ಹೊಳಲ್ಕೆರೆ: ಓದಿದ್ದು ಬಿ.ಎಸ್ಸಿ ಪದವಿ. ಆದರೆ, ಕೈ ಹಿಡಿದಿದ್ದು ಮಾತ್ರ ಕೃಷಿ ಕಾಯಕ. ತಾಲ್ಲೂಕಿನ ರಾಮಗಿರಿಯ ಯುವ ರೈತ ಎ.ಪಿ.ಶಿವಕುಮಾರ್ ಅವರು ಎರಡೂವರೆ ಎಕರೆ ಹೊಲದಲ್ಲಿ ಕೇವಲ 9 ತಿಂಗಳಲ್ಲಿ ಎರಡು ಬಾರಿ ಈರುಳ್ಳಿ ಬೆಳೆದು ಅಚ್ಚರಿ ಮೂಡಿಸಿದ್ದಾರೆ. ಎರಡು ಬಾರಿ ಒಂದೇ ಬೆಳೆ ಬೆಳೆದರೂ ಅಧಿಕ ಇಳುವರಿ ಪಡೆಯುವ ಮೂಲಕ ಕೃಷಿ ತಜ್ಞರೂ ಹುಬ್ಬೇರಿಸುವಂತೆ ಮಾಡಿದ್ದಾರೆ.
ಜೂನ್ ತಿಂಗಳಲ್ಲಿ ಮೊದಲ ಬಾರಿಗೆ ಮಳೆಯಾಶ್ರಿತವಾಗಿ ಈರುಳ್ಳಿ ಬಿತ್ತನೆ ಮಾಡಿದ ಶಿವಕುಮಾರ್ ಎರಡೂವರೆ ಎಕರೆಯಲ್ಲಿ 550 ಚೀಲ ಉತ್ಪಾದನೆ ಮಾಡಿದ್ದರು. ಆಗ ಉತ್ತಮ ಬೆಲೆ ಸಿಕ್ಕಿದ್ದರಿಂದ ₨ 11 ಲಕ್ಷ ಲಾಭ ಪಡೆದಿದ್ದರು. ಸೆಪ್ಟೆಂಬರ್ ತಿಂಗಳಲ್ಲಿ ಬೆಳೆ ಕಟಾವು ಮಾಡಿದ ನಂತರ ಮತ್ತೆ ಕೇವಲ 15 ದಿನಗಳ ಬಿಡುವಿನ ನಂತರ ಅಕ್ಟೋಬರ್‌ನಲ್ಲಿ ಇದೇ ಹೊಲದಲ್ಲಿ ನೀರಾವರಿಯಲ್ಲಿ ಈರುಳ್ಳಿ ಬಿತ್ತನೆ ಮಾಡಿದರು. ಈಗಲೂ 510 ಚೀಲ ಈರುಳ್ಳಿ ಬಂದಿದ್ದು, ಬೆಲೆ ಇಳಿಕೆಯಾಗಿದೆ ಎಂದು ಹಾಗೆಯೇ ಸಂಗ್ರಹಿಸಿಟ್ಟಿದ್ದಾರೆ.
‘ಒಂದೇ ಹೊಲದಲ್ಲಿ ವರ್ಷಕ್ಕೆ ಎರಡು ಬಾರಿ ಒಂದೇ ಬೆಳೆ ಬೆಳೆದರೆ ಇಳುವರಿ ಬರುವುದಿಲ್ಲ ಎಂದು ಕೃಷಿ ತಜ್ಞರು ಸಲಹೆ ಕೊಡುತ್ತಾರೆ. ಆದರೂ ಪ್ರಯೋಗವೆಂಬಂತೆ ಬೆಳೆ ಬೆಳೆಯಲು ಮುಂದಾದೆ. ಎರಡು ಬಾರಿಯೂ ಉತ್ತಮ ಇಳುವರಿ ಪಡೆದಿದ್ದು, ಆತ್ಮವಿಶ್ವಾಸ ಹೆಚ್ಚಿದೆ. ಹೊಲಕ್ಕೆ ಭೇಟಿ ನೀಡಿದ್ದ ಬಬ್ಬೂರು ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿ ಓಂಕಾರಪ್ಪ ಕೂಡ ಇಳುವರಿ ಕಂಡು ಅಚ್ಚರಿ ವ್ಯಕ್ತಪಡಿಸಿದರು’ ಎನ್ನುತ್ತಾರೆ ಯುವ ರೈತ ಶಿವಕುಮಾರ್.
