ADVERTISEMENT

ಮಹಾನ್ ಮಾನವತಾವಾದಿಯ ಸ್ಮರಣೆ

ನೀತಿಸಂಹಿತೆ ಹಿನ್ನೆಲೆ; ಸಂವಿಧಾನ ಶಿಲ್ಪಿಯ 122ನೇ ಜಯಂತಿ ಸರಳ ಆಚರಣೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2013, 6:08 IST
Last Updated 15 ಏಪ್ರಿಲ್ 2013, 6:08 IST

ಚಿತ್ರದುರ್ಗ: ಮೀಸಲಾತಿ ಸೌಲಭ್ಯವನ್ನು ನಿಜವಾದ ಫಲಾನುಭವಿಗಳು ಅನುಭವಿಸುತ್ತಿಲ್ಲ. ಇದರಿಂದಾಗಿ ದಲಿತರು, ಹಿಂದುಳಿದವರ, ಅಲ್ಪಸಂಖ್ಯಾತರ ಏಳಿಗೆಯಾಗಿಲ್ಲ. ಶಿಕ್ಷಣ ಪಡೆದರೆ ಮಾತ್ರ ಸಂವಿಧಾನದ ಅಡಿಯಲ್ಲಿ ಕಲ್ಪಿಸಿರುವ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿದೆ ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ಅಭಿಪ್ರಾಯಪಟ್ಟರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಗವದ್ಗೀತೆ, ಕುರಾನ್, ಬೈಬಲ್ ಎಲ್ಲವನ್ನೂ ಸೇರಿಸಿ ಸಂವಿಧಾನ ರಚಿಸಲಾಗಿದೆ. ಅಂಬೇಡ್ಕರ್ ಅವರು ದಲಿತರು, ಹಿಂದುಳಿದ, ಆಲ್ಪಸಂಖ್ಯಾತರು, ದನಿ ಇಲ್ಲದವರಿಗೆ ನೆರವಾಗಲಿ ಎಂದು ಮೀಸಲಾತಿ ಸೌಲಭ್ಯ ಕಲ್ಪಿಸಿದರು. ಆದರೆ, ಮೀಸಲಾತಿಯನ್ನು ನಿಜವಾದ ಫಲಾನುಭವಿಗಳು ಪಡೆಯುತ್ತಿಲ್ಲ. ಜಾತಿಗಳಲ್ಲಿ ಹೊಂದಾಣಿಕೆಯಾಗದ ಹೊರತು ಮೀಸಲಾತಿ ಪಡೆಯಲು ಸಾಧ್ಯವಿಲ್ಲ ಎಂದು ನುಡಿದರು.

ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದಾಗ ತಾವು ಸುಲಭವಾಗಿ ಜಯಗಳಿಸುತ್ತಿದ್ದೆ. ಆದರೆ, 2008ರಲ್ಲಿ ಇದು ಪರಿಶಿಷ್ಟ ಪಂಗಡಕ್ಕೆ ಮೀಸಲಾದ ನಂತರ ಸಮಸ್ಯೆಗಳು ಆರಂಭವಾದವು. ಈಗ ಗೆಲ್ಲುವುದಕ್ಕೆ ಸ್ವಲ್ಪ ಕಷ್ಟ ಪಡಬೇಕಿದೆ. ಏಕೆಂದರೆ ಈಗ ನಮ್ಮವರು ನಮಗೆ ತೊಂದರೆ ನೀಡುತ್ತಿದ್ದಾರೆ. ಸಾಮಾನ್ಯ ಕ್ಷೇತ್ರವಾಗಿದ್ದಾಗ ಎಲ್ಲರೂ ನಮ್ಮವರಾಗಿದ್ದರು. ಮೀಸಲಾತಿ ಬಂದ ಮೇಲೆ ದೂರವಾಗಿದ್ದಾರೆ ಎಂದರು.

ಅಂಬೇಡ್ಕರ್ ಜಯಂತಿಯಂದು ಮಾಂಸ ಮಾರಾಟ ನಿಷೇಧಿಸಿರುವುದರಿಂದ ಹಲವರಿಗೆ ತೊಂದರೆಯಾಗುತ್ತದೆ. ಮಾಂಸ ಮಾರಾಟ ಮಾಡಿ ಜೀವನ ಸಾಗಿಸುವ ಹಲವು ಮಂದಿ ಇದ್ದಾರೆ. ಆದರೆ, ಗಾಂಧಿ ಜಯಂತಿಯಂದು ಮಾರಾಟಕ್ಕೆ ನಿಷೇಧ ಇರುವಾಗ ಅಂಬೇಡ್ಕರ್ ಜಯಂತಿಯಂದು ನಿಷೇಧ ಏಕೆ ಬೇಡ ಎನ್ನುವ ಪ್ರಶ್ನೆಯೂ ಉದ್ಭವವಾಗುತ್ತದೆ ಎಂದರು.

