ADVERTISEMENT

ಬಸ್ ಪ್ರಯಾಣಿಕರಿಗೆ `ಆತಿಥ್ಯ'ದ ಹಿಂಸೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2013, 5:19 IST
Last Updated 10 ಏಪ್ರಿಲ್ 2013, 5:19 IST

ಚಿತ್ರದುರ್ಗ: ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಇರುವ ಹಿರಿಯೂರು ಸಮೀಪದ `ಆತಿಥ್ಯ' ಹೋಟೆಲ್‌ನಲ್ಲಿ ಕಡ್ಡಾಯವಾಗಿ ತಿಂಡಿ ಅಥವಾ ಊಟ ಮಾಡಲೇಬೇಕು ಎನ್ನುವ ಫರ್ಮಾನು ಕೆಎಸ್‌ಆರ್‌ಟಿಸಿ ಬಸ್‌ಗಳ ಪ್ರಯಾಣಿಕರಿಗೆ ಹಿಂಸೆಯಾಗುತ್ತಿದೆ.

ಬೆಳಿಗ್ಗೆ ಯಾವುದೇ ಸಮಯದಲ್ಲಿ ತಿಂಡಿ ಮಾಡಿದ್ದರೂ ಇಲ್ಲಿ ಬಸ್‌ಗಳನ್ನು ನಿಲ್ಲಿಸುವುದು ಕಡ್ಡಾಯವಾಗಿದೆ. ನಗರದಿಂದ ಬೆಂಗಳೂರಿನತ್ತ ತೆರಳುವ ಎಲ್ಲ ಕೆಎಸ್‌ಆರ್‌ಟಿಸಿ ಬಸ್‌ಗಳು ಇಲ್ಲಿ ನಿಲ್ಲಲೇಬೇಕು. ನೀವು 10ಕ್ಕೆ ತಿಂಡಿ ಮಾಡಿದ್ದರೂ 11ಕ್ಕೆ ಈ ಹೋಟೆಲ್‌ನಲ್ಲಿ ತಿಂಡಿ ಅಥವಾ ಊಟ ಮಾಡಲೇಬೇಕು. ಈ ಆದೇಶ ಬಸ್ ಚಾಲಕ ಮತ್ತು ನಿರ್ವಾಹಕರಿಗೆ ಕಡ್ಡಾಯವಾಗಿದೆ. ಇದು ಹಗಲು ದರೋಡೆ ಅಲ್ಲದೆ ಮತ್ತೇನು? ಎಂದು ಪ್ರಯಾಣಿಕರು ಪ್ರಶ್ನಿಸಿದ್ದಾರೆ.

ಈ ರೀತಿಯ ಆದೇಶದಿಂದ ಪ್ರಯಾಣಿಕರು ದಿನನಿತ್ಯ ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕರು ಮತ್ತು ಚಾಲಕರ ಜೊತೆ ವಾಗ್ವಾದ, ಜಗಳ ಮಾಡುವುದು ಪ್ರತಿನಿತ್ಯ ನಡೆಯುತ್ತಿದೆ. ಜತೆಗೆ ಈ ಹೋಟೆಲ್‌ನಲ್ಲಿ ತಿಂಡಿ, ಊಟವೂ ದುಬಾರಿ. ಸೇವೆಯೂ ಸಮರ್ಪಕವಾಗಿಲ್ಲ. ಹೋಟೆಲ್ ಸಿಬ್ಬಂದಿಗಳು ಸಹ ಗೂಂಡಾ ರೀತಿಯಲ್ಲಿ ವರ್ತಿಸುತ್ತಾರೆ ಎಂದು ಪ್ರಯಾಣಿಕರು ದೂರಿದ್ದಾರೆ.

