ADVERTISEMENT

ಮಳೆ, ಗುಡುಗು, ಸಿಡಿಲಿಗೆ ಜನ ತತ್ತರ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2011, 6:10 IST
Last Updated 21 ಏಪ್ರಿಲ್ 2011, 6:10 IST

ಹೊಳಲ್ಕೆರೆ: ತಾಲ್ಲೂಕಿನಾದ್ಯಂತ ಮಂಗಳವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಅನೇಕ ಮರಗಳು ಧರೆಗೆ ಉರುಳಿವೆ. ಪಟ್ಟಣದ ಅರಣ್ಯ ಇಲಾಖೆ ಕಚೇರಿಯ ಆವರಣದಲ್ಲಿದ್ದ ಬೃಹತ್ ನೀಲಗಿರಿ ಮರವೊಂದು ಪ್ರಮುಖ ರಸ್ತೆ ಬದಿಯಲ್ಲಿದ್ದ ಪ್ರಯಾಣಿಕರ ತಂಗುದಾಣ ಮತ್ತು ವಿದ್ಯುತ್ ಕಂಬದ ಮೇಲೆ ಉರುಳಿದೆ. ಇದರಿಂದ ತಂಗುದಾಣದ ಮೇಲ್ಛಾವಣಿ ಜಖಂಗೊಂಡಿದ್ದು, ವಿದ್ಯುತ್ ತಂತಿಗಳು ತುಂಡಾಗಿವೆ. ಮಳೆ ಬರುತ್ತಿದ್ದಾಗ ವಿದ್ಯುತ್ ಸರಬರಾಜು ನಿಲುಗಡೆ ಆಗಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ.

ಸಾಮಾನ್ಯವಾಗಿ ತಾಲ್ಲೂಕಿನಲ್ಲಿರುವ ಹೆಚ್ಚಿನ ಹಳ್ಳಕೊಳ್ಳಗಳು ತುಂಬಿ ಹರಿದಿವೆ. ಬೊಮ್ಮನಕಟ್ಟೆ ಕೆರೆಗೆ ಒಂದು ಅಡಿ ನೀರು ಹರಿದು ಬಂದಿದೆ. ಮಲ್ಲಾಡಿಹಳ್ಳಿ, ಗುಂಡಸಮುದ್ರ, ಸುತ್ತಮುತ್ತ ಬೀಸಿದ ಬಿರುಗಾಳಿಗೆ ಮರಗಳು ಉರುಳಿದ್ದು, 5 ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ ಎಂದು ಬೆಸ್ಕಾಂ ಎಂಜಿನಿಯರ್ ತಿಪ್ಪೇಸ್ವಾಮಿ ತಿಳಿಸಿದ್ದಾರೆ. ಬಿರುಮಳೆಯಿಂದ ಬಾಳೆ, ಮಾವು ಮತ್ತಿತರ ಬೆಳೆಗಳಿಗೆ ಹಾನಿ ಆಗಿದೆ. ತಾಲ್ಲೂಕಿನಾದ್ಯಂತ ರಾತ್ರಿ ಪೂರ ವಿದ್ಯುತ್ ಸರಬರಾಜು ನಿಲುಗಡೆಯಾಗಿತ್ತು.

ಗುಡುಗು, ಸಿಡಿಲಿಗೆ ಜನತೆ ತತ್ತರ: ರಾತ್ರಿ 8 ಕ್ಕೆ ಆರಂಭವಾದ ಮಳೆಯೊಂದಿಗೆ ಗುಡುಗು, ಸಿಡಿಲಿನ ಅಬ್ಬರ ಜೋರಾಗಿತ್ತು. ಒಂದೇ ಸಮನೆ ಧಗ್ಗನೆ ಬೆಳಕು ಹೊರಡಿಸುತ್ತಿದ್ದ ಕೋಲ್ಮಿಂಚು ಕಂಡು ಜನ ಆತಂಕಗೊಂಡರು. ಅಬ್ಬರದ ಗುಡುಗಿನ ನಡುವೆ ಭಾರೀ ಶಬ್ದದ ಸಿಡಿಲುಗಳನ್ನು ಕೇಳಿ ಜನ ಭಯಗೊಂಡರು. ಇದರ ಜೊತೆಗೆ ಮಳೆಯ ರೌದ್ರಾವತಾರ ಕಂಡು ಎಲ್ಲರೂ ಬೆಚ್ಚಿದರು. ಸತತ ಎರಡು ಗಂಟೆ ಸುರಿದ ಮಳೆಯಿಂದ ಚರಂಡಿಗಳು, ತುಂಬಿ ರಸ್ತೆಯ ಮೇಲೆಲ್ಲಾ ನೀರು ಹರಿಯಿತು.

