ADVERTISEMENT

ಭೂಮಿ ನೀಡುವವರಿಗೆ ಮಾತ್ರ ಮತ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2013, 10:38 IST
Last Updated 24 ಏಪ್ರಿಲ್ 2013, 10:38 IST

ಚಿತ್ರದುರ್ಗ: ದಲಿತರು, ಆದಿವಾಸಿಗಳು ಹಾಗೂ ಅಲ್ಪಸಂಖ್ಯಾತರ ಜೀವನೋಪಾಯಕ್ಕಾಗಿ ಪ್ರತಿ ಕುಟುಂಬಗಳಿಗೆ ಕನಿಷ್ಠ 5 ಎಕರೆ ಭೂಮಿ ನೀಡುವಂತ ಪಕ್ಷಗಳಿಗೆ ಮಾತ್ರ ದಲಿತರು ಮತ ನೀಡಬೇಕು ಎಂದು ಭೂ ಶಕ್ತಿ ವೇದಿಕೆ ಜಿಲ್ಲಾ ಘಟಕದ ಸಂಯೋಜಕ ಎನ್. ಪ್ರಕಾಶ್ ಕರೆ ನೀಡಿದರು.

ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಂದಾಯ ಇಲಾಖೆಯು ಅರಣ್ಯ ಇಲಾಖೆಗೆ ನೀಡಿರುವ ಭೂ ಪ್ರದೇಶ ಸೇರಿದಂತೆ ಸರ್ಕಾರಿ ಗೋಮಾಳ ಪ್ರದೇಶಗಳಲ್ಲಿ ಭೂಮಿ ರಹಿತ ದಲಿತರಿಗೆ ಭೂಮಿಯನ್ನು ಹಂಚಿಕೆ ಮಾಡಬೇಕು ಎಂದರು.  

ದಲಿತ ಸಮುದಾಯವನ್ನು ಇದುವರೆಗೂ ಮತ ಬ್ಯಾಂಕ್ ಆಗಿ ಎಲ್ಲ ಪಕ್ಷಗಳು ಬಳಸಿಕೊಂಡಿವೆ. ಆದ್ದರಿಂದ ಈ ಚುನಾವಣೆಯಲ್ಲಿ ಯಾವುದೇ ಪಕ್ಷದ ಅಭ್ಯರ್ಥಿಗಳ ಆಮಿಷಗಳಿಗೆ ಬಲಿಯಾಗದೆ ದಲಿತ ಕುಟುಂಬಗಳಿಗೆ 5 ಎಕರೆ ಭೂಮಿ ಹಂಚಿಕೆ ಮಾಡುವುದಾಗಿ ಭರವಸೆ ನೀಡುವಂತ ಪಕ್ಷಗಳ ಅಭ್ಯರ್ಥಿಗೆ ಮಾತ್ರ ಮತ ನೀಡಬೇಕು ಎಂದು ಕರೆ ನೀಡಿದರು.

ವೇದಿಕೆಯ ಮುಖಂಡ ಭೀಮನಕೆರೆ ಶಿವಮೂರ್ತಿ ಮಾತನಾಡಿ, ಕಾಂಗ್ರೆಸ್‌ನಲ್ಲಿರುವ ದಲಿತ ಸಮುದಾಯದ ಕೆಲ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ದಲಿತ ಸಂಘಟನೆಗಳ ಹೆಸರನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ಸನ್ನು ಮಾತ್ರ ಬೆಂಬಲಿಸುವಂತೆ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ನಮ್ಮ ಮಕ್ಕಳಿಗೆ ಉತ್ತಮ ಭವಿಷ್ಯ ಕಟ್ಟಬೇಕಾದರೆ ನಾವು ಯಾವುದೇ ಪಕ್ಷದವರೇ ಆಗಲಿ ಹಣ ಹಾಗೂ ಮದ್ಯ ಹಂಚದ ಸಜ್ಜನರಿಗೆ ಮಾತ್ರ ಮತ ನೀಡಬೇಕು ಎಂದು ಮನವಿ ಮಾಡಿದರು.

ಭೂಮಿ ಶಕ್ತಿ ವೇದಿಕೆ ಮಹಿಳಾ ಘಟಕದ ಜಿಲ್ಲಾ ಸಂಯೋಜಕಿ ಸಿ. ಚೌಡಮ್ಮ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.