಟು ಈರುಳ್ಳಿ ಒಣಗಿದೆ

ಕಳೆದ ಸಾಲಿನ ಭೀಕರ ಬರದ ಛಾಯೆ ಈ ವರ್ಷವೂ ಮುಂದುವರಿದಿರುವುದು ತೀವ್ರ ಆತಂಕಕ್ಕೀಡು ಮಾಡಿದೆ. ಸಕಾಲಕ್ಕೆ ಮಳೆಯಾಗುವ ಬದಲು ಅಕಾಲಿಕವಾಗಿ ಮಳೆಯಾದರೂ ಜಮೀನು ಹದ ಮಾಡಿ ರೈತರು ಬಿತ್ತನೆ ಮಾಡುತ್ತಿದ್ದರು. ಆದರೆ, ಈಗ ಅಕಾಲಿಕ ಮಳೆಯೂ ಇಲ್ಲ, ಸಕಾಲಿಕ ಮಳೆಯೂ ಇಲ್ಲ.  ಮಹಾರಾಷ್ಟ್ರದಿಂದ ಸಾವಿರಾರು ರೂಪಾಯಿ ಈರುಳ್ಳಿಬೀಜ ತಂದು ಈಗಾಗಲೇ ಬಿತ್ತನೆ ಮಾಡಿರುವ ರೈತರು ಚಾತಕಪಕ್ಷಿಯಂತೆ ಮಳೆಗಾಗಿ ಕಾಯುತ್ತಿದ್ದಾರೆ. ಇದರಲ್ಲಿ ಈಗಾಗಲೇ ಶೇ 50ರಷ್ಟು ಈರುಳ್ಳಿ ಒಣಗಿದೆ ಎಂದು ತೋಟಗಾರಿಕೆ ಇಲಾಖೆ ಅಂದಾಜು ಮಾಡಿದೆ. ಇನ್ನೂ ಹಲವು ಈರುಳ್ಳಿ ಬೆಳೆಗಾರರು ಮಳೆ ಬಾರದೆ ಬಿತ್ತನೆಯನ್ನೇ ಮಾಡಿಲ್ಲ. ಕೊಳವೆ ಬಾವಿ ಹೊಂದಿರುವವರು ಮಾತ್ರ ಈರುಳ್ಳಿ ಸಸಿ ನಾಟಿ ಮಾಡಿದ್ದಾರೆ.

ಡೋಲಾಯಮಾನ ಸ್ಥಿತಿ

ಚಿತ್ರದುರ್ಗದಿಂದ ಉತ್ತರಕ್ಕೆ ಇಡೀ ಮೊಳಕಾಲ್ಮುರು, ಚಳ್ಳಕೆರೆ ಮತ್ತು ಹಿರಿಯೂರು ತಾಲ್ಲೂಕಿನ ಉತ್ತರಭಾಗ ವಾರ್ಷಿಕ ಒಂದೇ ಬೆಳೆಯಾಗಿ ಶೇಂಗಾ ಬೆಳೆಯುವ ಪದ್ಧತಿ ರೂಢಿಸಿಕೊಂಡು ಬಂದಿರುವ ರೈತರು, ಬೀಜ ಮತ್ತು ರಸಗೊಬ್ಬರ ಖರೀದಿಸಿಕೊಂಡು ಜಮೀನು ಸಿದ್ಧಪಡಿಸಿ ಮಳೆಗಾಗಿ ಕಾಯುತ್ತಿದ್ದಾರೆ. ದಿನಗಳು ವೇಗವಾಗಿ ಕಳೆಯುತ್ತಿದ್ದರೂ ಮಳೆ ಬೀಳುವ ಸೂಚನೆ ಕಾಣುತ್ತಿಲ್ಲ. ಹೀಗಾಗಿ, ರೈತರ ಸ್ಥಿತಿ ಡೋಲಾಯಮಾನವಾಗಿದೆ.
ಹೊಸದುರ್ಗ ತಾಲ್ಲೂಕಿನಲ್ಲಿ ಏಪ್ರಿಲ್‌ನಲ್ಲಿ ಬಿದ್ದಮಳೆಯಿಂದ ಎಳ್ಳು ಮತ್ತು ಹೆಸರು ಬಿತ್ತನೆ ಮಾಡಿದ್ದರು. ಬೆಳೆ ಹೂವಿನ ಹಂತ ತಲುಪುವಷ್ಟರಲ್ಲಿ ಮಳೆ ಬಾರದೆ ಎಲ್ಲ ಫಸಲು ಬಾಡಿ ಒಣಗುತ್ತಿವೆ.

ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿ ಭಾಗ ಮಲ್ಲಾಡಿಹಳ್ಳಿ, ಸಾಸಲು ಭಾಗ ಮತ್ತು ಚಿತ್ರದುರ್ಗ ತಾಲ್ಲೂಕಿನ ಸಿರಿಗೆರೆ ಭಾಗದಲ್ಲಿ ಸುರಿದ ಮಳೆಯಿಂದ ಉತ್ತೇಜಿತರಾದ ರೈತರು ಮೆಕ್ಕೆಜೋಳ ಬಿತ್ತನೆ ಮಾಡಿದ್ದಾರೆ. ಬಹುತೇಕ ಕಡೆ ಒಣ ಬೇಸಾಯ ಮಾಡಿದ್ದಾರೆ. ಇದು ಸಹ ತಡವಾಗಿ ಬಿತ್ತನೆ ಮಾಡಿದ್ದಾರೆ. ಇದರಿಂದ ಇಳುವರಿಯಲ್ಲಿ ತೀವ್ರ ಕುಸಿತವಾಗಲಿದೆ ಎನ್ನುವುದು ರೈತರ ಅಭಿಪ್ರಾಯ.

ಹಿರಿಯೂರು ತಾಲ್ಲೂಕಿನ ಪರಿಸ್ಥಿತಿಯೂ ಗಂಭೀರವಾಗಿದೆ. ತಾಲ್ಲೂಕಿನ ಎಲ್ಲೂ ಮಳೆಯಾಗದೆ ಏನೊಂದು ಬಿತ್ತನೆಯಾಗಿಲ್ಲ.

ಮೊಳಕಾಲ್ಮುರು ತಾಲ್ಲೂಕಿನ ರಾಂಪುರ, ಜಾಗೀರಗುಡ್ಡನಹಳ್ಳಿ ಮತ್ತು ಹೊಸದುರ್ಗ, ಚಿತ್ರದುರ್ಗ ತಾಲ್ಲೂಕಿನ ಪಶ್ಚಿಮ ಭಾಗದಲ್ಲಿ ಕೆಲವು ಕಡೆ ಬಿತ್ತನೆಯಾಗಿರುವ ಹತ್ತಿ ಒಣಗುತ್ತಿದೆ.

`ಶೇಂಗಾ ಬಿತ್ತನೆಗೆ ಜುಲೈ 15ರವರೆಗೆ ಅವಕಾಶವಿದೆ. ಬಿತ್ತನೆ ತಡವಾದರೆ ಸಹಜವಾಗಿ ಇಳುವರಿ ಕಡಿಮೆಯಾಗುತ್ತದೆ. ಮಳೆಯಾಗುವ ನಿರೀಕ್ಷೆ ಇರುವುದರಿಂದ ಇನ್ನೂ ಪರ್ಯಾಯ ಬೆಳೆಗಳ ಬಗ್ಗೆ ರೈತರಿಗೆ ಸಲಹೆ ನೀಡಿಲ್ಲ. ಆದರೆ, ಈ ಬಗ್ಗೆ ಯೋಜನೆ ರೂಪಿಸುತ್ತಿದ್ದೇವೆ~ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

ಹೀಗಿದೆ ಬೆಳೆ ಪರಿಸ್ಥಿತಿ...

