ADVERTISEMENT

ಮಕ್ಕಳನ್ನು ಸ್ವಾಗತಿಸಲು ಸಜ್ಜಾದ ಶಾಲೆ

ಶಾಲೆ ಆರಂಭೋತ್ಸವ ಇಂದು: ಜಿಲ್ಲೆಯ ಶಾಲೆಗಳಲ್ಲಿ ಹಬ್ಬದ ವಾತಾವರಣ

​ಪ್ರಜಾವಾಣಿ ವಾರ್ತೆ
Published 28 ಮೇ 2018, 10:37 IST
Last Updated 28 ಮೇ 2018, 10:37 IST

ಚಿತ್ರದುರ್ಗ: ರಜೆಯ ಮೋಜಿನಲ್ಲಿ ಮುಳುಗಿರುವ ಮಕ್ಕಳನ್ನು ಆಕರ್ಷಿಸಲು ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಸುಣ್ಣ ಬಣ್ಣ ಬಳಿಯಲಾಗಿದ್ದು, ಮಾವಿನ ತೋರಣ, ಬಾಳೆಗಿಡ, ಹೂವುಗಳಿಂದ ಸಿಂಗಾರಗೊಂಡಿವೆ.

ಪ್ರಸಕ್ತ ಶೈಕ್ಷಣಿಕ ವರ್ಷ ಮೇ 28ರಿಂದ ಆರಂಭವಾಗಲಿದ್ದು, ಶಾಲಾ ಪ್ರಾರಂಭೋತ್ಸವಕ್ಕೆ ಶಿಕ್ಷಕರು ಸಜ್ಜಾಗಿದ್ದಾರೆ. ಶಾಲೆಯ ಮೊದಲ ದಿನ ಮಕ್ಕಳಿಗೆ ಹಬ್ಬದ ವಾತಾವರಣ ರೂಪಿಸುವುದು. ಸಿಹಿ ಹಂಚುವ ವ್ಯವಸ್ಥೆ, ಶಾಲೆಯ ಆವರಣ, ಶಾಲಾ ಕೊಠಡಿ, ಶೌಚಾಲಯಗಳನ್ನು ಭಾನುವಾರ ಶುಚಿಗೊಳಿಸಲಾಗಿದೆ.

‘ಶಾಲೆಗಳು ಪ್ರಾರಂಭವಾಗುವ ಹಿನ್ನೆಲೆಯಲ್ಲಿ ಎಲ್ಲ ಶಿಕ್ಷಕರು ಮಾಡಿಕೊಳ್ಳಬೇಕಾದ ಪೂರ್ವಸಿದ್ಧತೆ ಬಗ್ಗೆ ಈಗಾಗಲೇ ಸಭೆ ಮಾಡಿ ತಿಳಿಸಿದ್ದೇವೆ. ಶಾಲಾಭಿವೃದ್ಧಿ ಯೋಜನೆ, ಶಾಲಾ ಶೈಕ್ಷಣಿಕ ಯೋಜನೆ, ಶಾಲಾ ದಾಖಲೆಗಳ ಜೋಡಣೆ, ಶಾಲಾ ವೇಳಾಪಟ್ಟಿ (ತರಗತಿವಾರು ಮತ್ತು ಶಿಕ್ಷಕವಾರು), ಶಿಕ್ಷಕರ ವಾರ್ಷಿಕ ಪಾಠಯೋಜನೆ ಸೇರಿ ಎಲ್ಲ ಸಿದ್ಧತೆಗಳನ್ನು ಶಿಕ್ಷಕರು ಮಾಡಿಕೊಂಡಿದ್ದಾರೆ’ ಎನ್ನುತ್ತಾರೆ ಶಿಕ್ಷಣ ಸಂಯೋಜಕ ಮಹೇಶ್.

