ADVERTISEMENT

ಮಹಲಿಂಗಪ್ಪ ಜಿ.ಪಂ. ನೂತನ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2011, 6:45 IST
Last Updated 10 ಫೆಬ್ರುವರಿ 2011, 6:45 IST

ಚಿತ್ರದುರ್ಗ: ಜಿಲ್ಲಾ ಪಂಚಾಯ್ತಿ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಸಿ. ಮಹಲಿಂಗಪ್ಪ ಮತ್ತು ಉಪಾಧ್ಯಕ್ಷರಾಗಿ ಜೆಡಿಎಸ್‌ನ ವಿಜಯಮ್ಮ ಎಂ. ಜಯಣ್ಣ ಆಯ್ಕೆಯಾಗಿದ್ದಾರೆ.ಹತ್ತುಹಲವು ಕಸರತ್ತುಗಳ ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದು, ಒಟ್ಟು 20 ತಿಂಗಳ ಮೊದಲ ಅವಧಿಯಲ್ಲಿ ತಲಾ 10 ತಿಂಗಳ ಅವಧಿಗೆ ಅಧಿಕಾರ ಹಂಚಿಕೊಳ್ಳುವ ಒಪ್ಪಂದ ಮಾಡಿಕೊಂಡಿವೆ.

ಒಟ್ಟು 34 ಸದಸ್ಯರ ಜಿ.ಪಂ.ನಲ್ಲಿ ಕಾಂಗ್ರೆಸ್ 16, ಬಿಜೆಪಿ 12 ಮತ್ತು ಜೆಡಿಎಸ್ 6 ಸ್ಥಾನಗಳನ್ನು ಗಳಿಸಿತ್ತು. ಸ್ಪಷ್ಟ ಬಹುಮತ ಪಡೆಯಲು 18 ಸ್ಥಾನಗಳನ್ನು ಪಡೆಯಬೇಕಾಗಿತ್ತು.

ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಮೈತ್ರಿ ಕುದುರಿಸುವ ಕುರಿತು ಮಂಗಳವಾರ ರಾತ್ರಿವರೆಗೂ ಮಾತುಕತೆಗಳು ನಡೆದು ಒಪ್ಪಂದಕ್ಕೆ ಬಂದಿದ್ದವು. ಬುಧವಾರ ಬೆಳಗಿನಜಾವದವರೆಗೆ ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳ ಆಯ್ಕೆ ಕುರಿತು ಕುತೂಹಲ ಮೂಡಿಸಿತ್ತು. ಅಂತಿಮವಾಗಿ ಕಾಂಗ್ರೆಸ್ ಪಕ್ಷ ಹೊಸಯಳನಾಡು ಕ್ಷೇತ್ರದ ಸದಸ್ಯ ಮಹಲಿಂಗಪ್ಪ ಅವರನ್ನು ಆಯ್ಕೆ ಮಾಡಿತು.

ಬುಧವಾರ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಮಹಲಿಂಗಪ್ಪ ಅವರು ಕಾಂಗ್ರೆಸ್ ಮತ್ತು ಜೆಡಿಎಸ್‌ನ 22 ಸದಸ್ಯರ ಬೆಂಬಲ ಪಡೆಯುವ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾದರು.

ಮಹಲಿಂಗಪ್ಪ ಅವರ ವಿರುದ್ಧ ಸ್ಪರ್ಧಿಸಿದ್ದ ಗುಡ್ಡದರಂಗವ್ವನಹಳ್ಳಿ ಕ್ಷೇತ್ರದ ಬಿಜೆಪಿ ಸದಸ್ಯೆ ಕೆಂಚಮ್ಮ 12 ಸದಸ್ಯರ ಬೆಂಬಲ ಮಾತ್ರ ಪಡೆದರು.ವಾಣಿವಿಲಾಸಪುರ ಕ್ಷೇತ್ರದ ವಿಜಯಮ್ಮ ಎಂ. ಜಯಣ್ಣ 22 ಸದಸ್ಯರ ಬೆಂಬಲ ಪಡೆಯುವ ಮೂಲಕ ಉಪಾಧ್ಯಕ್ಷರಾಗಿ ಆಯ್ಕೆಯಾದರು. ವಿಜಯಮ್ಮ ಅವರ ವಿರುದ್ಧ ಸ್ಪರ್ಧಿಸಿದ್ದ ಹಿರೇಹಳ್ಳಿ ಕ್ಷೇತ್ರದ ಬಿಜೆಪಿ ಸದಸ್ಯೆ ಆರ್. ಲಕ್ಷ್ಮೀದೇವಿ 12 ಸದಸ್ಯರ ಬೆಂಬಲ ಮಾತ್ರ ಪಡೆದರು.

ಸಮಗ್ರ ಅಭಿವೃದ್ಧಿ: ತಮಗೆ ದೊರೆಯುವ ಅಲ್ಪ ಅವಧಿಯಲ್ಲಿ ಕುಡಿಯುವ ನೀರು, ರಸ್ತೆ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಪ್ರಯತ್ನಿಸುತ್ತೇನೆ ಎಂದು ನೂತನ ಜಿ.ಪಂ. ಅಧ್ಯಕ್ಷ ಮಹಲಿಂಗಪ್ಪ ತಿಳಿಸಿದರು.

ಮೂಲತಃ ನಾನೊಬ್ಬ ಹೋರಾಟಗಾರ. ಗ್ರಾಮೀಣ ಪ್ರದೇಶದ ಸಮಸ್ಯೆಗಳ ಸಂಪೂರ್ಣ ಅರಿವು ನನಗಿದೆ. ಆದ್ದರಿಂದ, ಮೂಲಸೌಕರ್ಯಗಳ ಜತೆಗೆ ಅಲೆಮಾರಿ ಮತ್ತು ನೇಕಾರ ಜನಾಂಗದ ಬೆಳವಣಿಗೆ ಮತ್ತು ಶಿಕ್ಷಣಕ್ಕೆ ಆದ್ಯತೆ ನಿಡುತ್ತೇನೆ ಎಂದು ಮಹಲಿಂಗಪ್ಪ ತಿಳಿಸಿದರು.ಗ್ರಾಮೀಣ ಪ್ರದೇಶದಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತೇನೆ ಎಂದು ನೂತನ ಉಪಾಧ್ಯಕ್ಷೆ ವಿಜಯಮ್ಮ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.