ADVERTISEMENT

ಮಾಂಸ ಮಾರಾಟ ನಿರಾತಂಕ: ವೇದಿಕೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2012, 4:40 IST
Last Updated 3 ಅಕ್ಟೋಬರ್ 2012, 4:40 IST

ಹಿರಿಯೂರು: ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಮಾಂಸ ಮಾರಾಟ ನಿಷೇಧಿಸಿದ್ದರೂ ಮಂಗಳವಾರ ನಗರದ ಮಾಂಸ ಮಾರುಕಟ್ಟೆಯಲ್ಲಿ ಬೆಳಗಿನಿಂದಲೇ ಮಾಂಸ ಮಾರಾಟ ಮಾಡುತ್ತಿದ್ದುದು ಕಂಡುಬಂದಿತು.

ಸ್ಥಳಕ್ಕೆ ವಂದೇಮಾತರಂ ಜಾಗೃತಿ ವೇದಿಕೆ ಪದಾಧಿಕಾರಿಗಳು ತೆರಳಿ ಪ್ರತಿಭಟನೆ ನಡೆಸಿ, ಮಾಂಸದ ಅಂಗಡಿಗಳನ್ನು ಬಂದ್ ಮಾಡಿಸಿದರು.

ಗಾಂಧೀಜಿಗೆ ಗೌರವ ತಂದುಕೊಡುವಲ್ಲಿ ಪುರಸಭೆಯವರು ಹಾಗೂ ತಾಲ್ಲೂಕು ಆಡಳಿತ ನಿರ್ಲಕ್ಷ್ಯ ವಹಿಸಿದೆ. ನಗರದ ಆಜಾದ್ ಬಡಾವಣೆಯಲ್ಲಿ ಗೋಹತ್ಯೆ ಮಾಡಲಾಗುತ್ತಿತ್ತು. ನಗರದಲ್ಲಿ ಮಾಂಸ ಮಾರಾಟಕ್ಕೆಂದೇ ಪ್ರತ್ಯೇಕ ಮಾರುಕಟ್ಟೆಯಿದ್ದರೂ ಆಜಾದ್ ಬಡಾವಣೆಯಲ್ಲಿ ಅಕ್ರಮವಾಗಿ 9 ಮಾಂಸದ ಅಂಗಡಿಗಳಿವೆ. ಪುರಸಭೆ ಆಡಳಿತ ನಡೆಸುವವರು ಪರೋಕ್ಷವಾಗಿ ಅವರಿಗೆ ಬೆಂಬಲ ನೀಡುತ್ತಿದ್ದಾರೆ. ಮಾಂಸ ಮಾರಾಟ ಮಾಡುವ ಮೂಲಕ ರಾಷ್ಟ್ರಪಿತನನ್ನು ಅವಮಾನಿಸಲಾಗಿದೆ ಎಂದು ಪದಾಧಿಕಾರಿಗಳು ಆರೋಪಿಸಿದರು.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಾಂಸದ ಅಂಗಡಿಗಳನ್ನು ಬಂದ್ ಮಾಡಿಸಿದರು.
ನಂತರ ವೇದಿಕೆ ಕಾರ್ಯಕರ್ತರು, ಪುರಸಭೆಯ ನಿರ್ಲಕ್ಷ್ಯದ ವಿರುದ್ಧ ಪುರಸಭೆ ಎದುರು ಪ್ರತಿಭಟನೆ ನಡೆಸಿದರು.

ವಿ. ಅರುಣ್‌ಕುಮಾರ್, ಮಸ್ಕಲ್ ಪರಮೇಶ್, ಎಂ.ಎಲ್. ಗಿರಿಧರ್, ಎಚ್. ರಂಗಸ್ವಾಮಿ, ತಿಪ್ಪೇರುದ್ರಸ್ವಾಮಿ, ಮಂಜುನಾಥ್, ದಿನೇಶ್, ವೀರೇಶ್, ದಾದಾಪೀರ್, ತಿಪ್ಪೇಸ್ವಾಮಿ, ಜಹಂಗೀರ್, ಸಿಕಂದರ್, ಬಿ. ದರ್ಶನ್, ಮುರಳಿರಾವ್, ಮೋಹನ್‌ಕುಮಾರ್, ಮಂಜು ಪಾಳೇಗಾರ್, ಅನಿಲ್‌ಕುಮಾರ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಗಾಂಧಿ ಜಯಂತಿಯಂದೂ ಮಾಂಸ ಮಾರಾಟ!
ಚಿಕ್ಕಜಾಜೂರು: ಸರ್ಕಾರ ಗಾಂಧಿ ಜಯಂತಿಯನ್ನು ಅ. 2 ಅನ್ನು ಅಂತರರಾಷ್ಟ್ರೀಯ ಅಹಿಂಸಾ ದಿನವೆಂದು ಘೋಷಿಸಿದೆ. ಅಂದು ಮಾಂಸ ಮಾರಾಟ ಹಾಗೂ ಪ್ರಾಣಿವಧೆ ನಿಷೇಧಿಸಲಾಗಿದೆ. ಇದನ್ನು ಉಲ್ಲಂಘಿಸಿ, ಇಲ್ಲಿನ ಪ್ರಮುಖ ರಸ್ತೆಯಲ್ಲಿರುವ ಮಾಂಸದ ಅಂಗಡಿಯೊಂದರಲ್ಲಿ ಕುರಿ ಮಾಂಸವನ್ನು ಮುಕ್ತವಾಗಿ ಮಾರಾಟ ಮಾಡುತ್ತಿದ್ದುದು ಕಂಡುಬಂದಿತು.

ಮಂಗಳವಾರ ಮಾಂಸಾಹಾರ ಸೇವಿಸುವವರು ಹೆಚ್ಚು. ಹೀಗಾಗಿ, ಗ್ರಾಮದ ಹಾಗೂ ಸುತ್ತಲಿನ ಗ್ರಾಮಗಳ ಜನರು ಅಂಗಡಿಗೆ ಮುಗಿಬಿದ್ದು, ಮಾಂಸ ತೆಗೆದುಕೊಂಡು ಹೋಗುತ್ತಿದ್ದುದು ಸಾಮಾನ್ಯವಾಗಿತ್ತು.
ನಂತರ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಅಂಗಡಿ ಮುಚ್ಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.