ADVERTISEMENT

ಮಾದರಿ ಕ್ಷೇತ್ರಕ್ಕೆ ಸತತ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 22 ಜನವರಿ 2011, 6:25 IST
Last Updated 22 ಜನವರಿ 2011, 6:25 IST

ಚಳ್ಳಕೆರೆ:ಆಂಧ್ರ ಹಾಗೂ ಕರ್ನಾಟಕದ ನಿಕಟ ಸಂಪರ್ಕ ಹೊಂದಿರುವ ಜಾಜೂರು ಜಿ.ಪಂ. ಕ್ಷೇತ್ರ ಸಮಸ್ಯೆಗಳ ಆಗರವಾಗಿದೆ.
ಈ ಭಾಗದ ಜನತೆಯ ಆಶೋತ್ತರಗಳಿಗೆ ಸ್ಪಂದಿಸಿ ರಸ್ತೆ, ಶಾಲಾ ಕೊಠಡಿಗಳ ದುರಸ್ತಿ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳುವುದಾಗಿ ಈ ಕ್ಷೇತ್ರದ ಸದಸ್ಯ ಜೆ.ಪಿ. ಜಯಪಾಲಯ್ಯ ಹೇಳುತ್ತಾರೆ.‘ಪ್ರಜಾವಾಣಿ’ ಜತೆಗೆ ಅಭಿವೃದ್ಧಿಯ ಕನಸುಗಳನ್ನು ಅವರು ಹಂಚಿಕೊಂಡಿದ್ದಾರೆ.

* ಕೃಷಿ ಪದವೀಧರರಾಗಿರುವ ನೀವು ರಾಜಕೀಯ ಆಯ್ದುಕೊಂಡಿದ್ದು ಏಕೆ?
ವಿದ್ಯಾರ್ಥಿ ಜೀವನದಲ್ಲಿ ಚಳವಳಿಗಳಲ್ಲಿ ತೊಡಗಿಸಿಕೊಂಡ ನನಗೆ ಜೀವನದಲ್ಲಿ ರಾಜಕೀಯವೇ ಆಯ್ಕೆಯ ಕ್ಷೇತ್ರವಾಗಿತ್ತು. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆಯುವಾಗಲೇ ಹೋರಾಟದ ಮುಂಚೂಣಿಯಲ್ಲಿದ್ದೆ. ಸರ್ಕಾರಿ ಕೆಲಸಕ್ಕೆ ಹೋಗಬಹುದಿತ್ತು. ಆದರೆ, ರಾಜಕೀಯವು ಆಸಕ್ತಿಯ ಕ್ಷೇತ್ರ ಆಗಿರುವುದರಿಂದ ಸಹಜವಾಗಿಯೇ ಈ ಕ್ಷೇತ್ರಕ್ಕೆ ಬಂದೆ. ನನ್ನನ್ನು ಆಯ್ಕೆ ಮಾಡಿ ಕಳುಹಿಸಿದ ಜನತೆಗೆ ಕೈಲಾದಷ್ಟು ಕೆಲಸ ಮಾಡುವ ಉದ್ದೇಶವಿಟ್ಟುಕೊಂಡೇ ಚುನಾವಣೆಗೆ ಸ್ಪರ್ಧಿಸಿದ್ದೆ. ಜಾಜೂರು ಜಿ.ಪಂ. ಕ್ಷೇತ್ರವನ್ನು ಇಡೀ ಜಿಲ್ಲೆಗೆ ಮಾದರಿ ಕ್ಷೇತ್ರ ಮಾಡಬೇಕು ಎನ್ನುವುದೇ ನನ್ನ ಗುರಿ. ನಂತರವೇ ಮುಂದಿನ ಹಾದಿ.

 * ಕ್ಷೇತ್ರದ ಸಮಸ್ಯೆಗಳು ಏನು?

ಪ್ರಮುಖವಾಗಿ ಶಾಲಾ ಕೊಠಡಿಗಳು ದುಸ್ಥಿತಿಯಲ್ಲಿವೆ. ಆಂಧ್ರದ ಗಡಿ ಭಾಗದಲ್ಲಿರುವುದರಿಂದ ಕನ್ನಡ ಶಾಲೆಗಳ ಕಡೆಗೆ ಹೆಚ್ಚು ಗಮನ ಹರಿಸುವ ನಿಟ್ಟಿನಲ್ಲಿ ಕೊಠಡಿಗಳ ದುರಸ್ತಿಗಾಗಿ ಶ್ರಮಿಸುವೆ.ನನ್ನ ಕ್ಷೇತ್ರ ವ್ಯಾಪ್ತಿಯ ಕೆಲವು ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ವೇದಾವತಿ ನದಿ ಈ ಭಾಗದಲ್ಲಿ ಹರಿಯುತ್ತಿದ್ದರೂ ಈ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ. ಈ ವಿಷಯದ ಬಗ್ಗೆ ಹೆಚ್ಚು ಗಮನ ನೀಡಲಾಗುವುದು. ಇನ್ನೂ ತಾಲ್ಲೂಕಿನಿಂದ ದೂರದಲ್ಲಿರುವ ಓಬಳಾಪುರ, ತಿಪ್ಪೆರೆಡ್ಡಿಹಳ್ಳಿ ರಸ್ತೆ ಹದಗೆಟ್ಟಿವೆ. ಚುನಾವಣೆ ಸಮಯದಲ್ಲಿ ಈ ರಸ್ತೆಯಲ್ಲಿ ವಾಹನಗಳಲ್ಲಿ ಪ್ರಚಾರಕ್ಕೆ ಹೋಗುವ ಸಂದರ್ಭದಲ್ಲಿಯೇ ನನ್ನನ್ನು ಕಾಡಿದ ಮೊದಲ ಸಮಸ್ಯೆ ಇದಾಗಿತ್ತು.

* ಕ್ಷೇತ್ರದಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಏನು ಕ್ರಮ ಕೈಗೊಳ್ಳುತ್ತೀರಿ?
ನಮ್ಮ ಕ್ಷೇತ್ರ ಜಾಜೂರು ವೇದಾವತಿ ನದಿ ದಂಡೆ ಮೇಲಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವುದು ಸುಲಭವಾಗಿದೆ. ಯಾವ ಹಳ್ಳಿಗಳಲ್ಲಿ ಕುಡಿಯುವ ನೀರಿನ ಬವಣೆ ಇದೆ ಎಂಬುದನ್ನು ಈಗಾಗಲೇ ತಿಳಿದಿದ್ದೇನೆ. ಮುಂದಿನ ದಿನಗಳಲ್ಲಿ ಈ ಕಾರ್ಯಕ್ಕೆ ಮುಂದಾಗುತ್ತೇನೆ. ಅಧಿಕಾರಿಗಳ ಜತೆ ಚರ್ಚಿಸಿ ಸೂಕ್ತ ಯೋಜನೆ ರೂಪಿಸುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.