ADVERTISEMENT

ಮನೆ ಮನೆ ಕಸ ಸಂಗ್ರಹಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2011, 7:00 IST
Last Updated 18 ಜೂನ್ 2011, 7:00 IST

ಮೊಳಕಾಲ್ಮುರು: ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಸ್ಥಳೀಯ ಪ.ಪಂ. ಶುಕ್ರವಾರ ಮನೆ, ಮನೆ ಕಸ ಸಂಗ್ರಹಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿತು.

ಪ.ಪಂ. ಅಧ್ಯಕ್ಷೆ ಸಮೀರಾನಾಜ್ ಕಾರ್ಯಕ್ರಮಕ್ಕೆ ಪಟ್ಟಣ ಪಂಚಾಯಿತಿ  ಆವರಣದಲ್ಲಿ ವಿಧ್ಯುಕ್ತವಾಗಿ ಚಾಲನೆ ನೀಡಿದರು. ನಂತರ, ಮಾಹಿತಿ ನೀಡಿದ ಮುಖ್ಯಾಧಿಕಾರಿ ಎ. ವಾಸೀಂ ಪ್ರತಿದಿನ ಬೆಳಿಗ್ಗೆ 5.30ರಿಂದ 9ರವರೆಗೆ ಟ್ರ್ಯಾಕ್ಟರ್ ಪ್ರಮುಖ ಬೀದಿಯಲ್ಲಿ ಸ್ವಚ್ಛತೆ ಮಹತ್ವ ಕುರಿತ ಹಾಡುಗಳನ್ನು ಹಾಕಿಕೊಂಡು ಸಂಚರಿಸುತ್ತದೆ. ಈ ಸೇವೆ  ಮುಂದಿನ ದಿನಗಳಲ್ಲಿ ಎಲ್ಲಾ ಬಡಾವಣೆಗಳಿಗೆ ವಿಸ್ತರಿಸಲಾಗುವುದು ಎಂದರು.

ಕಸ ಹಾಕುವ ಮುನ್ನ ನಾಗರಿಕರು ಹಸಿಕಸ ಹಾಗೂ ಒಣಕಸವನ್ನು ಬೇರ್ಪಡಿಸಿ ಹಾಕಬೇಕು. ಇದು ಘನತ್ಯಾಜ್ಯ ವಿಲೇವಾರಿಗೆ ಅನುಕೂಲವಾಗಲಿದೆ. ಇದಕ್ಕಾಗಿ ಪ್ರತಿ ಮನೆಗೆ ಮಾಸಿಕ ್ಙ 15, ವಾಣಿಜ್ಯ ಮಳಿಗೆ, ಸಣ್ಣ ಹೋಟೆಲ್‌ನವರಿಗ್ಙೆ 20 ಶುಲ್ಕ ನಿಗದಿ ಮಾಡಲಾಗಿದೆ. ಸರ್ಕಾರದ ಆದೇಶ ಪ್ರಕಾರ ಸ್ತ್ರೀಶಕ್ತಿ ಸಂಘ, ಉಳಿತಾಯ ಗುಂಪುಗಳ ಮೂಲಕ ಈ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.

ಈ ಸೌಲಭ್ಯವನ್ನು ಸದುಪಯೋಗ ಮಾಡಿಕೊಂಡು ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡಲು ನಾಗರಿಕರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.

ಸದಸ್ಯರಾದ ಬಿ.ಜಿ. ಸೂರ್ಯನಾರಾಯಣ್, ಕೆ.ಜಿ. ಪಾರ್ಥಸಾರಥಿ, ಜಿ. ಪ್ರಕಾಶ್, ಮುರಳೀಧರ ನಾಯಕ್, ಚಂದ್ರಣ್ಣ, ಬಲ್ಕಿಶ್‌ಬಾನು ಹಾಜರಿದ್ದರು.

ಸಹಾಯ ಧನ ವಿತರಣೆ
ಚಳ್ಳಕೆರೆ
: ಪಟ್ಟಣದ ರಹೀಮ ನಗರದ ನಿವಾಸಿ ರಾಜು ಎಂಬುವರು ಈಚೆಗೆ ಮರ ಉರುಳಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಅವರ ಕುಟುಂಬಕ್ಕೆ ಬಿಜೆಪಿ ಯುವ ಮುಖಂಡ ಕೆ.ಟಿ. ಕುಮಾರಸ್ವಾಮಿ ಗುರುವಾರ ್ಙ 10 ಸಾವಿರ ಸಹಾಯಧನ ವಿತರಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ತಾಲ್ಲೂಕು ಉಪಾಧ್ಯಕ್ಷ ಟಿ.ಜೆ. ತಿಪ್ಪೇಸ್ವಾಮಿ, ಪುರಸಭೆ ಸದಸ್ಯ ಪ್ರಸನ್ನಕುಮಾರ್, ದೊಡ್ಡಲಿಂಗಾಚಾರಿ ಇದ್ದರು.

 ಧ್ಯಾನ ಶಿಬಿರ
ಚಳ್ಳಕೆರೆ
: ಪಟ್ಟಣದ ಗ್ರಾಮ ಕಚೇರಿಯಲ್ಲಿ ಜೂನ್ 19ರಂದು ಓಶೋ ಧ್ಯಾನ ಶಿಬಿರ ಏರ್ಪಡಿಸಲಾಗಿದೆ.  ಅಂದು ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಓಶೋರವರ ವಿವಿಧ ಧ್ಯಾನ ವಿಧಾನಗಳನ್ನು ಕಲಿಸಲಾಗುವುದು.ಆಸಕ್ತರು ಭಾಗವಹಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.