ADVERTISEMENT

ಮತ್ತೆ ಬಿಳಿ ಕಾಗೆ ಪ್ರತ್ಯಕ್ಷ: ಅಚ್ಚರಿ

​ಪ್ರಜಾವಾಣಿ ವಾರ್ತೆ
Published 20 ಜುಲೈ 2012, 10:35 IST
Last Updated 20 ಜುಲೈ 2012, 10:35 IST

ಹೊಳಲ್ಕೆರೆ: ತಾಲ್ಲೂಕಿನ ಗುಡ್ಡದ ಸಾಂತೇನಹಳ್ಳಿಯಲ್ಲಿ ಕೆಲ ತಿಂಗಳುಗಳಿಂದ ಕಣ್ಮರೆಯಾಗಿದ್ದ ಎರಡು ಬಿಳಿ ಕಾಗೆಗಳು ಮತ್ತೆ ಪ್ರತ್ಯಕ್ಷವಾಗಿ ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿವೆ.

ಕಳೆದ ಐದಾರು ವರ್ಷಗಳಿಂದ ಗ್ರಾಮದಲ್ಲಿ ಮೂರು ಬಿಳಿ ಕಾಗೆಗಳು ವಾಸವಾಗಿದ್ದವು. ಸಾಮಾನ್ಯವಾಗಿ ಕಾಗೆಯ ಬಣ್ಣ ಕಪ್ಪು ಇದ್ದು, ಅವು ಬಿಳಿಬಣ್ಣ ಹೊಂದಿದ್ದರಿಂದ ಎಲ್ಲರನ್ನು ಆಕರ್ಷಿಸುತ್ತಿದ್ದವು. ಕಾಗೆಗಳನ್ನು ನೋಡಲೆಂದೇ ಅಕ್ಕಪಕ್ಕದ ಊರುಗಳಿಂದ ಜನ ಆಗಮಿಸುತ್ತಿದ್ದುದೂ ಉಂಟು.

ಗ್ರಾಮದ ಸುತ್ತಮುತ್ತವೇ ಇರುತ್ತಿದ್ದ ಅವು ಕೆಲವೊಮ್ಮೆ ಇದ್ದಕ್ಕಿದ್ದಂತೆ ಮಾಯವಾಗುತ್ತಿದ್ದವು. ಆದ, ಮತ್ತೆ ಎರಡು ಮೂರು ತಿಂಗಳಲ್ಲಿ ಮತ್ತೆ ಪ್ರತ್ಯಕ್ಷವಾಗಿ ಎಲ್ಲರನ್ನು ಚಕಿತಗೊಳಿಸುತ್ತಿದ್ದವು.

ಒಂದು ಮೃತಪಟ್ಟಿತ್ತು...
ಕಳೆದ ವರ್ಷ ಸಮೀಪದ ಆವಿನಹಟ್ಟಿಯ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಮಧ್ಯಾಹ್ನದ ಬಿಸಿಯೂಟದ ಅಗುಳುಗಳನ್ನು ತಿನ್ನಲು ಹೋದ ಇದರಲ್ಲಿನ ಒಂದು ಕಾಗೆ ವಿದ್ಯುತ್ ತಂತಿಗೆ ಸಿಲುಕಿ ಮೃತಪಟ್ಟಿತ್ತು.

ಅಂದಿನಿಂದ ಉಳಿದ ಎರಡು ಕಾಗೆಗಳೂ ಕಣ್ಮರೆಯಾಗಿದ್ದವು. ಸದಾ ಗ್ರಾಮದಲ್ಲೇ ಇರುತ್ತಿದ್ದ ಈ ವಿಶೇಷ ಕಾಗೆಗಳ ಅಗಲಿಕೆಯಿಂದ ಜನ ಬೇಸರಗೊಂಡಿದ್ದರು.

ಅವೇ ಎರಡು ಕಾಗೆಗಳು ಈಗ ಮತ್ತೆ ಗ್ರಾಮದಲ್ಲಿ ಪ್ರತ್ಯಕ್ಷಗೊಂಡು ಎಲ್ಲರಲ್ಲಿ ಸಂತಸಕ್ಕೂ ಕಾರಣವಾಗಿವೆ. 
ಗ್ರಾಮದ ಸುತ್ತಲೂ ಇರುವ ಮರಗಳಲ್ಲಿ ವಾಸಿಸುವ ಅವು, ಆಹಾರಕ್ಕಾಗಿ ಗ್ರಾಮದೊಳಗೆ ಬರುತ್ತವೆ.

ಗ್ರಾಮವನ್ನು ಬಿಟ್ಟು ಅವು ಎಲ್ಲಿಯೂ ದೂರ ಹೋಗುವುದಿಲ್ಲ. ಕಪ್ಪು ಕಾಗೆಗಳೊಂದಿಗೂ ಬೆರೆಯುವ ಅವು, ಇತರರಿಗೆ ತೊಂದರೆ ಕೊಟ್ಟ ಉದಾಹರಣೆಗಳಿಲ್ಲ.

`ಈ ಎರಡೂ ಬಿಳಿಕಾಗೆಗಳು ಯಾವಾಗಲೂ ಶಾಲೆಯ ಸುತ್ತಮುತ್ತ ಇರುತ್ತವೆ. ಮಧ್ಯಾಹ್ನ ಶಾಲೆಯಲ್ಲಿ ಮಕ್ಕಳು ಬಿಸಿಯೂಟ ಮಾಡಿದ ನಂತರ ತಟ್ಟೆ ತೊಳೆದ ಜಾಗದಲ್ಲಿ ಬೀಳುವ ಅನ್ನದ ಅಗುಳುಗಳನ್ನು ತಿನ್ನುತ್ತವೆ. ಇವುಗಳಿಗೆ ವಿದ್ಯಾರ್ಥಿಗಳಾಗಲೀ, ಗ್ರಾಮದ ಜನರಾಗಲೀ ತೊಂದರೆ ಕೊಡುವುದಿಲ್ಲ. ಆದ್ದರಿಂದ ಅವು ಜನರಿಗೆ ಹೆದರುವುದಿಲ್ಲ. ತೀರಾ ಹತ್ತಿರಕ್ಕೆ ಹೋಗುವವರೆಗೆ ಹಾರಿ ಹೋಗುವುದಿಲ್ಲ. ಇದರಿಂದ ಈ ಅಪರೂಪದ ಬಿಳಿಕಾಗೆಗಳನ್ನು ಬಹಳ ಹತ್ತಿರದಿಂದ ನೋಡಬಹುದು. ಮಕ್ಕಳಿಗಂತೂ ಅವು ಪ್ರೀತಿಯ ಪಕ್ಷಿಗಳಾಗಿವೆ. ಅನ್ನ ತಿಂದ ನಂತರ ಪಕ್ಕದಲ್ಲಿರುವ ಹುಣಸೇಮರದಲ್ಲಿ ಕೂರುತ್ತವೆ. ಶಾಲೆಯ ಅಂಗಳದಲ್ಲಿಯೂ ಆಡುತ್ತಿರುತ್ತವೆ~ ಎನ್ನುತ್ತಾರೆ ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಎನ್. ಬಸವರಾಜ್.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.