ಕಾಂಗ್ರೆಸ್ ಮುಖಂಡ ಕುಮಾರಗೌಡ ಮಾತನಾಡಿ, ರಾಜ್ಯದಲ್ಲಿ ಕುರುಬ, ಮಾದಿಗ ಹಾಗೂ ಮುಸ್ಲಿಂ ಜನಾಂಗಗಳಿಗೆ ರಾಜಕೀಯ ಪ್ರಾತಿನಿಧ್ಯ ದೊರೆಯುತ್ತಿಲ್ಲ ಎಂದು ದೂರಿದರು.

ಮುಖಂಡರಾದ ಮೆಹಬೂಬ ಪಾಷಾ ಮಾತನಾಡಿ, ಕೆಲವೊಂದು ಜನಾಂಗಗಳನ್ನು ಚುನಾವಣೆ ದೃಷ್ಟಿಯಿಂದ ಮಾತ್ರ ನೋಡಲಾಗುತ್ತಿದೆ. ಈ ಪ್ರವೃತ್ತಿ ಸಲ್ಲದು. ಈ ಜನಾಂಗಗಳಿಗೂ ರಾಜಕೀಯ ಪ್ರಾತಿನಿಧ್ಯ ನೀಡುವ ಮೂಲಕ ಮುಖ್ಯವಾಹಿನಿಗೆ ತರುವ ಯತ್ನವಾಗಬೇಕಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎ. ಸೇತುರಾಂ ಮಾತನಾಡಿದರು.

ಮಹಿಳಾ ಘಟಕದ ಮೀನಾಕ್ಷಿ, ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಪ್ರಕಾಶ್ ಮಾತನಾಡಿದರು.

ಮುಖಂಡರಾದ ತಿಪ್ಪೇಸ್ವಾಮಿ, ಬಾಲರಾಜ್, ಸಂಪತ್‌ಕುಮಾರ್, ಬಿ. ಷಬ್ಬೀರ್ ಅಹಮದ್,   ಶ್ರೀನಿವಾಸ, ಮರಳಾರಾಧ್ಯ, ಕಬಲಾ ಹುಸ್ಸೇನ್, ಡಿ.ಎನ್. ಮೈಲಾರಪ್ಪ ಹಾಜರಿದ್ದರು.

ಅಂಬೇಡ್ಕರ್ ಆಶಯ ಅಗತ್ಯ
ಹೊಸದುರ್ಗ: ಇಂದಿನ ಅತಂತ್ರ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರೂ ಉತ್ತಮ ಜೀವನ ರೂಪಿಸಿಕೊಳ್ಳಬೇಕಾದರೆ ಮಹಾನ್ ವ್ಯಕ್ತಿಗಳ ಆಶಯಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ ಎಂದು ಉಪನ್ಯಾಸಕ ಅಶೋಕ್ ಕುಮಾರ್ ತಿಳಿಸಿದರು.

ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಿಶ್ವಮಾನವ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಅಂಬೇಡ್ಕರ್ ಅವರ 122ನೇ ಜನ್ಮ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಪ್ರಾಂಶುಪಾಲ ಪ್ರೊ.ಕೆ.ಬಿ. ವೆಂಕಟರಮಣರೆಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಡಾ.ಹನುಮಂತ ರಾಯ್, ಎ. ಮೋಹನ್, ಎಸ್.ಬಿ. ಮಂಜುನಾಥ್, ಕೆ. ಭೈರಪ್ಪ, ಟಿ. ಜಯಪ್ಪ, ಈರಣ್ಣ, ವೆಂಕಟೇಶ್, ನಾಗರಾಜು ಇದ್ದರು.

ಪಾವಗಡ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು. ಎಚ್.ಎಸ್. ಸವಿತಾ ಸ್ವಾಗತಿಸಿದರು. ಡಾ.ನಾಗವರ್ಮ ವಂದಿಸಿದರು.

ಜಾತಿಗೆ ಸೀಮಿತವಾಗದ ವ್ಯಕ್ತಿ
ಭರಮಸಾಗರ: ಡಾ.ಅಂಬೇಡ್ಕರ್ ಯಾವುದೇ ಒಂದು ಜಾತಿ, ವರ್ಗಕ್ಕೆ ಸೀಮಿತರಾದ ವ್ಯಕ್ತಿಯಲ್ಲ. ಶಾಂತಿ, ಸಹಬಾಳ್ವೆ, ಸಮಾನತೆಯಿಂದ ಕೂಡಿದ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಮಹಾನ್ ಮಾನವತಾವಾದಿ ಎಂದು ಪಿಡಿಒ ದೀಪಾ ಹೇಳಿದರು.

ಹೋಬಳಿಯ ಕೋಗುಂಡೆ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ  ಭಾನುವಾರ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಂತರ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಹೂವಿನಹಾರ ಹಾಕಿ ದೀಪ ಬೆಳಗಿ ಗೌರವ ಸಲ್ಲಿಸಲಾಯಿತು. ಗ್ರಾಮ ಪಂಚಾಯ್ತಿ ಸಿಬ್ಬಂದಿ, ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.