ADVERTISEMENT

ಭೂ ಮರುಮಾಪನಕ್ಕೆ ಆಧುನಿಕ ತಂತ್ರಜ್ಞಾನದ ಸ್ಪರ್ಶ

ತಾಲ್ಲೂಕಿನ ಜಗದಳ್ಳಿಪುರ ಗ್ರಾಮದಿಂದ ಸರ್ವೇ ಆರಂಭ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2013, 7:17 IST
Last Updated 20 ಡಿಸೆಂಬರ್ 2013, 7:17 IST
ಚಿತ್ರದುರ್ಗ ತಾಲ್ಲೂಕು ಜಗದಳ್ಳಿಪುರ ಬೇಚಾರ ಗ್ರಾಮ ವ್ಯಾಪ್ತಿಯ ನಾಯಕರ ಸೊಲ್ಲಾಪುರದಲ್ಲಿ ಆರಂಭವಾದ ಮರು  ಭೂಮಾಪನ ಪ್ರಕ್ರಿಯೆಗೆ ಬಳಸುವ ಆಧುನಿಕ ಯಂತ್ರವನ್ನು ಉಪವಿಭಾಗಾಧಿಕಾರಿ ಎನ್.ತಿಪ್ಪೇಸ್ವಾಮಿ ಉದ್ಘಾಟಿಸಿದರು. ತಹಶೀಲ್ದಾರ್ ಕಾಂತರಾಜ್, ಎ.ಡಿ.ಎಲ್.ಆರ್.ಭಾವನಾ, ಜಾನುಕೊಂಡ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಪತಿಯಪ್ಪ ಹಾಗೂ ವಿವಿಧ ಮುಖಂಡರು ಉಪಸ್ಥಿತರಿದ್ದರು.
ಚಿತ್ರದುರ್ಗ ತಾಲ್ಲೂಕು ಜಗದಳ್ಳಿಪುರ ಬೇಚಾರ ಗ್ರಾಮ ವ್ಯಾಪ್ತಿಯ ನಾಯಕರ ಸೊಲ್ಲಾಪುರದಲ್ಲಿ ಆರಂಭವಾದ ಮರು ಭೂಮಾಪನ ಪ್ರಕ್ರಿಯೆಗೆ ಬಳಸುವ ಆಧುನಿಕ ಯಂತ್ರವನ್ನು ಉಪವಿಭಾಗಾಧಿಕಾರಿ ಎನ್.ತಿಪ್ಪೇಸ್ವಾಮಿ ಉದ್ಘಾಟಿಸಿದರು. ತಹಶೀಲ್ದಾರ್ ಕಾಂತರಾಜ್, ಎ.ಡಿ.ಎಲ್.ಆರ್.ಭಾವನಾ, ಜಾನುಕೊಂಡ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಪತಿಯಪ್ಪ ಹಾಗೂ ವಿವಿಧ ಮುಖಂಡರು ಉಪಸ್ಥಿತರಿದ್ದರು.   

ಚಿತ್ರದುರ್ಗ: ‘ತಾಲ್ಲೂಕಿನ ಜಗದಳ್ಳಿಪುರ ಗ್ರಾಮದ ಭೂಮಿಯನ್ನು ಅತ್ಯಾಧುನಿಕ ಉಪಕರಣಗಳಿಂದ ಮರು ಭೂ ಮಾಪನ ಮಾಡಲಾಗುತ್ತಿದೆ’ ಎಂದು ಉಪವಿ ಭಾಗಾಧಿಕಾರಿ ಎನ್. ತಿಪ್ಪೇಸ್ವಾಮಿ ತಿಳಿಸಿದರು.

ತಾಲ್ಲೂಕಿನ ಜಗದಳ್ಳಿಪುರ ಬೇಚಾರ ಗ್ರಾಮದ ವ್ಯಾಪ್ತಿಯ ನಾಯಕರ ಸೊಲ್ಲಾಪುರ ಗ್ರಾಮದಲ್ಲಿ ಭೂ ಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯಿಂದ ಮರು ಭೂಮಾಪನದ ಅವಶ್ಯಕತೆ ಮತ್ತು ಮಾಹಿತಿ ಕುರಿತು ಏರ್ಪಡಿಸಲಾದ ಗ್ರಾಮಸಭೆ  ಉದ್ಘಾಟಿಸಿ ಹಾಗೂ ಮಾದರಿ ಮರು ಭೂಮಾಪನ ಯಂತ್ರ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಪ್ರತಿ ಜಿಲ್ಲೆಯಿಂದ ಎರಡು ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಅತ್ಯಾಧುನಿಕ ಉಪಕರಣ ಎಲೆಕ್ಟ್ರಾನಿಕ್ಸ್ ಟೋಟಲ್ ಸ್ಟೇಷನ್ ಮೂಲಕ ಭೂಮಿಯನ್ನು ಮರುಮಾಪನ ಮಾಡಲಾಗುತ್ತಿದೆ. ಮಾದರಿ ಸರ್ವೆಗಾಗಿ ಜಿಲ್ಲೆಯಲ್ಲಿ ತಾಲ್ಲೂಕಿನ ಜಗದಳ್ಳಿಪುರ ಬೇಚಾರ ಗ್ರಾಮ ಮತ್ತು ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಹೋಬಳಿ ಕಾತ್ರೀಕೇನಹಳ್ಳಿ ಗ್ರಾಮವನ್ನು ಮಾದರಿ ಸರ್ವೇಗಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು.