ಪ್ರಸ್ತುತ ವರ್ಷದಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಮಳೆಯಾದ ಕಾರಣ ಭೂಮಿ ಸಿದ್ಧತೆಗೆ ಮತ್ತು ಮುಂಗಾರು ಪೂರ್ವ ಬೆಳೆಗಳ ಬಿತ್ತನೆಗೆ ಅನುಕೂಲವಾಗಿತ್ತು. ಆದರೆ, ಮೇ 16ರಿಂದ ಇಲ್ಲಿಯವರೆಗೆ ವ್ಯಾಪಕ ಮಳೆ ಇಲ್ಲದೆ  ಸುಮಾರು 44 ದಿನಗಳ ಒಣಹವೆ ಮುಂದುವರಿದಿದೆ. ಇದರಿಂದ ಮುಂಗಾರು ಪೂರ್ವದಲ್ಲಿ ಬಿತ್ತನೆಯಾಗಿದ್ದ ಬೆಳೆಗಳಾದ ಹೆಸರು, ಎಳ್ಳು, ಹತ್ತಿ ಬೆಳೆಗಳು ತೇವಾಂಶದ ಕೊರತೆಯಿಂದ ಹಾನಿಗೊಳಗಾಗಿದ್ದು, ಶೇ 75ರಿಂದ 80ರಷ್ಟು ಬೆಳೆಗಳು ನಷ್ಟವಾಗುವ ಸಂಭವವಿದೆ. ಅದೇ ರೀತಿ ಜೂನ್ ತಿಂಗಳು ಜಿಲ್ಲೆಯ ಪ್ರಮುಖ ಬಿತ್ತನೆ ಅವಧಿಯಾಗಿದ್ದು, ಮಳೆ ಇಲ್ಲದೆ ಮೆಕ್ಕೆಜೋಳ, ಸೂರ್ಯಕಾಂತಿ, ತೊಗರಿ, ಶೇಂಗಾ, ರಾಗಿ ಮೊದಲಾದ ಬೆಳೆಗಳು ಬಿತ್ತನೆಯಾಗಿಲ್ಲ. ಆದರೆ, ಈ ಬೆಳೆಗಳ ಬಿತ್ತನೆಗೆ ಕಾಲವಕಾಶವಿದೆ ಎನ್ನುತ್ತಾರೆ ಅಧಿಕಾರಿಗಳು.

ಜಿಲ್ಲೆಯ ರಾಮಗಿರಿ, ಭರಮಸಾಗರ ಹೋಬಳಿಗಳ ಕೆಲವು ಪಂಚಾಯ್ತಿಗಳಲ್ಲಿ ಅಲ್ಲಲ್ಲಿ ಮಳೆಯಾಗಿದ್ದು, ಬೆಳೆಗಳ ಪರಿಸ್ಥಿತಿ ಸಾಧಾರಣವಾಗಿದೆ ಎಂದು ಕೃಷಿ ಇಲಾಖೆ ಸಮೀಕ್ಷೆ ಮಾಡಿದೆ.

ಮುಂಗಾರು ಪೂರ್ವದಲ್ಲಿ ಖುಷ್ಕಿಯಲ್ಲಿ ಬಿತ್ತನೆಯಾಗಿದ್ದ ಹೆಸರು, ಎಳ್ಳು, ಹೈಬ್ರಿಡ್ ಹತ್ತಿ ಬೆಳೆಗಳು ಸುಮಾರು 16,800 ಹೆಕ್ಟೇರ್‌ನಲ್ಲಿದ್ದು, ತೀವ್ರ ಹಾನಿಗೀಡಾದ್ದು, ಹೆಸರು ಮತ್ತು ಎಳ್ಳು ಬೆಳೆಗಳಲ್ಲಿ ಶೇ 75ರಿಂದ 80ರಷ್ಟು ಇಳುವರಿ ನಷ್ಟವಾಗುವ ಸಂಭವವಿದೆ ಎಂದು ಅಂದಾಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.