ಬೀಜೋತ್ಪಾದನೆ: ಏಳು ವರ್ಷಗಳಿಂದ ಶಿವಕುಮಾರ್ ಈರುಳ್ಳಿ ಬೀಜೋತ್ಪಾದನೆಯಲ್ಲೂ ತೊಡ ಗಿದ್ದಾರೆ. ಮುಕ್ಕಾಲು ಎಕರೆ ಪ್ರದೇಶದಲ್ಲಿ ಬೀಜ ಉತ್ಪಾದನೆ ಮಾಡುತ್ತಿದ್ದು, ಪ್ರತೀ ವರ್ಷ ತಮಗೆ ಅಗತ್ಯವಾಗುವಷ್ಟು ಬೀಜಗಳನ್ನು ಉತ್ಪಾದನೆ ಮಾಡಿಕೊಳ್ಳುತ್ತಾರೆ. ಅಲ್ಲದೆ ಸುಮಾರು 70 ರಿಂದ 80 ಚೀಲ ಬೀಜಗಳನ್ನು ಸ್ಥಳೀಯ ರೈತರಿಗೆ ಮಾರಾಟ ಮಾಡುತ್ತಾರೆ.
‘ಹಿಂದೆ ನಾವು ಬೇರೆ ಕಡೆಯಿಂದ ಈರುಳ್ಳಿ ಬೀಜ ತರುತ್ತಿದ್ದೆವು. ಆಗ ಕಳಪೆ ಬೀಜ ಪಡೆದು ಮೋಸ ಹೋಗುತ್ತಿದ್ದುದೇ ಹೆಚ್ಚು. ಇದರಿಂದ ಬೇಸತ್ತು ನಾನೇ ಬೀಜ ಉತ್ಪಾದನೆಗೆ ಮುಂದಾದೆ. ದೇಸಿ ಶೈಲಿಯ ಈರುಳ್ಳಿ ಬೀಜಗಳನ್ನು ಉತ್ಪಾದನೆ ಮಾಡುತ್ತಿದ್ದು, ಉತ್ತಮ ಇಳುವರಿ ಬರುತ್ತಿದೆ. ಬೇರೆ ಕಡೆ ಖರೀದಿ ಮಾಡುವುದಕ್ಕಿಂತ ಕಡಿಮೆ ಖರ್ಚಿನಲ್ಲಿ ಬೀಜ ಸಿಗುತ್ತದೆ. ಮಾರುಕಟ್ಟೆಯಲ್ಲೂ ನಮ್ಮ ತಳಿಗೆ ಉತ್ತಮ ಬೇಡಿಕೆ ಇದೆ’ ಎನ್ನುತ್ತಾರೆ ಶಿವಕುಮಾರ್.
‘ತಂದೆ ಎ.ಎಸ್.ಪರಮೇಶ್ವರಪ್ಪ ಮೂಲತ: ರೈತರು. ನಾನು ಬಿ.ಎಸ್ಸಿ ಪದವಿ ಪಡೆದರೂ ಕೃಷಿಯಲ್ಲಿ ಏನಾದರೂ ಒಂದು ಸಾಧನೆ ಮಾಡಬೇಕು ಎಂದು ಈ ಕ್ಷೇತ್ರಕ್ಕೆ ಬಂದಿದ್ದೇನೆ. 6.5 ಎಕರೆಯಲ್ಲಿ ಅಡಿಕೆ ತೋಟ ಮಾಡಿದ್ದು, ಮಿಶ್ರಬೆಳೆಯಾಗಿ ಬಾಳೆ ಬೆಳೆದು ಉತ್ತಮ ಇಳುವರಿ ಪಡೆಯುತ್ತಿದ್ದೇನೆ. ಶ್ರದ್ಧೆಯಿಂದ ಕೆಲಸ ಮಾಡಿದರೆ ಯಾವ ಕ್ಷೇತ್ರದಲ್ಲಾದರೂ ಉಶಸ್ಸು ಗಳಿಸಬಹುದು. ಪದವಿ ಪಡೆದ ತಕ್ಷಣ ನಗರಗಳಲ್ಲೇ ಕೆಲಸ ಮಾಡಬೇಕು ಎಂಬ ಭ್ರಮೆಯಿಂದ ನಮ್ಮ ಯುವಕರು ಹೊರಬರಬೇಕು’ ಎನ್ನುವುದು ರೈತ ಶಿವಕುಮಾರ್ ಅವರ
ಅನುಭವದ ಮಾತು. ಶಿವಕುಮಾರ್ ಅವರನ್ನು ಸಂಪರ್ಕಿಸಲು ಮೊಬೈಲ್ 99458 03056 ಕರೆ ಮಾಡಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.