ಲೇಸರ್ ಕಿರಣ ಉಪಯೋಗಿಸಿ ಅಳತೆ ಮಾಡಲಾಗುತ್ತದೆ. ಪ್ರಿಜೆನ್ ಲೆನ್ಸ್ ಅನ್ನು ಗಡಿಯ ಭಾಗದಲ್ಲಿ ಇಟ್ಟು ಯಂತ್ರದ ಮೂಲಕ ಕ್ಷಣಾರ್ಧದಲ್ಲಿ ಅಳತೆಯನ್ನು ಕಂಡುಹಿಡಿಯಲಾಗುತ್ತದೆ. ಮುಂದಿನ ದಿನಗಳಲ್ಲಿ ಅಳತೆಗೆ ಯಾವುದೇ ಚೈನ್ ಬಳಸಲಾಗುವುದಿಲ್ಲ. ಲೇಸರ್ ಕಿರಣ ಉಪಯೋಗಿಸಿ ಅಳತೆ ಮಾಡುವುದರಿಂದ ಇದರಲ್ಲಿ ಯಾವುದೇ ನ್ಯೂನತೆಗಳು ಕಂಡು ಬರುವುದಿಲ್ಲ. ಈ ದಾಖಲೆಯನ್ನು ಗಣಕಯಂತ್ರಕ್ಕೆ ಅಳವಡಿಸಿ ತಕ್ಷಣ ನಕ್ಷೆಯನ್ನು ಪಡೆಯಲು ಸಹಕಾರಿಯಾಗಲಿದೆ ಎಂದರು.

ಬ್ರಿಟಿಷರ ಕಾಲದಲ್ಲಿ (೧೮೮೦, ೧೯೦೫) ಭೂ ಮಾಪನ ಮಾಡಲಾಗಿದೆ. ಅಂದಿನಿಂದ ಇಲ್ಲಿಯವರೆಗೆ ಸಮಗ್ರ ಮರು ಭೂಮಾಪನ ನಡೆದಿಲ್ಲ. ಭೂಮಿಯ ಹಂಚಿಕೆ, ಕೊರಕಲು, ನಕಾಶೆ ರಸ್ತೆ, ಭೂ ಸ್ವಾಧೀನ ಸೇರಿದಂತೆ ಸಾಕಷ್ಟು ಬದಲಾವಣೆ ಆಗಿರುವುದರಿಂದ ಪಹಣಿಯಲ್ಲಿ ಸಾಕಷ್ಟು ವ್ಯತ್ಯಾಸಗಳಾಗಿವೆ. ಇದರಿಂದ ಜಮೀನಿನ ದಾಖಲೆಗಳ ತಿದ್ದುಪಡಿಗೆ ಜನರು ತಾಲ್ಲೂಕು ಕಚೇರಿಗೆ ಸಾಕಷ್ಟು ಅಲೆದಾಡುವಂತಾಗಿದೆ. ಒಂದು ದಿನದಲ್ಲಿ ಎಲ್ಲಾ ದಾಖಲೆಗಳನ್ನು ಸರಿಪಡಿಸಿಕೊಂಡು ಬರುತ್ತೇವೆ ಎಂಬ ವಿಶ್ವಾಸ ಈಗಿನ ಸ್ಥಿತಿಯಲ್ಲಿ ಇರುವುದಿಲ್ಲ. ಮರು ಭೂ ಮಾಪನದಿಂದ ಪಹಣಿಯೊಂದಿಗೆ ಭೂ ನಕ್ಷೆಯನ್ನು ನೀಡಲು ಅತ್ಯಾಧುನಿಕ ಸರ್ವೆಯಿಂದ ಸಾಧ್ಯವಾಗಲಿದೆ ಎಂದರು.