ಬಾಳೆ ತೋಟಕ್ಕೆ ಹಾನಿ
ಧರ್ಮಪುರ ವರದಿ: ಹೋಬಳಿಯಾದ್ಯಂತ ಮಂಗಳವಾರ ಇಡೀ ರಾತ್ರಿ ಸುರಿದ ಭಾರೀ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಿಂದಾಗಿ ಬಾಳೆ, ಅಡಿಕೆ ಹಾಗೂ ತೆಂಗಿನ ಮರಗಳು ಧರಗೆ ಉರುಳಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.ಹೋಬಳಿಯ ವಿ.ಕೆ ಗುಡ್ಡದ ಚಿಕ್ಕಮ್ಮ ಎಂಬುವವರ 12 ಎಕರೆಯಲ್ಲಿದ್ದ ಸುಮಾರು 8150 ಬಾಳೆಗಿಡಗಳು ಹಾನಿಯಾಗಿದ್ದು, ` 20 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ತೋಟಗಾರಿಕಾ ಸಹಾಯಕ ನಿರ್ದೇಶಕಿ ಸವಿತಾ ತಿಳಿಸಿದ್ದಾರೆ.

 ವಿ.ಕೆ.ಗುಡ್ಡದಲ್ಲಿ ಸಾಕಷ್ಟು ಹಾನಿಯಾಗಿದೆ. ಮೂಗಣ್ಣನವರ ಕೃಷ್ಣಪ್ಪನವರ 5ಸಾವಿರ ಬಾಳೆ ಹಾಗೂ ಅಡಿಕೆ ಮರಗಳು ನೆಲಕ್ಕುರುಳಿವೆ. ಪುಟ್ಟಪ್ಪನವರ 2 ಸಾವಿರ ಬಾಳೆಗಿಡ, ಹನುಮಂತಪ್ಪ 1,500 ಬಾಳೆಗಿಡ, ಓಂಕಾರಯ್ಯ 1,500 ಬಾಳೆಗಿಡ, ರಾಜಮ್ಮ 1,600 ಬಾಳೆಗಿಡ, ನರಸಿಂಹಪ್ಪ 1,550 ಬಾಳೆಗಿಡ ನೆಲಕ್ಕುರುಳಿವೆ. ಈಶ್ವರಗೆರೆಯ ರಾಮಚಂದ್ರಪ್ಪ, ಮದ್ದಿಹಳ್ಳಿ ದೇವರಾಜ ಅವರ ಬಾಳೆ ತೋಟಕ್ಕೆ ಹಾನಿಯಾಗಿದ್ದು, ಹೋಬಳಿಯಾದ್ಯಂತ ಸುಮಾರು ನಲವತ್ತು ಎಕರೆಯಲ್ಲಿ ಫಸಲಿಗೆ ಬಂದಿದ್ದ ಬಾಳೆ ತೋಟ ನೆಲಕ್ಕುರುಳಿದೆ ಎಂದು ತೋಟಗಾರಿಕಾ ಇಲಾಖೆ ತಿಳಿಸಿದ್ದಾರೆ.

ಮಾವು ಬೆಳೆಗಾರರ ಆತಂಕ: ಆಲಿಕಲ್ಲು ಮಳೆಯಿಂದಾಗಿ ಮಾವು ಬೆಳೆಗಾರರು ಆತಂಕದಲ್ಲಿದ್ದಾರೆ. ಆಲಿಕಲ್ಲುಗಳು ಮಾವಿನ ಕಾಯಿಗಳ ಮೇಲೆ ಬಿದ್ದಿರುವುದರಿಂದ ಕಾಯಿ ಕೊಳೆತು ಹೋಗುವ ಭೀತಿ ಎದುರಾಗಿದೆ. ಹರಿಯಬ್ಬೆ, ಧರ್ಮಪುರ, ಹೊಸಕೆರೆ, ಖಂಡೇನಹಳ್ಳಿ, ವಿ.ಕೆ.ಗುಡ್ಡದಲ್ಲಿ ಮಾವಿನಮರ ಹೇರಳವಾಗಿದ್ದು, ಮಿಡಿಗಾಯಿ ಹಂತದಲ್ಲಿವೆ. ಇದರಿಂದ ಕಾಯಿ ಕೊಳೆತು ಉದುರಬಹುದು ಎಂಬುದು ರೈತರ ಆತಂಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.