ADVERTISEMENT

ಬರ ಪರಿಸ್ಥಿತಿ: ಸಿಎಂ ಜತೆ ಚರ್ಚೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2011, 10:05 IST
Last Updated 13 ಸೆಪ್ಟೆಂಬರ್ 2011, 10:05 IST

ಚಿತ್ರದುರ್ಗ: ಜಿಲ್ಲೆಯಲ್ಲಿನ ಬರ ಪರಿಸ್ಥಿತಿ ಕುರಿತು ಮುಖ್ಯಮಂತ್ರಿ ಜತೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಸಂಸದ ಜನಾರ್ದನಸ್ವಾಮಿ ತಿಳಿಸಿದರು.ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸುವ ಕುರಿತು ಈಗಾಗಲೇ ಅನೇಕ ಪ್ರಯತ್ನಗಳನ್ನು ಮಾಡಲಾಗಿದೆ. ಕೇಂದ್ರ ಸರ್ಕಾರದ ಮಾನದಂಡಗಳು ಬರಪೀಡಿತ ಎಂದು ಘೋಷಿಸಲು ಅಡ್ಡಿಯಾಗುತ್ತಿವೆ  ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕೇಂದ್ರ ಸರ್ಕಾರ ನಿಗದಿಪಡಿಸಿರುವ ಮಾನದಂಡಗಳ ಪ್ರಕಾರ ಶೇ.50ಕ್ಕಿಂತ ಕಡಿಮೆ ಮಳೆಯಾದರೆ ಬರಪೀಡಿತ ಎಂದು ಘೋಷಿಸಬಹುದು. ಮಳೆ ಸಕಾಲಿಕವಾಗಿ ಮತ್ತು ಎಲ್ಲ ಪ್ರದೇಶಗಳಲ್ಲಿ ಸಮರ್ಪಕವಾಗಿ ಸುರಿಯದ ಕಾರಣ ಈ ಮಾನದಂಡಗಳನ್ನು ಸಡಿಲಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರುವಂತೆ ಕೋರಲಾಗುವುದು ಎಂದು ವಿವರಿಸಿದರು.
 
ಇತ್ತೀಚೆಗೆ ನಡೆದ ಲೋಕಸಭೆ ಅಧಿವೇಶನದಲ್ಲಿ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ವಿಧೇಯಕ ಕುರಿತು ಚರ್ಚೆಯಲ್ಲಿ ತಾವು ಪಾಲ್ಗೊಂಡಿದ್ದು, ದೇಶದಲ್ಲಿನ ಶಿಕ್ಷಣದ ದುಸ್ಥಿತಿಯ ಬಗ್ಗೆ ಮಾತನಾಡಿದೆ. ಶಿಕ್ಷಣವನ್ನು ಇನ್ನೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ದೇಶದ ಆರ್ಥಿಕ ಪರಿಸ್ಥಿತಿ ಶಿಕ್ಷಣದ ಅಂಶಗಳ ಮೇಲೆ ನಿಂತಿದೆ.

ಯಾವುದೇ ದೇಶ ಶಿಕ್ಷಣಕ್ಕೆ ವಿನಿಯೋಗಿಸಿದ ಖರ್ಚು, ಸಮಯ ಎಲ್ಲವೂ ಹಿಂತಿರುಗಿ ದೇಶದ ಅಭಿವೃದ್ಧಿಗೆ ಸಹಾಯವಾಗುತ್ತದೆ. ಈ ಕನಿಷ್ಠ ಅರ್ಥವನ್ನು ಕೇಂದ್ರ ಸರ್ಕಾರ ಮಾಡಿಕೊಳ್ಳಬೇಕು ಎನ್ನುವುದು ತಮ್ಮ ಚರ್ಚೆಯ ಪ್ರಮುಖ ಅಂಶವಾಗಿತ್ತು.

`ಐಐಎಸ್ಸಿ ಶಿಕ್ಷಣ ಮತ್ತು ಸಂಶೋಧನೆ~ ಕೇಂದ್ರಗಳನ್ನು ಆರಂಭಿಸಲು ಮುಂದಾಗಿರುವುದು ತಪ್ಪು ಸಂದೇಶ ನೀಡುತ್ತದೆ. ಈಗಿರುವ ಐಐಎಸ್ಸಿಯಲ್ಲಿ ಶಿಕ್ಷಣ ಮತ್ತು ಸಂಶೋಧನೆ ಇಲ್ಲವೇ ಎನ್ನುವ ಅರ್ಥ ಕಲ್ಪಿಸುತ್ತಿದೆ. ಈ ಬಗ್ಗೆ ಮರುಚಿಂತನೆ ಅಗತ್ಯ ಎಂದು ಸಚಿವ ಕಪಿಲ್ ಸೀಬಾಲ್ ಅವರನ್ನು ಕೋರಿರುವುದಾಗಿ ತಿಳಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.