ADVERTISEMENT

ಬರ ಪರಿಹಾರಕ್ಕೆ ರೂ 11.5 ಕೋಟಿ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2012, 9:45 IST
Last Updated 16 ಅಕ್ಟೋಬರ್ 2012, 9:45 IST

ನಾಯಕನಹಟ್ಟಿ: ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದ್ದು, ರೈತರಿಗೆ ಪರಿಹಾರವಾಗಿ ನೀಡಲು ಸರ್ಕಾರದಿಂದ ರೂ 11.5 ಕೋಟಿ ಬಿಡುಗಡೆಯಾಗಿದೆ ಎಂದು ಜಿಲ್ಲಾಧಿಕಾರಿ ವಿ.ಪಿ.  ಇಕ್ಕೇರಿ ಹೇಳಿದರು.
 
ಇಲ್ಲಿನ ಶ್ರೀಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ಸೋಮವಾರ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.  ರಾಜ್ಯದಲ್ಲಿಯೇ ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಾಲ್ಲೂಕುಗಳು ಅತ್ಯಂತ ಕಡಿಮೆ ಮಳೆ ಬೀಳುವ ತಾಲ್ಲೂಕುಗಳಾಗಿವೆ. ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿದ್ದು ಸಣ್ಣ ರೈತರ ಉಪಯೋಗಕ್ಕಾಗಿ ಸರ್ಕಾರ ಕಡುಬಡವ ರೈತರಿಗೆ ಬ್ಯಾಂಕ್ ಮೂಲಕ ರೂ 1 ಸಾವಿರ ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಿದರು.

ಮಧ್ಯ ಕರ್ನಾಟಕದಲ್ಲಿ ಪ್ರಸಿದ್ಧಯಾಗಿರುವ ಈ ದೇವಸ್ಥಾನ ಒತ್ತುವರಿಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಇದಕ್ಕಾಗಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ದೇವಸ್ಥಾನಕ್ಕೆ ಆವರಣ ಗೋಡೆಯನ್ನು ನಿರ್ಮಿಸಲು ಶೀಘ್ರದಲ್ಲಿಯೇ ಕ್ರಮ ಕೈಗೊಂಡು ವರದಿ ನೀಡುವಂತೆ ಕಾರ್ಯ ನಿರ್ವಾಹಕ ಅಧಿಕಾರಿಗೆ ಸೂಚಿಸಿದರು.

ರಾಜ್ಯದಿಂದಲ್ಲದೇ ಹೊರರಾಜ್ಯಗಳಿಂದ ನಿತ್ಯವೂ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸುತ್ತಿದ್ದಾರೆ ಅವರಿಗೆ ಮೂಲ ಸೌಕರ್ಯ ಒದಗಿಸುವಂತೆ ಸೂಚಿಸಿದರು. ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಬಿಡುಗಡೆಯಾಗಿರುವ ರೂ 1.5 ಕೋಟಿ ಅನುದಾನವನ್ನು ಶೀಘ್ರದಲ್ಲಿಯೇ ಬಳಸಬೇಕು ಇಲ್ಲದಿದ್ದಲ್ಲಿ ವಿಳಂಬವಾದರೆ ಹಿಂತಿರುಗುತ್ತದೆ ಎಂದು ಎಚ್ಚರಿಸಿದರು.

ದೇವಸ್ಥಾನದ ಸಮಿತಿಯ ಅಧ್ಯಕ್ಷ ಎಂ.ವೈ.ಟಿ. ಸ್ವಾಮಿ ಮಾತನಾಡಿ, ರಾಜ್ಯ ಸರ್ಕಾರದಿಂದ ದೇವಸ್ಥಾನಕ್ಕೆ ಬಿಡುಗಡೆಯಾಗಿರುವ ಹಣದಲ್ಲಿ ಒಳಮಠದ ಮುಂಭಾಗ ಸಮುದಾಯ ಭವನ ನಿರ್ಮಿಸಲಾಗುವುದು. ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಇನ್ನು 10 ತಿಂಗಳಲ್ಲಿ ಕಾಮಗಾರಿ ಪೂರೈಸಲಾ ಗುವುದು. ಪ್ರವಾಸೋದ್ಯಮ ಸಚಿವರು ಒಳಮಠದ ಸಮುದಾಯ ಭವನಕ್ಕೆ ರೂ 50 ಲಕ್ಷ ನೀಡುವುದಾಗಿ ಭರವಸೆ ನೀಡಿರುವುದರಿಂದ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ತಿಳಿಸಿದರು.
 
ಈ ಸಂದರ್ಭದಲ್ಲಿ ದೇವಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿ ಹಾಲಪ್ಪ. ಸಮಿತಿಯ ಸದಸ್ಯರಾದ ಉಮೇಶ್, ಶಿವರುದ್ರಪ್ಪ, ತಹಶೀಲ್ದಾರ್ ರಾಮಚಂದ್ರಪ್ಪ  ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.