ADVERTISEMENT

ವಿಶೇಷ ದಾಖಲಾತಿ ಆಂದೋಲನ: ಶಾಲಾ ಪ್ರಾರಂಭೋತ್ಸವದ ಅಂಗವಾಗಿ 31ರವರೆಗೆ ವಿಶೇಷ ದಾಖಲಾತಿ ಆಂದೋಲನ ನಡೆಯಲಿದೆ. ಮಕ್ಕಳ ಮನೆ ಮನೆಗೆ ಭೇಟಿ, ಗ್ರಾಮಗಳಲ್ಲಿ ಜಾಥಾ ನಡೆಯುತ್ತಿವೆ. ಜೂನ್ 1ರಿಂದ 31ರವರೆಗೆ ಸಾಮಾನ್ಯ ದಾಖಲಾತಿ ಆಂದೋಲನ ಹಮ್ಮಿಕೊಂಡು ಅರ್ಹ ಮಕ್ಕಳನ್ನು ಶಾಲೆಗೆ ದಾಖಲು ಮಾಡಿಕೊಳ್ಳಲಾಗುವುದು ಎಂದು ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.

ಶೈಕ್ಷಣಿಕ ಚಟುವಟಿಕೆಗಳು ಶುರುವಾಗಿರುವ ಬಗ್ಗೆ ಹಾಗೂ ಶಾಲೆಗಳು ತೆರೆದಿರುವ ಬಗ್ಗೆ ಜೂನ್ 1ರಿಂದ 6ರವರೆಗೆ ‘ಮಿಂಚಿನ ಸಂಚಾರ’ ಕಾರ್ಯಕ್ರಮ ನಡೆಯಲಿದೆ. ಶಾಲೆಯ ಮೂಲಸೌಲಭ್ಯಗಳ ಅಗತ್ಯದ ಬಗ್ಗೆಯೂ ಗಮನಹರಿಸಲಾಗುವುದು ಎನ್ನುತ್ತಾರೆ ಶಿಕ್ಷಣ ಇಲಾಖೆ ಅಧಿಕಾರಿಗಳು.

ಮೆರವಣಿಗೆ

‘ಮೇ 28 ರಂದು ಶಾಲಾ ಆರಂಭೋತ್ಸವದ ಅಂಗವಾಗಿ ಚಕ್ಕಡಿ ಗಾಡಿಗೆ ತಳಿರು– ತೋರಣಗಳಿಂದ ವಿಶೇಷ ಸಿಂಗಾರ ಮಾಡಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುವುದು.

ಶಾಲೆಯ ಮಹತ್ವ ಸಾರಲಾಗುವುದು. ರಜಾ ಇರುವುದರಿಂದ ಸಾಮಾನ್ಯವಾಗಿ ಮಕ್ಕಳು ಶಾಲೆಗೆ ಬೇಗ ಬರುವುದಿಲ್ಲ. ಹಾಗಾಗಿ ವಿಶೇಷ ಜಾಗೃತಿ ಮಾಡುವುದರ ಮೂಲಕ ನಾವೇ ಖುದ್ದಾಗಿ ಮನೆಗೆ ಭೇಟಿ ನೀಡಿ ಮಮತೆ ಮತ್ತು ಆಕರ್ಷಣೆಯೊಂದಿಗೆ ಮಕ್ಕಳ ಮನವೊಲಿಸಿ ಶಾಲೆಯತ್ತ ಸೆಳೆಯಲಾಗುತ್ತದೆ’ ಎಂದು ಕುರುಬರಹಳ್ಳಿ ಸರ್ಕಾರಿ ಉನ್ನತೀಕರಿಸಿದ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಎ.ಎನ್. ಸುರೇಶ್ ಹೇಳಿದರು.

**
ಈಗಾಗಲೇ ಎಲ್ಲ ಶಾಲೆ ಆರಂಭಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಮೇ 28 ರಂದು ಮಕ್ಕಳನ್ನು ಸ್ವಾಗತಿಸಿ ಶಾಲೆಗಳನ್ನು ಆರಂಭಿಸಲಾಗುವುದು
ನಾಗಭೂಷಣ್, ಕ್ಷೇತ್ರ ಶಿಕ್ಷಣಾಧಿಕಾರಿ, ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.