ADVERTISEMENT

ಮಹಿಳಾ ಹಮಾಲರಿಗೆ ₨ 2 ಲಕ್ಷ ವೆಚ್ಚದ ಮನೆ

ಫಲಾನುಭವಿಗಳ ಸಭೆಯಲ್ಲಿ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2013, 5:44 IST
Last Updated 25 ಡಿಸೆಂಬರ್ 2013, 5:44 IST

ಚಿತ್ರದುರ್ಗ: ‘ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಹಿಳಾ ಹಮಾಲಿಗಳಿಗೆ  ಮನೆ ನಿರ್ಮಾಣಕ್ಕಾಗಿ ವಾಜಪೇಯಿ ನಗರ ವಸತಿ ಯೋಜನೆ ಅಡಿಯಲ್ಲಿ 125 ನಿವೇಶನಗಳು ಮಂಜೂರಾಗಿದ್ದು, ಆ ನಿವೇಶನಗಳಲ್ಲಿ ₨ 2 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಿ ಕೊಡಲಾಗುತ್ತಿದೆ’ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.

ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಮಂಗಳವಾರ ಕರೆದಿದ್ದ ಸಭೆಯಲ್ಲಿ ಫಲಾನುಭವಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ಮನೆ ನಿರ್ಮಾಣಕ್ಕಾಗಿ ಸರ್ಕಾರ ₨ 1.20 ಲಕ್ಷ ಸಹಾಯ ಧನ ನೀಡುತ್ತದೆ. ₨ 50 ಸಾವಿರ ಮೊತ್ತವನ್ನು ನಗರಸಭೆಯ ಆಯುಕ್ತರು ಬ್ಯಾಂಕ್ ನಿಂದ ಸಾಲ ಕೊಡಿಸುತ್ತಾರೆ. ಫಲಾನುಭವಿಗಳು ₨ 30 ಸಾವಿರ ಮೊತ್ತವನ್ನು ಠೇವಣಿಯಾಗಿ ಬ್ಯಾಂಕ್ ಗೆ ಪಾವತಿಸಬೇಕು’ ಎಂದು ವಿವರಿಸಿದರು.

ಉತ್ತಮ ಮನೆ ಕಟ್ಟಿಕೊಳ್ಳಿ: ‘ಸರ್ಕಾರ ನೀಡುವ ಧನ ಸಹಾಯಕ್ಕೆ ಮತ್ತಷ್ಟು ಹಣವನ್ನು ಸೇರಿಸಿ ಇನ್ನೂ ಉತ್ತಮವಾಗಿ ಮನೆಯನ್ನು ನಿರ್ಮಿಸಿಕೊಳ್ಳಬಹುದು. ಇದಕ್ಕೆ ಸರ್ಕಾರದಿಂದ ಯಾವುದೇ ಅಭ್ಯಂತರವಿಲ್ಲ. ಆದರೆ ₨ 30 ಸಾವಿರ ಠೇವಣಿ ಮಾತ್ರ ಕಡ್ಡಾಯವಾಗಿ ಬ್ಯಾಂಕ್‌ಗೆ ಪಾವತಿಸಬೇಕು’ ಎಂದರು.

ಈಗ ನಿರ್ಮಿಸಲು ಉದ್ದೇಶಿಸಿರುವ ಪ್ರದೇಶಕ್ಕೆ ಶಾಂತಿಸಾಗರದಿಂದ ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ದೀಪ, ರಸ್ತೆ, ಚರಂಡಿ ಎಲ್ಲ ರೀತಿಯ ಮೂಲಸೌಕರ್ಯ ಕಲ್ಪಿಸುವುದರ ಜೊತೆಯಲ್ಲಿ ಸರ್ಕಾರಿ ಶಾಲೆಯನ್ನು ಇಲ್ಲಿ ತೆರೆಯಲಾಗುತ್ತದೆ ಎಂದು ಶಾಸಕರು ಭರವಸೆ ನೀಡಿದರು.

‘125 ಮನೆಗಳ ವಿನ್ಯಾಸವೂ ಒಂದೇ ರೀತಿಯಲ್ಲಿದ್ದು, ಲೇ ಔಟ್ ಸುಂದರವಾಗಿ ಕಾಣಿಸಬೇಕೆಂಬ ಉದ್ದೇಶದಿಂದ ಮನೆ ನಿರ್ಮಾಣದ ಜವಾಬ್ದಾರಿಯನ್ನು ಭೂ ಸೇನಾ ನಿಗಮಕ್ಕೆ ವಹಿಸಿಕೊಡಲಾಗುತ್ತಿದೆ. ಕಾಮಗಾರಿ ನಡೆಯುವ ವೇಳೆ ಫಲಾನುಭವಿಗಳು ಖುದ್ದಾಗಿ ಹಾಜರಿದ್ದು, ಉತ್ತಮ ಮನೆ ನಿರ್ಮಾಣಕ್ಕೆ ಸಹಕಾರ ನೀಡಬೇಕು’ ಎಂದು ಶಾಸಕರು ಕಿವಿಮಾತು ಹೇಳಿದರು.

