ADVERTISEMENT

ಬ್ರಹ್ಮರಾಕ್ಷಸನಂತೆ ರೈತರ ಬದುಕಿನ ಮೇಲೆ ಎರಗಿದ ಜಾಗತೀಕರಣ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 8:54 IST
Last Updated 4 ಏಪ್ರಿಲ್ 2013, 8:54 IST

ಹಿರಿಯೂರು: ರೈತರ ಬದುಕಿನಲ್ಲಿ ಬೆಳಕನ್ನು ಮೂಡಿಸುತ್ತದೆ ಎಂದು ನಮ್ಮ ಜನಪ್ರತಿನಿಧಿಗಳು ಹೇಳಿದ್ದ ಜಾಗತೀಕರಣ ಬ್ರಹ್ಮರಾಕ್ಷಸನಂತೆ ರೈತನ ಬದುಕನ್ನು ನುಂಗುತ್ತಾ ಬಂದಿದೆ ಎಂದು ಪ್ರಗತಿಪರ ರೈತ ಆರನಕಟ್ಟೆ ಶಿವಕುಮಾರ್ ವಿಷಾದ ವ್ಯಕ್ತಪಡಿಸಿದರು.ನಗರದ ನೆಹರು ಮೈದಾನದಲ್ಲಿ ಭಾನುವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ತಾಲ್ಲೂಕುಮಟ್ಟದ ತೃತೀಯ ಸಾಹಿತ್ಯ ಸಮ್ಮೇಳನದಲ್ಲಿ `ಜಾಗತೀಕರಣ ಮತ್ತು ರೈತ ಸಮಸ್ಯೆಗಳು' ಕುರಿತ ವಿಚಾರ ಗೋಷ್ಠಿಯಲ್ಲಿ ಅವರು ಮಾತನಾಡಿದರು.

1993ರಲ್ಲಿ ಅಂದಿನ ಅರ್ಥ ಸಚಿವರು ದೇಸೀಯ ಅರ್ಥ ವ್ಯವಸ್ಥೆ ಸುಧಾರಿಸಬೇಕೆಂದರೆ ವಿದೇಸೀ ಅರ್ಥವ್ಯವಸ್ಥೆ ಅಳವಡಿಸಿಕೊಳ್ಳುವುದು ಅನಿವಾರ್ಯ. ಇಲ್ಲವಾದಲ್ಲಿ ದೇಶದಲ್ಲಿ ಆರ್ಥಿಕ ಕುಸಿತ ಉಂಟಾಗುತ್ತದೆ ಎಂದು ಸಂಸತ್‌ನಲ್ಲಿ ಡಂಕಲ್ ಪ್ರಸ್ತಾವಕ್ಕೆ ಗ್ಯಾಟ್ ಒಪ್ಪಂದಕ್ಕೆ ಒಪ್ಪಿಗೆ ಪಡೆದಿದ್ದರು. ಇದಾದ 20 ವರ್ಷದ ನಂತರ ಅದೇ ಪಕ್ಷದ ಅರ್ಥ ಸಚಿವರು ಸಂಸತ್‌ನಲ್ಲಿ ಭಾಷಣ ಮಾಡುತ್ತ, 250 ದಶಲಕ್ಷಟನ್ ಆಹಾರ, 190 ದಶಲಕ್ಷ ಟನ್ ಸಕ್ಕರೆ, 300 ದಶಲಕ್ಷ ಟನ್ ತರಕಾರಿ ಉತ್ಪಾದನೆ ಮಾಡಿರುವ ರೈತರಿಗೆ ಅಭಿನಂದನೆ ಸಲ್ಲಿಸಿದರು. ಹಾಗಾದರೆ ಈ ಪ್ರಮಾಣದಲ್ಲಿ ಉತ್ಪಾದನೆ ಆದರೂ ರೈತರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು? ಹೆಚ್ಚು ಉತ್ಪಾದನೆ ಮಾಡಿದ್ದರ ಲಾಭ ರೈತನಿಗೆ ಸಿಗಬೇಕಿತ್ತಲ್ಲವೆ? ಅರ್ಥ ಸಚಿವರ ಮಾತಿನಲ್ಲಿ ಸತ್ಯಾಂಶ ಇಲ್ಲ ಎನಿಸುವುದಿಲ್ಲವೆ? ಎಂದು ಪ್ರಶ್ನೆ ಮಾಡಿದರು.

