ADVERTISEMENT

ಬಾಲಗಂಗಾಧರ ಸ್ವಾಮೀಜಿಗೆ ಆರೂಢ ಶ್ರೀ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2011, 9:45 IST
Last Updated 25 ಫೆಬ್ರುವರಿ 2011, 9:45 IST

ಚಿತ್ರದುರ್ಗ: ಪ್ರತಿ ವರ್ಷದಂತೆ ಈ ವರ್ಷವೂ ನಗರದ ಕಬೀರಾನಂದ ಆಶ್ರಮದಲ್ಲಿ ಫೆ. 26 ರಿಂದ ಮಾರ್ಚ್ 2 ರವರೆಗೆ 81ನೇ ಮಹಾಶಿವರಾತ್ರಿ ಮಹೋತ್ಸವ ನಡೆಯಲಿದೆ.ಪ್ರತಿದಿನ ಸಂಜೆ 6.30ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು ನಾಡಿನ ಸಾಹಿತಿಗಳು, ಮಠಾಧೀಶರು, ಚಿಂತಕರು, ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಕಬೀರಾನಾಂದ ಆಶ್ರಮದ ಶಿವಲಿಂಗಾನಂದ ಸ್ವಾಮೀಜಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಗುರುಗಳ ಪರಂಪರೆಯಂತೆ ಪ್ರತಿವರ್ಷವೂ ಶಿವನಾಮ ಸಪ್ತಾಹವನ್ನು ಮಹಾಶಿವರಾತ್ರಿ ಸಮಯದಲ್ಲಿ ನಡೆಸಿಕೊಂಡು ಬರುತ್ತಿರುವುದು ವೈಶಿಷ್ಟ್ಯವಾಗಿದೆ. ಶಿವನಾಮ ಸಪ್ತಾಹವನ್ನು ಜಾತಿ, ಮತ, ಪಂತಗಳ ಚೌಕಟ್ಟನ್ನು ಮೀರಿ ಭಾವೈಕ್ಯ ಮೆರೆಯುತ್ತಿದೆ ಎಂದು ಶ್ರೀಗಳು ನುಡಿದರು.ನೂತನವಾಗಿ ನಿರ್ಮಿಸಿರುವ ಆರೂಢ ದಾಸೋಹ ಭವನ, ದಿ.ಎಚ್. ವೆಂಕಟೇಶ್ ಸ್ಮರಣಾರ್ಥ ಸ್ಥಾಪಿಸಿರುವ ಆರೂಢ ಶ್ರೀ ಪ್ರಶಸ್ತಿ ಪ್ರದಾನ ಇತರೆ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿವರಿಸಿದರು.

ಫೆ. 26ರಂದು ಸಂಜೆ 6.30ಕ್ಕೆ ಕಾರ್ಯಕ್ರಮ ಉದ್ಘಾಟನೆಯಾಗಲಿದ್ದು, ಪದ್ಮಭೂಷಣ ಬಾಲಗಂಗಾಧರ ನಾಥ ಸ್ವಾಮೀಜಿ ಅವರು ನೂತನ ಆರೊಢ ದಾಸೋಹ ಭವನ ಮತ್ತು ಚಿತ್ರದುರ್ಗ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಮಹಾ ಮಂಟಪವನ್ನು ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಜಿ. ಕರುಣಾಕರರೆಡ್ಡಿ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಎಸ್.ಕೆ. ಬಸವರಾಜನ್ ಪಾಕೆಟ್ ಕ್ಯಾಲೆಂಡರ್ ಬಿಡುಗಡೆ ಮಾಡುವರು. ಅಂದು ಕಾರ್ಯಕ್ರಮದಲ್ಲಿ  ಬಾಲಗಂಗಾಧರನಾಥ ಸ್ವಾಮೀಜಿ ಅವರಿಗೆ ‘ಆರೂಢ ಶ್ರೀ’  ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಮಾರ್ಚ್ 2ರಂದು ನಗರದ ರಾಜಬೀದಿಯಲ್ಲಿ ಪಲ್ಲಕ್ಕಿ ಉತ್ಸವ ಹಾಗೂ ಜನಪದ ಉತ್ಸವ ನಡೆಯಲಿದೆ. ವಿವಿಧ ಇಲಾಖೆಗಳು, ಸಂಘ-ಸಂಸ್ಥೆಗಳು, ಕಲಾ ಮೇಳಗಳು ಈ ಉತ್ಸವದಲ್ಲಿ ಪಾಲ್ಗೊಳ್ಳಲಿವೆ ಎಂದು ವಿವರಿಸಿದರು.ಮಾರ್ಚ್ 3ರಂದು ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ವಿಭೂತಿ ಸ್ನಾನದೊಂದಿಗೆ ಸಪ್ತಾಹ ಸಮಾಪ್ತಿಯಾಗಲಿದೆ.  ಅಂದು ಸಂಜೆ 5ಕ್ಕೆ ಕೌದಿ ಪೂಜೆ ನಡೆಯಲಿದೆ ಎಂದು ಶಿವಲಿಂಗಾನಂದ ಸ್ವಾಮೀಜಿ ತಿಳಿಸಿದರು.ಪ್ರತಿದಿನ ರಾತ್ರಿ ಕಾರ್ಯಕ್ರಮದ ನಂತರ ಕಿರೀಟ ಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾಧವಾನಂದ ಸ್ವಾಮೀಜಿ, ನಾಗರಾಜ್ ಸಂಗಮ್, ವಿ.ಎಲ್. ಪ್ರಶಾಂತ್, ವಕೀಲ ಕುಮಾರಗೌಡ ಇತರರು ಹಾಜರಿದ್ದರು.

