ADVERTISEMENT

ಭ್ರಷ್ಟಾಚಾರ ರಹಿತರಿಗೆ ಮತ: ಸ್ವಾಮೀಜಿ ಸಲಹೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 8:52 IST
Last Updated 4 ಏಪ್ರಿಲ್ 2013, 8:52 IST

ಹೊಸದುರ್ಗ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷವನ್ನು ಪರಿಗಣಿಸದೇ, ಭ್ರಷ್ಟಾಚಾರರಹಿತ ಅಭ್ಯರ್ಥಿಗೆ ಪಂಚಮಸಾಲಿ ಸಮಾಜದವರೆಲ್ಲರೂ ಮತ ನೀಡಬೇಕು ಎಂದು ಹರಿಹರದ ವೀರಶೈವ ಪಂಚಮಸಾಲಿ ಮಠದ ಸಿದ್ದಲಿಂಗೇಶ್ವರ ಸ್ವಾಮೀಜಿ ತಿಳಿಸಿದರು.

ಭಾನುವಾರ ಪಟ್ಟಣದ ಸಿದ್ಧರಾಮೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ತಾಲ್ಲೂಕು ವೀರಶೈವ ಪಂಚಮಸಾಲಿ ಸಮಾಜದ ಸಮಾವೇಶ ಹಾಗೂ ವಿವಿಧ ಘಟಕಗಳ ಉದ್ಘಾಟನೆ ಸಮಾರಂಭ ನೇತೃತ್ವ ವಹಿಸಿ ಅವರು ಮಾತನಾಡಿದರು. ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಎಚ್. ನಾಗರಾಜು ಅಧ್ಯಕ್ಷತೆ ವಹಿಸಿದ್ದರು.

ರಾಜ್ಯಾಧ್ಯಕ್ಷ ಬಸವರಾಜ್ ದಿಂಡೂರ್ ಮಾತನಾಡಿ, ಪಂಚಮಸಾಲಿ ಸಮಾಜವನ್ನು `2ಎ' ವರ್ಗಕ್ಕೆ ಸೇರಿಸುವ ಭರವಸೆ ನೀಡಿದ ಅಭ್ಯರ್ಥಿಗೆ ಮಾತ್ರ ರಾಜ್ಯದ ಎಲ್ಲಾ ತಾಲ್ಲೂಕುಗಳ ಪಂಚಮಸಾಲಿ ಸಮಾಜದ ಮತದಾರರು ಮತ ನೀಡಬೇಕು ಎಂದು ಕಠೋರವಾಗಿ ತಿಳಿಸಿದರು.

ಸಮಾಜದ ನಿಕಟಪೂರ್ವ ರಾಜ್ಯಾಧ್ಯಕ್ಷ ಬಾವಿ ಬೆಟ್ಟಪ್ಪ, ಜಿಲ್ಲಾಧ್ಯಕ್ಷ ಎಚ್. ನಾಗರಾಜು, ವಿವಿಧ ತಾಲ್ಲೂಕುಗಳ ಅಧ್ಯಕ್ಷರಾದ ಕೆ.ಎಸ್. ಸಿದ್ದಬಸಪ್ಪ, ಎಂ. ತಿಪ್ಪೇಸ್ವಾಮಿ, ಕೆ.ಟಿ. ಶಿವಕುಮಾರ್, ಪಿ.ಎಚ್. ಮುರುಗೇಶ್ವರ, ಆರ್.ಜಿ. ಜಯಕುಮಾರ್, ಗೌರವಾಧ್ಯಕ್ಷ ಎಂ. ಶಿವಲಿಂಗಪ್ಪ, ಸಮಾಜದ ಮಹಿಳಾ ಘಟಕದ ವಿಜಯಾ ಶಿವಲಿಂಗಪ್ಪ, ಸಮಾಜದ ಇನ್ನೂ ಅನೇಕ ಗಣ್ಯರು ಸಮಾವೇಶದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.