ADVERTISEMENT

ಬೆಂಬಲಿಗರ ವಿರುದ್ಧ ಕ್ರಮ ಕೈಗೊಂಡರೆ ಸರ್ಕಾರ ಪತನ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2012, 5:47 IST
Last Updated 5 ಡಿಸೆಂಬರ್ 2012, 5:47 IST

ಚಿತ್ರದುರ್ಗ: ತಮ್ಮ ಬೆಂಬಲಿಗ ಶಾಸಕರು, ಸಚಿವರು, ನಿಗಮ, ಮಂಡಳಿಗಳ ಅಧ್ಯಕ್ಷರ ವಿರುದ್ಧ ಕ್ರಮ ಕೈಗೊಂಡರೆ 24 ಗಂಟೆಯಲ್ಲಿ ಬಿಜೆಪಿ ಸರ್ಕಾರ ಉರುಳುತ್ತದೆಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಿಜೆಪಿ ವರಿಷ್ಠರಿಗೆ ಎಚ್ಚರಿಕೆ ನೀಡಿದರು.

ಹೊಳಲ್ಕೆರೆಯಲ್ಲಿ ಮಂಗಳವಾರ ಬಿಜೆಪಿ ಶಾಸಕ ಚಂದ್ರಪ್ಪ ಆಯೋಜಿಸಿದ್ದ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಸಾರ್ವಜನಿಕ ಸಮಾವೇಶದಲ್ಲಿ ಅವರು ಮಾತನಾಡಿದರು.

ತಮ್ಮ ಭಾಷಣದುದ್ದಕ್ಕೂ ಭಾವಾವೇಷದಿಂದ ಗದ್ಗದಿತರಾಗಿ ಮಾತನಾಡಿದ ಯಡಿಯೂರಪ್ಪ,  ಗೌರವದಿಂದ ಇನ್ನೂ ಮೂರು ತಿಂಗಳು ಆಡಳಿತ ನಡೆಸಬೇಕು. ಒಂದು ವೇಳೆ ಬೆಂಬಲಿಗರ ವಿರುದ್ಧ ಕ್ರಮ ಕೈಗೊಂಡರೆ ತಲೆಮೇಲೆ ಕಲ್ಲು ಹಾಕಿಕೊಂಡಂತಾಗುತ್ತದೆ. ಧೈರ್ಯ ಇದ್ದರೆ ಇಂದೇ ಕ್ರಮಕೈಗೊಳ್ಳಿ. ವಿಧಾನ ಸಭೆ ಅಧಿವೇಶನವೂ ನಡೆಯುವುದಿಲ್ಲ. ನನ್ನ ಜತೆ 50-60 ಶಾಸಕರು ಇರುವುದು ಸುಳ್ಳೇನು? ನನ್ನ ಜತೆ ಯಾರಿದ್ದಾರೆ ಎನ್ನುವುದು ಎಲ್ಲರಿಗೂ ಬಹಿರಂಗವಾಗಿ ಗೊತ್ತಿದೆ ಎಂದು ನುಡಿದರು.

ಸಮಾವೇಶದಲ್ಲೂ ಸಚಿವರಾದ ಬಿ.ಜೆ. ಪುಟ್ಟಸ್ವಾಮಿ, ರೇಣುಕಾಚಾರ್ಯ, ಶಾಸಕರಾದ ಚಂದ್ರಪ್ಪ, ಹರೀಶ್, ಮಾಡಾಳ್ ವಿರೂಪಾಕ್ಷಪ್ಪ ಪಾಲ್ಗೊಂಡಿದ್ದಾರೆ. ಅದೇನು ಕ್ರಮ ಕೈಗೊಳ್ಳುತ್ತಾರೆ ನೋಡೋಣ. ಇದೇ ರೀತಿ ಹಾವೇರಿ ಸಮಾವೇಶಕ್ಕೂ ಶಾಸಕರು, ಸಚಿವರು ಬರಬಹುದು. ಅವರಿಗೆ ಬರುವುದು ಬೇಡ ಎಂದು ತಿಳಿಸಿದ್ದೇನೆ. ಬಂದರೆ ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.

ನಮ್ಮ ಶಾಸಕರ ಮೇಲೆ ಕ್ರಮ ಬೇಡ ಎಂದು ಹೇಳುತ್ತಿದ್ದೇನೆ. ಆದರೆ, ನಮ್ಮವರನ್ನು ಉಳಿಸಿಕೊಳ್ಳಿ ಎಂದು ಕೈಮುಗಿದು ಕೇಳಿಕೊಳ್ಳುತ್ತಿಲ್ಲ. ಕ್ರಮಕೈಗೊಂಡರೆ ತಕ್ಕಶಾಸ್ತಿ ಎದುರಿಸಬೇಕಾಗುತ್ತದೆ. ಸಚಿವ ರೇಣುಕಾಚಾರ್ಯ ಸೇರಿದಂತೆ ಹಲವರು ಈಗಲೇ ರಾಜೀನಾಮೆ ನೀಡಲು ಸಿದ್ಧರಾಗಿದ್ದಾರೆ. ನಾನು ಅವರನ್ನು ತಡೆದಿದ್ದೇನೆ. ನಾವೇಕೆ ರಾಜೀನಾಮೆ ನೀಡಬೇಕು. ಬೇಕಿದ್ದರೆ ಕ್ರಮಕೈಗೊಳ್ಳಲಿ. ನಮ್ಮ ಶಾಸಕರಿಗೆ ಕಿರುಕುಳ ಬೇಡ. ಎಲ್ಲ 224 ಶಾಸಕರು ಒಂದೇ. ತಾರತಮ್ಯವಾದರೆ ಧರಣಿ ಮಾಡಲು ಹಿಂಜರಿಯುವುದಿಲ್ಲ ಎಂದು ನುಡಿದರು.

