ADVERTISEMENT

ಮತದಾರರ ನಿರೀಕ್ಷೆಗೆ ತಕ್ಕಂತೆ ಕೆಲಸ...

​ಪ್ರಜಾವಾಣಿ ವಾರ್ತೆ
Published 20 ಜನವರಿ 2011, 6:50 IST
Last Updated 20 ಜನವರಿ 2011, 6:50 IST

ಹೊಳಲ್ಕೆರೆ: ತಾಲ್ಲೂಕಿನ ಎಚ್.ಡಿ. ಪುರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಯಗಳಿಸಿರುವ ಇಂದಿರಾ ಕಿರಣ್ ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

* ನಿಮ್ಮ ರಾಜಕೀಯ ಹಿನ್ನೆಲೆ ಏನು?
ಪತಿ ಕಿರಣ್‌ಕುಮಾರ್ ಯಾದವ್ 2000ನೇ ಇಸ್ವಿಯಲ್ಲಿ ಗ್ರಾ.ಪಂ. ಸದಸ್ಯರಾಗಿದ್ದರು. ನಂತರ ಕಾಂಗ್ರೆಸ್ ಪಕ್ಷದ ತಾಲ್ಲೂಕು ಕಾರ್ಯಕಾರಿ ಸಮಿತಿ ಸದಸ್ಯರಾದರು. ಹಿಂದೆ ಅವರು ತಾಲ್ಲೂಕು ಪಂಚಾಯ್ತಿ ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆಗೆ ಸ್ಪರ್ಧಿಸಲು ಪ್ರಯತ್ನ ಮಾಡಿದ್ದರೂ ಟಿಕೆಟ್ ಸಿಕ್ಕಿರಲಿಲ್ಲ. ಈಗ ಆ ಆಸೆ ನನ್ನ ಮೂಲಕ ಈಡೇರಿದೆ.

* ಕ್ಷೇತ್ರದಲ್ಲಿ ಪ್ರಮುಖವಾಗಿ ಯಾವ ಸಮಸ್ಯೆಗಳನ್ನು ಗುರುತಿಸಿದ್ದೀರಿ?
ಎಚ್.ಡಿ. ಪುರ ಲಕ್ಷ್ಮೀ ನರಸಿಂಹಸ್ವಾಮಿ ಪುಣ್ಯಕ್ಷೇತ್ರ. ತಾಲ್ಲೂಕು ಕೇಂದ್ರದಿಂದ ದೂರವಿರುವ ಕ್ಷೇತ್ರ ಅಭಿವೃದ್ಧಿ ಕಂಡಿಲ್ಲ. ಸಾರಿಗೆ, ಕುಡಿಯುವ ನೀರು, ರಸ್ತೆ ಮತ್ತಿತರ ಸೌಲಭ್ಯಗಳಿಂದ ಅನೇಕ ಹಳ್ಳಿಗಳು ಇನ್ನೂ ವಂಚಿತವಾಗಿವೆ. ಎಸ್‌ಸಿ, ಎಸ್‌ಟಿ ಕಾಲೋನಿಗಳು ಅನೇಕ ಸಮಸ್ಯೆಗಳಿಂದ ತುಂಬಿವೆ. ಕ್ಷೇತ್ರದ ಕಸವನಹಳ್ಳಿ, ಬೂದಿಪುರ, ಕೊಮಾರನಹಳ್ಳಿ ಗ್ರಾಮಗಳಿಗೆ ಬಸ್ ಸಂಚಾರ, ರಸ್ತೆ ಯಾವುದೂ ಇಲ್ಲ. ಅಧಿಕಾರದ ಅವಧಿಯಲ್ಲಿ ಎಲ್ಲಾ ಹಳ್ಳಿಗಳನ್ನು ಸಮಾನವಾಗಿ ಪರಿಗಣಿಸಿ ಅಭಿವೃದ್ಧಿ ಮಾಡುವ ಮನಸ್ಸಿದೆ.

* ಅಭಿವೃದ್ಧಿಗಾಗಿ ಅನುದಾನ ಹೇಗೆ ತರುವಿರಿ?
ಪಕ್ಷದ ನಾಯಕರಾದ ಮಾಜಿ ಶಾಸಕ ಎಚ್. ಆಂಜನೇಯ ಮತ್ತು ಎ.ವಿ. ಉಮಾಪತಿ ಅವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತೇವೆ. ಹಿಂದುಳಿದ ಪ್ರದೇಶಗಳ ಉನ್ನತಿಗೆ ಹೆಚ್ಚಿನ ಅನುದಾನ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ.

* ಬಿಜೆಪಿ ಅಲೆಯ ಮಧ್ಯೆಯೂ ಗೆಲುವು ಹೇಗೆ ಸಾಧ್ಯವಾಯಿತು?

ಕಳೆದ ಹತ್ತು ವರ್ಷಗಳಿಂದ ಸಂಘಟನೆ, ಸಮಾಜಸೇವೆಯಲ್ಲಿ ತೊಡಗಿದ್ದೆವು. ಕ್ಷೇತ್ರದ ಜನರಿಗೆ ನಮ್ಮ ಮೇಲೆ ಅಭಿಮಾನ ಇತ್ತು. ಇದರಿಂದ ಗೆಲುವು ಒಲಿದು ಬಂತು. ವಿಶ್ವಾಸ ಇಟ್ಟು ಮತ ಹಾಕಿದ ಮತದಾರರು, ಪ್ರೋತ್ಸಾಹಿಸಿದ ಕಾರ್ಯಕರ್ತರು, ಮುಖಂಡರಿಗೆ ಕೃತಜ್ಞತೆ ಅರ್ಪಿಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.