ನಮ್ಮ ಹಿರಿಯರಿಗೆ ಒಕ್ಕಲುತನ ಕಸುಬಾಗಿರದೆ, ಸಂಸ್ಕೃತಿ ಆಗಿತ್ತು. ಸೋಮಾರಿತನ ಅವರಿಗೆ ತಿಳಿದಿರಲಿಲ್ಲ. ಶ್ರಮ ಸಂಸ್ಕೃತಿ ಮೂಲಕ ಕೂಡಿ ಬಾಳುವುದು, ಹಂಚಿ ತಿನ್ನುವುದನ್ನು ಅಭ್ಯಾಸ ಮಾಡಿಕೊಂಡಿದ್ದರು. ಹಾಡುತ್ತಾ, ನರ್ತಿಸುತ್ತಾ ಕೃಷಿ ಕೆಲಸ ಮಾಡುತ್ತಿದ್ದರು. ಮನೆಯ ಜಾನುವಾರು, ಭೂಮಿ, ಕೆರೆ, ಕಟ್ಟೆ, ಕಾಲುವೆ, ಗೋಮಾಳ, ಅರಣ್ಯವನ್ನು ತಮ್ಮ ಜೀವ ಎಂದು ಭಾವಿಸಿದ್ದರು. ತಿಪ್ಪೆ ಗೊಬ್ಬರ, ಮನೆಯ ಬೀಜ ಬಳಸಿ ಕಡಿಮೆ ಖರ್ಚಿನಲ್ಲಿ, ಕೇವಲ ಒಂದೆರಡು ಮಳೆ ಬಂದರೆ ಬೆಳೆ ಕೈಗೆ ಬರುತ್ತಿತ್ತು. ಬಂಡವಾಳದ ಹಂಗು ಇಲ್ಲದೆ ಸ್ವಾವಲಂಬಿಗಳಾಗಿ ಬದುಕು ನಡೆಸುತ್ತಿದ್ದರು ಎಂದು ಶಿವಕುಮಾರ್ ತಿಳಿಸಿದರು.

ಜಾಗತೀಕರಣದ ನಂತರ ಹೆಚ್ಚು ಬೆಳೆಯುವ ಹುಮ್ಮಸ್ಸಿನಲ್ಲಿ ಬಹುರೂಪಿ ಕೃಷಿ ಬದಲು ವಾಣಿಜ್ಯ ಬೆಳೆಗೆ ರೈತ ಮಾರುಹೋದ. ಮೊದಲ ಕೆಲವು ವರ್ಷ ಉತ್ತಮ ಬೆಳೆಯೂ ಬಂದಿತು. ಬೆಳೆಗೆ ರಾಸಾಯನಿಕ ಬಳಸಿದ್ದರಿಂದ ರೋಗ ಕಾಡತೊಡಗಿತು ಎಂದು ಅವರು ವಿಶ್ಲೇಷಿಸಿದರು. ಸಾಹಿತಿ ಯಳನಾಡು ಅಂಜನಪ್ಪ, ತಾಲ್ಲೂಕು ರೈತ ಸಂಘದ ಅಧ್ಯಕ್ಷ ಎ. ಕೃಷ್ಣಸ್ವಾಮಿ, ಕೆ.ಸಿ. ಹೊರಕೇರಪ್ಪ, ಸಿ. ಸಿದ್ದರಾಮಣ್ಣ ಮಾತನಾಡಿದರು. ಸಮ್ಮೇಳನಾಧ್ಯಕ್ಷ ಮಾರೇನಹಳ್ಳಿ ಭೀಮಯ್ಯ, ಜಿ. ಧನಂಜಯಕುಮಾರ್ ಹಾಜರಿದ್ದರು. ಚಮನ್‌ಷರೀಫ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT