ADVERTISEMENT

ಬೆಳೆನಷ್ಟ:ಪರಿಹಾರಕ್ಕೆ ರೈತರ ಮನವಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2011, 6:20 IST
Last Updated 8 ಫೆಬ್ರುವರಿ 2011, 6:20 IST

ಚಿತ್ರದುರ್ಗ: ತಾಲ್ಲೂಕಿನ ಜಿ.ಆರ್. ಹಳ್ಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಳ್ಳ ಹರಿಯುವ ದಿಕ್ಕನ್ನು ಗಣಿಗಾರಿಕೆ ಕಂಪೆನಿಗಳು ಬದಲಾಯಿಸಿದ ಕಾರಣ ಅತಿವೃಷ್ಟಿ ಉಂಟಾಗಿ ರೈತರ ಬೆಳೆ ನಷ್ಟವಾಗಿದ್ದು, ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ರಾಷ್ಟ್ರೀಯ ಕಿಸಾನ್ ಸಂಘ ರಾಜ್ಯ ಘಟಕದಿಂದ ಸೋಮವಾರ ಹೆಚ್ಚುವರಿ ಜಿಲ್ಲಾಧಿಕಾರಿ ನಿರ್ವಾಣಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು. 

ಗಣಿಗಾರಿಕೆಗೆ ಅನುಕೂಲವಾಗಲು ಮೂರ್ನಾಲ್ಕು ಗಣಿಗಾರಿಕೆ ಕಂಪೆನಿಗಳು   ನೀರು ಹರಿಯುತ್ತಿದ್ದ ಹಳ್ಳಗಳ ದಾರಿಗಳನ್ನು ಬದಲಾಯಿದ್ದಾರೆ. ಕಳೆದ ವರ್ಷ ಸುರಿದ ಮಳೆಗೆ ನೀರಿನ ಹಳ್ಳ ಮಾಡನಾಯ್ಕನಹಳ್ಳಿ, ಆಯಿತೋಳು, ರಾಯನಹಳ್ಳಿಯ ಗ್ರಾಮದ ರೈತರ ಜಮೀನಿಗೆ ಹಾಗೂ ಬೆಳೆಗಳಿಗೆ ನಷ್ಟವಾಗಿದೆ ಎಂದು ಕಿಸಾನ್ ಸಂಘ ತಿಳಿಸಿದೆ.

ಜಮೀನುಗಳಲ್ಲಿ ನೀರು ನಿಂತಿದ್ದರಿಂದ ಮೆಕ್ಕೆಜೋಳ ಹಾಗೂ ಶೇಂಗಾ ಬೆಳೆ ಸಂಪೂರ್ಣ ಹಾಳಾಗಿದ್ದು, ರೈತರ ಬದುಕು ಅತಂತ್ರವಾಗಿದೆ. ನಷ್ಟಕ್ಕೆ ಕಾರಣರಾದ ಗಣಿಗಾರಿಕೆ ಕಂಪೆನಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಚಿತ್ರ ಸಮೇತ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿತ್ತು ಎಂದು ಸಂಘ ತಿಳಿಸಿದೆ.

ಜಮೀನಿನಲ್ಲಿ ಸಂಗ್ರಹವಾದ ನೀರು ಹೊರಹಾಕಲು ಕ್ರಮ ಕೈಗೊಳ್ಳಬೇಕು, ಹಾಲಿ ನಷ್ಟವಾಗಿರುವ ರೈತರಿಗೆ ಪರಿಹಾರ ನೀಡಬೇಕು ಎಂದು ಕಿಸಾನ್ ಸಂಘ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಕೊಂಚೆ ಶಿವರುದ್ರಪ್ಪ, ಡಿ.ಎಂ. ನಂಜುಂಡೇಶ್, ವಿ.ಎಚ್. ಶೇಷಣ್ಣರೆಡ್ಡಿ, ಎನ್. ರಾಮರೆಡ್ಡಿ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.