ADVERTISEMENT

‘ಬಿಸಿಲಿನ ತಾಪ, ಚುನಾವಣೆ ಒತ್ತಡ ಅನಾರೋಗ್ಯಕ್ಕೆ ಕಾರಣ’

​ಪ್ರಜಾವಾಣಿ ವಾರ್ತೆ
Published 7 ಮೇ 2018, 9:09 IST
Last Updated 7 ಮೇ 2018, 9:09 IST

ಚಿತ್ರದುರ್ಗ: ‘ಬಿಸಿಲಿನ ತಾಪ, ಎರಡು ಗಂಟೆ ಸತತ ಬಿಸಿಲಿನಲ್ಲಿ ರೋಡ್ ಷೋ ಮಾಡಿದ್ದು, ತಿಂಗಳಿನಿಂದ ವಿಶ್ರಾಂತಿಯಿಲ್ಲದೇ ಓಡಾಡಿದ್ದರಿಂದ ಆರೋಗ್ಯದಲ್ಲಿ ಏರುಪೇರಾಗಿ, ಅಸ್ವಸ್ಥನಾದೆ. ಈಗ ಆರೋಗ್ಯವಾಗಿದ್ದೇನೆ. ವೈದ್ಯರು ಪ್ರಚಾರಕ್ಕೆ ಹೋಗಬಹುದು ಎಂದು ಸಲಹೆ ನೀಡಿದ್ದಾರೆ ’ ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಸ್ಪಷ್ಟಪಡಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನನ್ನ ಆರೋಗ್ಯದ ಬಗ್ಗೆ ಕೆಲವು ಮಾಧ್ಯಮಗಳಲ್ಲಿ ವಿವಿಧ ರೀತಿಯ ಸುದ್ದಿಗಳು ಪ್ರಕಟವಾಗಿದ್ದವು. ಹಾಗೆ ಏನೂ ಇಲ್ಲ. ಮಧುಮೇಹವಿದ್ದವರಿಗೆ ಆರೋಗ್ಯದಲ್ಲಿ ಆಗಾಗ ಏರುಪೇರಾಗುತ್ತದೆ. ಸ್ವಲ್ಪ ವಿಶ್ರಾಂತಿ ಪಡೆದರೆ ಸರಿ ಹೋಗುತ್ತದೆ. ವೈದ್ಯರು ಕೂಡ ಅದನ್ನೇ ಹೇಳಿದ್ದಾರೆ’ ಎಂದು ತಿಳಿಸಿದರು.

‘ಕ್ಷೇತ್ರಕ್ಕೆ ಭೇಟಿ ನೀಡಿದಾಗ, ಯಾರೋ ಒಬ್ಬರು ನೀರಿಲ್ಲ, ಈಗಲೇ ಪೈಪ್‌ಲೈನ್ ಹಾಕಿಸಿ ನೀರು ಕೊಡಿ ಎಂದು ಬೇಡಿಕೆ ಇಡುತ್ತಾರೆ. ತುಸು ಏರು ದನಿಯಲ್ಲಿ ಕೇಳಿ, ಒಬ್ಬರೋ ಇಬ್ಬರೋ ದೊಡ್ಡದಾಗಿ ಮಾತನಾಡಿದ ಕೂಡಲೇ ಮೊಬೈಲ್‌ಗಳಲ್ಲಿ ವಿಡಿಯೊ ಆಗಿ ವೈರಲ್ ಆಗುತ್ತದೆ. ಆಗ ಆಂಜನೇಯನಿಗೆ ವಿರೋಧ, ಪ್ರತಿಭಟನೆ ಎಂದೆಲ್ಲ ಸುದ್ದಿಯಾಗುತ್ತದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.