‘ಕಲುಷಿತ ಮಠಗಳು

ಚಿತ್ರದುರ್ಗ: ಸರ್ಕಾರ ಎಷ್ಟು ಕಲುಷಿತವಾಗಿದೆಯೋ ಮಠಗಳು ಸಹ ಅಷ್ಟೇ ಕಲುಷಿತವಾಗುತ್ತಿವೆ ಎಂದು ಕಬೀರಾನಾಂದ ಆಶ್ರಮದ ಶಿವಲಿಂಗಾನಂದ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.
ಎಲ್ಲ ಮಠಗಳು ಜಾತಿರಹಿತ ಎಂದು ಹೇಳುತ್ತವೆ. ಆದರೆ, ಒಳಗೆ ಜಾತಿಯನ್ನು ಬಿಟ್ಟಿಲ್ಲ. ರಾಜಕಾರಣದಂತೆ ಧಾರ್ಮಿಕ ಕ್ಷೇತ್ರ ಕೂಡ ಕಲುಷಿತಗೊಂಡಿದೆ. ಯಾವುದೇ ಮಠವೂ ಜಾತಿ ಬಿಟ್ಟಿಲ್ಲ ಮತ್ತು ಜಾತಿ ರಹಿತವಾಗಿ ಗುರುತಿಸಿಕೊಂಡಿಲ್ಲ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸರಕಾರ ಕೂಡ ಜಾತಿಯೊಟ್ಟಿಗೆ ಗುರುತಿಸಿಕೊಳ್ಳುವ ಮಠಗಳಿಗೆ ಅನುದಾನ ನೀಡುತ್ತದೆ. ಆದರೆ ಜಾತಿರಹಿತವಾಗಿ, ನಿಜವಾದ ಜಾತ್ಯತೀತ ನೆಲೆಯಲ್ಲಿ ಕೆಲಸ ಮಾಡುವ ನಮ್ಮಂತಹ ಮಠಗಳಿಗೆ ಸರಕಾರದಿಂದ ಯಾವುದೇ ರೀತಿಯ ಪ್ರೋತ್ಸಾಹ ಸಿಗುತ್ತಿಲ್ಲ ಎಂದು ನುಡಿದರು.ಲೋಕದ ಹಿತಾಸಕ್ತಿಯನ್ನು ಬಯಸುವ ಇಂತಹ ಮಠಗಳನ್ನು ಸರ್ಕಾರ ನಿರ್ಲಕ್ಷಿಸಿವೆ. ಕಬೀರಾನಂದಾಶ್ರಮ ಜಾತಿರಹಿತವಾಗಿ ಕೆಲಸ ಮಾಡುತ್ತಿದೆ. ಮಠಗಳಿಗೆ ಅನುದಾನ ನೀಡುವುದು ತಪ್ಪು ಅಲ್ಲ. ಮಠಗಳು ಸಹ ಸಾರ್ವಜನಿಕ ಕಾರ್ಯಕ್ರಮಗಳಿಗೆ ಉಪಯೋಗಿಸುತ್ತವೆ. ಸರ್ಕಾರದಿಂದಲೇ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.