ADVERTISEMENT

ಮಾಜಿ ಸಚಿವ ತಿಪ್ಪೇಸ್ವಾಮಿಗೆ ‘ಮಹರ್ಷಿ ವಾಲ್ಮೀಕಿ ಪ್ರಶಸ್ತಿ’

ಇಂದು ಬೆಂಗಳೂರಿನ ವಿಧಾನಸೌಧದ ಬಾಂಕ್ವೆಟ್‌ ಹಾಲ್‌ನಲ್ಲಿ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2017, 7:03 IST
Last Updated 5 ಅಕ್ಟೋಬರ್ 2017, 7:03 IST

ಚಿತ್ರದುರ್ಗ: ಹಿರಿಯ ರಾಜಕಾರಣಿ ಮಾಜಿ ಸಚಿವ, ವಾಲ್ಮೀಕಿ ಗುರುಪೀಠ ಸಂಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ, ಚಳ್ಳಕೆರೆಯ ಮಾಜಿ ಸಚಿವ ತಿಪ್ಪೇಸ್ವಾಮಿ ಅವರನ್ನು ಪ್ರಸಕ್ತ ಸಾಲಿನ ರಾಜ್ಯಮಟ್ಟದ ‘ಮಹರ್ಷಿ ವಾಲ್ಮೀಕಿ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ.

ನಾಲ್ಕು ದಶಕಗಳ ರಾಜಕೀಯ ಹೋರಾಟ, ಸಮುದಾಯಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿರುವ ರಾಜ್ಯ ಸರ್ಕಾರ, ತಿಪ್ಪೇಸ್ವಾಮಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಹುಟ್ಟು, ಶಿಕ್ಷಣ, ಜೀವನ: ಮಾಜಿ ಸಚಿವ ತಿಪ್ಪೇಸ್ವಾಮಿ, ಚಳ್ಳಕೆರೆ ತಾಲ್ಲೂಕಿನ ಕಾಟಪ್ಪನಹಟ್ಟಿಯವರು. ಕಾರ್ಖಾನೆ ತಿಪ್ಪಯ್ಯ ಮತ್ತು ಬೋರಮ್ಮ ಎಂಬುವವರ ಐದನೇ ಪುತ್ರರು. 1942ರಲ್ಲಿ ಜನಿಸಿದ ಇವರು, ಪ್ರಾಥಮಿಕ ಶಿಕ್ಷಣವನ್ನು ಕಾಟಪ್ಪನಹಟ್ಟಿಯಲ್ಲಿ ಮುಗಿಸಿ, ಎಸ್‌ಎಸ್‌ಎಲ್‌ಸಿ ನಂತರ ತಂದೆಯವರ ಮೂಲ ಕಸುಬಾದ ಮಂಡಕ್ಕಿ ಭಟ್ಟಿಯಲ್ಲಿ ಕೆಲಸ ನಿರ್ವಹಿಸಿದರು. ಕಲೆ ಹಾಗೂ ಕ್ರೀಡೆಯ ಬಗ್ಗೆ ಹೆಚ್ಚು ಆಸಕ್ತರಾದ ಇವರು ಕಬ್ಬಡಿ ತಂಡವನ್ನು ಕಟ್ಟಿ ಅದರ ನಾಯಕರಾಗಿ ಅನೇಕ ವರ್ಷಗಳ ಕಾಲ ಆಟ ಪ್ರದರ್ಶಿಸಿದರು. ನಾಟಕಗಳ ಬಗ್ಗೆ ಒಲವಿದ್ದ ಅವರು ಸ್ನೇಹಿತರೊಡನೆ ಸೇರಿ ಕಾಟಪ್ಪನಹಟ್ಟಿಯಲ್ಲಿ ಎರಡ್ಮೂರು ನಾಟಕವನ್ನು ಪ್ರದರ್ಶಿಸಿದ್ದಾರೆ.

ADVERTISEMENT

ರಾಜಕೀಯ ಪ್ರವೇಶ: 1980ರಲ್ಲಿ ಚಳ್ಳಕೆರೆ ಪುರಸಭಾ ಅಧ್ಯಕ್ಷರಾಗಿ ರಾಜಕೀಯ ಪ್ರವೇಶಿಸಿದ ತಿಪ್ಪೇಸ್ವಾಮಿ ಅವರು, 1985ರಲ್ಲಿ ಪ್ರಥಮ ಬಾರಿಗೆ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದರು. ತಮ್ಮ ಅಧಿಕಾರಾವಧಿಯಲ್ಲಿ ಮುನ್ಸಿಪಲ್ ಕಾಲೇಜನ್ನು ಸರ್ಕಾರಿ ಕಾಲೇಜನ್ನಾಗಿ ಪರಿವರ್ತಿಸಿದರು. ಸರ್ಕಾರಿ ಅನುದಾನ ಕೊಡಿಸಿದರು. 