ಭಾಗ್ಯಲಕ್ಷ್ಮೀ ಯೋಜನೆ ಈಗ ಮಂದಗತಿಯಲ್ಲಿ ಸಾಗಿದೆ. ಅಂಗವಿಕಲರಿಗೆ, ವಿಧವೆಯರಿಗೆ ಮಾಸಾಶನ ನೀಡುತ್ತಿಲ್ಲ. ಹಾಲು ಉತ್ಪಾದಕರಿಗೆರೂ. 2 ಪ್ರೋತ್ಸಾಹಧನ ನೀಡಿಲ್ಲ. ಮದುವೆಯಾಗದ ಹೆಣ್ಣು ಮಕ್ಕಳಿಗೆ ಒಂದು ಸಾವಿರ ರೂಪಾಯಿ ನೀಡುವ ಯೋಜನೆಯನ್ನು ನಾನು ಮುಖ್ಯಮಂತ್ರಿಯಾಗಿದ್ದಾಗ ಘೋಷಿಸಿದ್ದೆ. ಆದರೆ, ನನ್ನ ನಂತರ ಬಂದವರು ಜಾರಿಗೊಳಿಸಲಿಲ್ಲ. ಬೆಳಗಾವಿ ಅಧಿವೇಶನದಲ್ಲಿ ಈ ಎಲ್ಲ ಯೋಜನೆಗಳಿಗೆ ಚಾಲನೆ ದೊರೆಯಬೇಕು. ಇಲ್ಲದಿದ್ದರೆ ಬಿಜೆಪಿ ಸರ್ಕಾರ ವಿರುದ್ಧ ಧರಣಿ ನಡೆಸುತ್ತೇನೆ ಎಂದು ಗುಡುಗಿದರು.

ನಿಮ್ಮ ಹಂಗಿನ ಅರಮನೆ ಬೇಡ ಎಂದು ಬಿಟ್ಟು ಬಂದಿದ್ದೇನೆ. ನಿಮ್ಮನ್ನು ತಿರುಗಿ ನೋಡಲ್ಲ. ಸಂಬಂಧ ಮುಗಿದಿದೆ. ಯಾರೋ ಒಬ್ಬ ಲೋಕಾಯುಕ್ತ ನೀಡಿದ ವರದಿಯನ್ನು ಕುಂಟು ನೆಪ ಮಾಡಿಕೊಂಡು ಮುಖ್ಯಮಂತ್ರಿ ಸ್ಥಾನದಿಂದ ನನ್ನನ್ನು ಇಳಿಸಿದರು. ಹೈಕಮಾಂಡ್ ವಾಸ್ತವ ಸ್ಥಿತಿ ಅರಿಯಲಿಲ್ಲ. ದೊಡ್ಡವರ ಸಣ್ಣತನದಿಂದ ಬೇಸತ್ತಿದ್ದೇನೆ. ಜನಸಾಮಾನ್ಯರ ದೊಡ್ಡತನದಿಂದ ಪ್ರಾದೇಶಿಕ ಪಕ್ಷ ಕಟ್ಟುತ್ತಿದ್ದೇನೆ. 224 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿ ಬಹುಮತ ಪಡೆಯುತ್ತೇನೆ. ಹೈಕಮಾಂಡ್ ಕಪಿಮುಷ್ಟಿಯಲ್ಲಿ ಸಿಲುಕುವ ಸಂಸ್ಕೃತಿ ನಮಗೆ ಬೇಕಾಗಿಲ್ಲ. ಕಾವೇರಿ ಸೇರಿದಂತೆ ಎಲ್ಲ ವಿಷಯಗಳಲ್ಲಿ ರಾಜ್ಯದ ಜತೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ.

ಕರ್ನಾಟಕದಲ್ಲೂ ಪ್ರಾದೇಶಿಕ ಪಕ್ಷವಿದ್ದರೆ ಪ್ರಧಾನಿ ನಮ್ಮನ್ನು ಹುಡುಕಿಕೊಂಡು ಬರುತ್ತಿದ್ದರು. ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ, ಹೈದರಾಬಾದ್-ಕರ್ನಾಟಕಕ್ಕೆ ವಿಶೇಷ ಸ್ಥಾನಮಾನಕ್ಕೆ ನಾವು ಭಿಕ್ಷೆ ಬೇಡಬೇಕೆ? ರಾಜ್ಯದ ಕೇಂದ್ರ ಸಚಿವರು ಕತ್ತೆ ಕಾಯುತ್ತಿದ್ದಾರೆಯೇ? ಅಲ್ಲೇನು `ಮಷ್ಕಿರಿ' ಮಾಡಲು ಹೋಗಿದ್ದಾರೆಯೇ? ಇವೆಲ್ಲವನ್ನೂ ನೋಡಿದರೆ ಪ್ರಾದೇಶಿಕ ಪಕ್ಷದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.