ಹಿರಿಯೂರಿಗೆ ಸುಮಾರು 7 ಕಿ.ಮೀ.ಸಮೀಪದಲ್ಲಿರುವ ಈ ಹೋಟೆಲ್ ಹತ್ತಿರ ಸಾರಿಗೆ ಸಂಸ್ಥೆಯ ಎಲ್ಲಾ ಬಸ್‌ಗಳನ್ನು ನಿಲ್ಲಿಸಲೇಬೇಕೆಂಬ ಫರ್ಮಾನು ಹೊರಡಿಸಿರುವುದರಿಂದ ಚಾಲಕರು ಚಾಚು ತಪ್ಪದೇ ಅಧಿಕಾರಿಗಳ ಆದೇಶವನ್ನು ಶಿರಸಾವಹಿಸಿ ಪಾಲಿಸುತ್ತಾ ಬರುತ್ತಿದ್ದಾರೆ. ಇದರಿಂದ ದಿನನಿತ್ಯವೂ ಚಿತ್ರದುರ್ಗದಿಂದ ಹಿರಿಯೂರಿಗೆ, ಹಿರಿಯೂರಿನಿಂದ ಚಿತ್ರದುರ್ಗಕ್ಕೆ ಸಂಚರಿಸುವವರಿಗೆ ಸಾಕಷ್ಟು ತೊಂದರೆಯಾಗುತ್ತಿದ್ದು, ಸಾರಿಗೆ ಸಂಸ್ಥೆಯ ಮೇಲಾಧಿಕಾರಿಗಳು ಈ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಪ್ರಯಾಣಿಕರು ಮನವಿ ಮಾಡಿದ್ದಾರೆ.

ಚಿತ್ರದುರ್ಗ ಮತ್ತು ಹಿರಿಯೂರು ಮಧ್ಯೆ ಕೇವಲ 40 ಕಿಲೋ ಮೀಟರ್ ಅಂತರವಿದೆ. ಪ್ರತಿ ಬಸ್‌ನಲ್ಲಿ ಕನಿಷ್ಠ 30 ರಿಂದ 40 ಪ್ರಯಾಣಿಕರು ಸಂಚರಿಸುತ್ತಾರೆ. ಹೀಗಾಗಿ ಹೋಟೆಲ್‌ನವರಿಗೂ ಉತ್ತಮ ಲಾಭವಾಗುತ್ತದೆ ಎಂದು ದೂರಿದ್ದಾರೆ.

ಚಾಲಕ ಮತ್ತು ನಿರ್ವಾಹಕರನ್ನು ಪ್ರಶ್ನಿಸಿದರೆ, `ತಾವೇನು ಇದೇ ಹೋಟೆಲ್‌ನಲ್ಲಿ ಊಟ ಮಾಡಬೇಕೆನ್ನುವ ಉದ್ದೇಶ ಇಲ್ಲ. ಆದರೆ, ಅಧಿಕಾರಿಗಳು ಒತ್ತಡ ಹಾಕಿ ಹೋಟೆಲ್ ಬಳಿ ನಿಲ್ಲಿಸುವಂತೆ ತಾಕೀತು ಮಾಡುತ್ತಿದ್ದಾರೆ' ಎಂದು ಹೇಳುತ್ತಾರೆ.

ತಿಂಡಿ, ಊಟದ ಸಮಯ ಮೀರಿದ್ದರೂ ಹೋಟೆಲ್ ಎದುರು ಬಸ್ ನಿಲ್ಲಿಸುವುದನ್ನು ಗಮನಿಸಿದರೆ ಸಂಸ್ಥೆಯವರು ಹೋಟೆಲ್ ಆಡಳಿತದ ಜತೆಗೆ ಶಾಮೀಲಾಗಿದ್ದಾರೆಯೇ ಎನ್ನುವ ಶಂಕೆ ವ್ಯಕ್ತವಾಗುತ್ತಿದೆ. ಈ ಅವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಪ್ರಯಾಣಿಕರಾದ ಮಂಜುನಾಥ್, ಗೋವಿಂದಪ್ಪ, ತಿಪ್ಪೇಸ್ವಾಮಿ, ಮಧುಸೂದನ್, ಅಹಮದ್, ನೂರುಲ್ಲಾ, ಗೌಸ್, ಶುಭಾ, ಮಮತಾ, ಮಂಜುಳಾ, ತಿಮ್ಮೇಶ್ ಮತ್ತಿತರ ಪ್ರಯಾಣಿಕರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.