ಜಗದಳ್ಳಿಪುರ ಗ್ರಾಮದಲ್ಲಿ ೮೦೮.೨೯ ಎಕರೆ ಜಮೀನು ಇದ್ದು ೧ರಿಂದ ೫೯ ಸರ್ವೆ ನಂಬರ್‌ಗಳಿವೆ. ಆದರೆ, ಖಾತೆದಾರರ ಸಂಖ್ಯೆ ೫೯ ಮತ್ತು ೧೭೧ ಹಿಸ್ಸಾಗಳಾಗಿವೆ. ಈ ಗ್ರಾಮದ ಜಮೀನುಗಳನ್ನು ಹೊಸ ಪ್ರಕ್ರಿಯೆಗೆ ಅಳವಡಿಸುವುದರಿಂದ ಎಲ್ಲಾ ಖಾತೆದಾರರ ಭೂಮಿ ಮರು ಮಾಪನವಾಗಲಿದೆ. ಇದರಿಂದ ಮುಂದಿನ ದಿನಗಳಲ್ಲಿ ತಮ್ಮ ಖಾತೆಯಲ್ಲಿನ ಜಮೀನಿನಲ್ಲಿ ಯಾವುದೇ ತಪ್ಪುಗಳಿರುವುದಿಲ್ಲ.

ಈ ಗ್ರಾಮದಲ್ಲಿ ಸುಮಾರು ೬೫ ತಿದ್ದುಪಡಿ ಪ್ರಕರಣಗಳಿದ್ದು ಇವುಗಳನ್ನು ತಿದ್ದುಪಡಿ ಮಾಡಿ ಆದೇಶಿಸಲಾಗಿದೆ. ಈಗ ಜಮೀನಿನ ಪೋಡಿ, ಹದ್ದುಬಸ್ತ್ ಮಾಡಲು ರೂ೧೫೦೦ ಶುಲ್ಕ ಪಾವತಿಸಬೇಕಾಗಿದ್ದು, ಇಲ್ಲಿ ಯಾವುದೇ ಶುಲ್ಕವಿಲ್ಲದೆ ಮರು ಭೂ ಮಾಪನ ಮಾಡಿ ದಾಖಲೆಗಳನ್ನು ನೀಡಲಾಗುತ್ತದೆ. ಭೂ ಮಾಪನಕ್ಕೂ ಮುಂಚೆ ಖಾತೆದಾರರು ಮೃತಪಟ್ಟಿದ್ದಲ್ಲಿ (ಪೌತಿಯಾಗಿದ್ದಲ್ಲಿ) ವಾರಸುದಾರರಿಗೆ ಖಾತೆ ಬದಲಾವಣೆ, ತಿದ್ದುಪಡಿಗಳಿದ್ದಲ್ಲಿ ತಕ್ಷಣವೇ ಮಾಡಿಸಿಕೊಳ್ಳಬೇಕು. ಇದಕ್ಕಾಗಿಯೇ ಗ್ರಾಮಲೆಕ್ಕಿಗರನ್ನು ನೇಮಿಸಲಾಗುತ್ತಿದೆ ಎಂದರು.

ಭೂ ಮಾಪನ ಇಲಾಖೆ ಉಪನಿರ್ದೇಶಕ ರಾಮಾಂಜನೇಯ ಮಾತನಾಡಿ, ‘ಭೂ ಮರು ಮಾಪನಕ್ಕಾಗಿ ಕೇಂದ್ರ ಸರ್ಕಾರರೂ೫ ಸಾವಿರ ಕೋಟಿ ಮೀಸಲಿರಿಸಿದೆ. ಕೇಂದ್ರ ಸರ್ಕಾರದ ಆರ್ಥಿಕ ಸಹಾಯದೊಂದಿಗೆ ಇಲಾಖೆಯಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮರು ಭೂ ಮಾಪನ ಕೈಗೊಳ್ಳಲಾಗುತ್ತಿದೆ. ಮಾದರಿಯಾಗಿ ಪ್ರತಿ ಜಿಲ್ಲೆಯಿಂದ ಎರಡು ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಭೂ ದಾಖಲೆಗಳನ್ನು ಡಿಜಿಟಲ್ ಮಾದರಿಯಲ್ಲಿ ನೀಡಬೇಕೆನ್ನುವ ಉದ್ದೇಶದಿಂದ ಮರು ಮಾಪನ ಮಾಡಲಾಗುತ್ತಿದೆ ಎಂದರು.

ತಹಶೀಲ್ದಾರ್ ಕಾಂತರಾಜ್, ಎ.ಡಿ.ಎಲ್ ಆರ್.ಭಾವನಾ, ಜಾನುಕೊಂಡ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ
ಪತಿಯಪ್ಪ ಹಾಗೂ ವಿವಿಧ ಮುಖಂಡರು ಉಪಸ್ಥಿತರಿದ್ದರು. ಭೂಮಾಪನಾ ಅಧಿಕಾರಿ ದಯಾನಂದ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.