ಎಚ್.ಡಿ. ದೇವೇಗೌಡರ ನೇತೃತ್ವದ ಸರ್ಕಾರದಲ್ಲಿ ಅಬಕಾರಿ ಹಾಗೂ ಜೆ.ಎಚ್.ಪಟೇಲ್ ಆಡಳಿತದಲ್ಲಿ ಸಣ್ಣ ನೀರಾವರಿ ಸಚಿವರಾಗಿದ್ದರು. ತಮ್ಮ ಅಧಿಕಾರಾವಧಿಯಲ್ಲಿ ವಾಲ್ಮೀಕಿ ಸಮಾಜದ ಗುರು ಪುಣ್ಯಾನಂದಪುರಿ ಸ್ವಾಮೀಜಿಯೊಂದಿಗೆ ರಾಜ್ಯಾದ್ಯಂತ ಪ್ರವಾಸ ಮಾಡಿ ನಾಯಕ ಸಮುದಾಯ ವನ್ನು ಸಂಘಟಿಸಿದರು. ಎಲ್ಲರ ಸಹಕಾರ ಪಡೆದು ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ರಾಜನಹಳ್ಳಿಯಲ್ಲಿ 'ಶ್ರೀ ವಾಲ್ಮೀಕಿ ಗುರುಪೀಠ' ಸ್ಥಾಪಿಸಲು ಶ್ರಮಿಸಿದ್ದಾರೆ.

ನಾಯಕ ಸಮುದಾಯ ಸಂಘಟನೆ: ಹಿಂದುಳಿದ ವರ್ಗಗಳ ಗುಂಪಿನಲ್ಲಿದ್ದ ನಾಯಕ, ವಾಲ್ಮೀಕಿ, ಬೇಡ ಹಾಗೂ ಇತರೆ ಪರ್ಯಾಯ ಪದ ಹೊಂದಿರುವ ಈ ಸಮುದಾಯವನ್ನು ಪರಿಶಿಷ್ಟ ಪಂಗಡದ ಜನಾಂಗಕ್ಕೆ ಸೇರಿಸಲು ಶ್ರಮಿಸಿದ್ದಾರೆ. 1999ರಲ್ಲಿ ಅಬಕಾರಿ ಸಚಿವರಾಗಿದ್ದ ಸಂದರ್ಭದಲ್ಲಿ ಪ್ರತ್ಯೇಕವಾಗಿ ಈ ಜನಾಂಗದ ಸರ್ವತೋಮುಖ ಅಭಿವೃದ್ಧಿಗಾಗಿ ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯವನ್ನು ಮಾಡಲು ಕಾರಣಕರ್ತರಾಗಿದ್ದಾರೆ. ರಾಮಕೃಷ್ಣ ಹೆಗಡೆಯವರ ಆಡಳಿತದಲ್ಲಿ ಎಸ್ಟಿ ಜನಾಂಗದ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನೇರ ನೇಮಕ ಮೂಲಕ ಗೆಜೆಟೆಡ್ ಹುದ್ದೆ ದೊರೆಯುವಂತೆ ಮಾಡಿದರು.

ಚಳ್ಳಕೆರೆ ತಾಲ್ಲೂಕಿಗೆ ವಿವಿ ಸಾಗರದಿಂದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಶ್ರಮಿಸಿದ್ದಾರೆ. ಅಲ್ಲದೆ, ಪರಿಶಿಷ್ಟ ಪಂಗಡದವರೇ ಹೆಚ್ಚಾಗಿರುವ ಚಳ್ಳಕೆರೆ ತಾಲ್ಲೂಕು ದೇವರಮರಿಕುಂಟೆ ಗ್ರಾಮದಲ್ಲಿ ವಾಲ್ಮೀಕಿ ಪ್ರೌಢಶಾಲೆ ಹಾಗೂ ಕಾಟಪ್ಪನಹಟ್ಟಿಯಲ್ಲಿ ಕಾಟಮಲಿಂಗೇಶ್ವರ ಪ್ರೌಢಶಾಲೆ ಸ್ಥಾಪಿಸಿದ್ದಾರೆ. ಚಳ್ಳಕೆರೆ ನಗರದಲ್ಲಿ ನಾಯಕರ ಹಾಸ್ಟಲ್ ಮತ್ತು ವಾಲ್ಮೀಕಿ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಪ್ರಧಾನ ಪಾತ್ರವಹಿಸಿದ್ದರು. ಕರ್ನಾಟಕ ಲೋಕಸೇವಾ ಆಯೋಗದಲ್ಲಿ ನಾಯಕ ಜನಾಂಗಕ್ಕೆ ಪ್ರಾತಿನಿಧ್ಯ ಕೊಡಿಸಿದರು.

ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ವೇಳೆಯಲ್ಲಿ ಅವರ ಮನ ಒಲಿಸಿ ಸರ್ಕಾರದಿಂದಲೇ ವಾಲ್ಮೀಕಿ ಜಯಂತಿ ಆಚರಿಸುವಂತೆ ಮಾಡಿದರು. ಚಿತ್ರದುರ್ಗ ಜಿಲ್ಲೆಯಲ್ಲಿ ವಾಲ್ಮೀಕಿ ಬ್ಯಾಂಕ್, ವೀರಮದಕರಿ ಕಂಚಿನ ಪ್ರತಿಮೆ ಸ್ಥಾಪನೆ, ಮದಕರಿ ವೃತ್ತ ನಿರ್ಮಾಣದ ರೂವಾರಿಯಾದರು. ಪತ್ನಿ ವಿಮಲಮ್ಮ, ಪುತ್ರ ಕೆ.ಟಿ.ಕುಮಾರಸ್ವಾಮಿ, ಪುತ್ರಿ ಕೆ.ಟಿ.ಭವ್ಯ ಅವರನ್ನೊಳಗೊಂಡ ಪುಟ್ಟ ಕುಟುಂಬ ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.