ಖಾತೆ ಪ್ರಕ್ರಿಯೆ ಪೂರ್ಣ: ‘ಈಗಾಗಲೇ ನಿವೇಶನವನ್ನು ಮಹಿಳಾ ಹಮಾಲಿಗಳಿಗೆ ನೀಡಲಾಗಿದೆ ಈಗಾಗಲೇ ಅಂಥವರಿಗೆ ನಗರಸಭೆಯಲ್ಲಿ ಖಾತೆಯನ್ನು ಮಾಡಿಕೊಡಲಾಗಿದೆ . ಒಟ್ಟು 133 ಮಂದಿ ಫಲಾನುಭವಿಗಳಿದ್ದು, ಅದರಲ್ಲಿ ಈ ತಂಡದಲ್ಲಿ 125 ಮಂದಿಗೆ ಮನೆ ನಿರ್ಮಿಸಿ ಕೊಡಲಾಗುತ್ತಿದೆ.

ಮುಂದಿನ ವರ್ಷ ಉಳಿದ ಎಂಟು ಮಂದಿಗೆ ಕೊಡಲಾಗುತ್ತದೆ’ ಎಂದು ಪೌರಾಯುಕ್ತ ರವೀಂದ್ರ ಬಿ. ಮಲ್ಲಾಪುರ ತಿಳಿಸಿದರು.

‘ಒಟ್ಟು ಆರು ಚದರ ಅಡಿ ಅಳತೆಯಲ್ಲಿ ₨ ೨ ಲಕ್ಷದಲ್ಲಿ ಒಂದು ಪಡಸಾಲೆ (ಹಾಲ್), ಒಂದು ಮಲಗುವ ಕೊಠಡಿ (ಬೆಡ್ ರೂಂ), ಅಡುಗೆ ಮನೆ, ಶೌಚಾಲಯ ವ್ಯವಸ್ಥೆಯುಳ್ಳ ಮಾದರಿ ಮನೆ ನಿರ್ಮಿಸಲಾಗುತ್ತದೆ. ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಸ್ಥಳಾವಕಾಶ ವಿರುತ್ತದೆ. ಮನೆ ನಿರ್ಮಾಣಕ್ಕಾಗಿ ವಿವಿಧ ನಮೂನೆಯ ನೀಲನಕ್ಷೆಗಳನ್ನು ಸಿದ್ಧಪಡಿಸಲಾಗಿದೆ’ ಎಂದು ಆಯುಕ್ತರು ವಿವರಿಸಿದರು.

ಬ್ಯಾಂಕ್ ಖಾತೆಗೆ ಹಣ: ‘ಎಲ್ಲ ಫಲಾನುಭವಿಗಳ ಬ್ಯಾಂಕ್ ಖಾತೆಯನ್ನು ತೆರೆಯಲಾಗುತ್ತದೆ. ಫಲಾನುಭವಿಗಳು ಖಾತೆಗೆ ತಮ್ಮ ಪಾಲಿನ ₨ ೩೦ ಸಾವಿರ ಹಣವನ್ನು ತುಂಬಬೇಕು. ನಂತರ ಬ್ಯಾಂಕ್ ₨ ೫೦ ಸಾವಿರ ಸಾಲ ನೀಡಿ, ಸರ್ಕಾರದ ಹಣವೂ ಸೇರಿದಂತೆ ₨ 2 ಲಕ್ಷವನ್ನು ಬಿಡುಗಡೆ ಮಾಡಲಿದೆ’ ಎಂದು ವಿವರಿಸಿದರು.

ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ ಎಸ್.ಎಸ್.ಬೀರಾದಾರ, ಸಹಾಯಕ ಅಭಿಯಂತರ ರಂಗನಾಥ್, ಪರಿಸರ ಎಂಜಿನಿಯರ್ ಸ್ನೇಹಾ, ಸಮುದಾಯ ಸಂಘಟನಾ ಕಾರ್ಯದರ್ಶಿ ಬಿ.ಆರ್.ಮಂಜುಳ, ರಮೇಶ್, ಭೂಸೇನಾ ನಿಗಮದ  ಉಪ ನಿರ್ದೇಶಕ ನಾಗರಾಜ್ ಹಾಜರಿದ್ದರು.

ಹಂತ ಹಂತವಾಗಿ ಬೇಡಿಕೆ ಪೂರೈಕೆ
ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ನಗರಕ್ಕೆ ೧೪೫೦ ಮನೆಗಳು ಮಂಜೂರಾಗಿವೆ. ಅರ್ಹರಿಗೆ ಆ ಮನೆಗಳನ್ನು ನೀಡಲಾಗುತ್ತದೆ. ಶೀಘ್ರದಲ್ಲೇ ವಸತಿ ಸಚಿವ ಅಂಬರೀಷ್ ಅವರನ್ನು ಕೆರೆಸಿ ವಿತರಣೆ ಮಾಡುವ ಉದ್ದೇಶ ಇಟ್ಟುಕೊಳ್ಳಲಾಗಿದೆ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ವಿವರಿಸಿದರು.

೧೯೯೫–-೯೬ರಲ್ಲಿ ಪುರುಷ ಎಪಿಎಂಸಿ ಹಮಾಲಿಗಳಿಗೂ ೧೧೪ ಮನೆಗಳನ್ನು ನಿರ್ಮಿಸಿಕೊಡಲಾಗಿತ್ತು. ಈಗ ಮಹಿಳೆಯರ ಸರದಿ. ಎಪಿಎಂಸಿಯಲ್ಲಿ ಇತ್ತೀಚೆಗೆ ಸೇರಿಕೊಂಡಿರುವ ಪರವಾನಗಿ ರಹಿತ ಹಮಾಲಿಗಳು ನಿವೇಶನ ಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಮುಂದೆ ಅವರ ಬೇಡಿಕೆಯನ್ನು ಪರಿಶೀಲಿಸುವುದಾಗಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT